ಬೀದರ್ | ಭಾಲ್ಕಿ ಪುರಸಭೆಯಲ್ಲಿ ಅವ್ಯವಹಾರ : ಸಂಗಮೇಶ್ ಭೂರೆ ಆರೋಪ
ಬೀದರ್ : ಭಾಲ್ಕಿ ಪುರಸಭೆಯ ಮುಖ್ಯಾಧಿಕಾರಿ ಸಂಗಮೇಶ್ ಕಾರಬಾರಿ ಅವರು ಅವ್ಯವಹಾರ ನಡೆಸಿದ್ದು, ಈ ಕುರಿತು ತನಿಖೆ ನಡೆಸಿ ಅವರನ್ನು ಅಮಾನತು ಮಾಡಬೇಕು ಎಂದು ಯುವ ಕ್ರಾಂತಿ ಸಂಘಟನೆಯ ಜಿಲ್ಲಾಧ್ಯಕ್ಷ ಸಂಗಮೇಶ್ ಭೂರೆ ಒತ್ತಾಯಿಸಿದ್ದಾರೆ.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಗಮೇಶ್ ಭೂರೆ, ಭಾಲ್ಕಿ ಪುರಸಭೆಯಲ್ಲಿ ಒಬ್ಬೊಬ್ಬರ ಹೆಸರ ಮೇಲೆ 40 ರಿಂದ 50 ನಕಲಿ ಖಾತೆಗಳು ಸೃಷ್ಟಿ ಮಾಡಿದ್ದಾರೆ. ಎಜೇಂಟ್ ಗಳಿಗೆ ನೇಮಿಸಿ ಒಂದು ಖಾತೆಗೆ ಸುಮಾರು 40 ರಿಂದ 50 ಸಾವಿರ ರೂ. ಪಡೆಯುತಿದ್ದಾರೆ. ನಿಜವಾದ ಖಾತೆ ಪಡೆಯಬೇಕಾದರೆ ತಿಂಗಳುಗಟ್ಟಲೆ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕಸ ವಿಲೇವಾರಿ ಮಾಡುವುದಕ್ಕಾಗಿ 1 ಕೋಟಿ 65 ಲಕ್ಷ ರೂ. ಅನುದಾನ ಬಂದಿದೆ. ಅದು ಎಷ್ಟೇ ಹಣ ಬಂದರೂ ಕೂಡ ಟೆಂಡರ್ ಕರೆಯಬೇಕು. ಆದರೆ ಟೆಂಡರ್ ಕರೆಯದೆ ತಮಗೆ ಬೇಕಾದವರಿಗೆ ನೀಡುತ್ತಿದ್ದಾರೆ. 70 ರಿಂದ 80ರೂ.ಗೆ ಸಿಗುವ ಕಸ ವಿಲೇವಾರಿ ಮಾಡುವ ಬಕೆಟ್ ಗೆ 1 ಸಾವಿರವರೆಗೆ ಬಿಲ್ಲು ನೀಡಿ ಹಣ ದೋಚಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪುರಸಭೆ ಮುಖ್ಯಾಧಿಕಾರಿ ಸಂಗಮೇಶ್ ಕಾರಬಾರಿ ಅವರ ಮೂಲ ಹುದ್ದೆ ಪರಿಸರ ಇಂಜಿನಿಯರ್ ಆಗಿದೆ. ಹೈಕೋರ್ಟ್ ಆದೇಶದ ಪ್ರಕಾರ ಅವರು ಆ ಹುದ್ದೆಯಲ್ಲಿ ಮುಂದುವರಿಯಲು ಸಾಧ್ಯವಿಲ್ಲ. ಆದರೂ ಅವರು ಆ ಹುದ್ದೆಯಲ್ಲಿ ಮುಂದುವರಿದಿದ್ದಾರೆ. ಅವರ ಹಿಂದೆ ಕಾಣದ ಕೈಗಳು ಎಂದರೆ ಅಲ್ಲಿನ ಶಾಸಕರ ಕೈವಾಡ ಇದೆ ಎಂದು ಆರೋಪಿಸಿದರು.
ಈ ಕುರಿತು ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಯನ್ನು ಅಮಾನತು ಮಾಡದಿದ್ದರೆ ಪ್ರತಿಭಟನೆ ನಡೆಸುವುದಾಗಿ ಸಂಗಮೇಶ್ ಭೂರೆ ಹೇಳಿದ್ದಾರೆ.
ಈ ಸಂದರ್ಭದಲ್ಲಿ ರಾಜಕುಮಾರ್ ಹಳ್ಳಿಖೆಡ್ಕರ್ ಜೊತೆಗಿದ್ದರು.