ಬೀದರ್ | ನರ್ಸಿಂಗ್ ಪರೀಕ್ಷೆಯಲ್ಲಿನ ನಕಲು ತಡೆಯಲು ಮನವಿ
ಬೀದರ್ : ಜಿಲ್ಲಾದ್ಯಂತ ನಡೆದಿರುವ ನರ್ಸಿಂಗ್ ಪರೀಕ್ಷೆಯ ಬಹುತೇಕ ನರ್ಸಿಂಗ್ ಸಂಸ್ಥೆಗಳ ಕೇಂದ್ರಗಳಲ್ಲಿ ಬೇಕಾಬಿಟ್ಟಿಯಾಗಿ ನಕಲು (ಕಾಪಿ) ನಡೆದಿರುತ್ತದೆ. ಇದನ್ನು ತಡೆಯಬೇಕು ಎಂದು ಕಲ್ಯಾಣ ಕರ್ನಾಟಕ ನಿರ್ಮಾಣ ಸೇನೆಯ ಜಿಲ್ಲಾಧ್ಯಕ್ಷ ಡಾ.ಜೇಮ್ಸ್ ಅವರು ಮನವಿ ಮಾಡಿದ್ದಾರೆ.
ಇಂದು ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಕೆಲವು ನರ್ಸಿಂಗ್ ಸಂಸ್ಥೆಗಳು ಶಿಕ್ಷಣವನ್ನು ವ್ಯಾಪಾರಿಕರಣ ಮಾಡಿಕೊಂಡಿವೆ. ಹೊರ ರಾಜ್ಯದ ವಿದ್ಯಾರ್ಥಿಗಳನ್ನು ತಮ್ಮ ಸಂಸ್ಥೆಯಲ್ಲಿ ಹೆಸರಿಗೆ ಮಾತ್ರ ಪ್ರವೇಶಾತಿ ನೀಡಿ, ಅಂತಹ ವಿದ್ಯಾರ್ಥಿಗಳಿಗೆ ಪರೀಕ್ಷೆ ಸಮಯದಲ್ಲಿ ಮಾತ್ರ ಕರೆಸಿ, ಪರೀಕ್ಷಾ ಕೇಂದ್ರಗಳಲ್ಲಿ ಸಂಸ್ಥೆಯ ಸಿಬ್ಬಂದಿಗಳ ಸಹಾಯದಿಂದ ನಕಲು (ಕಾಪಿ) ಮಾಡಲು ಅನುಕೂಲ ಮಾಡಿಕೊಡುತ್ತಿವೆ. ಇದರಿಂದ ಕಷ್ಟಪಟ್ಟು ಓದಿರುವ ಅರ್ಹ ವಿದ್ಯಾರ್ಥಿಗಳು ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಹಾಗಾಗಿ ಓದಿದವರಿಗೆ ಅನ್ಯಾಯವಾಗುತ್ತಿದೆ ಎಂದಿದ್ದಾರೆ.
ಹಿಂದಿನ ಜಿಲ್ಲಾಧಿಕಾರಿಗಳು ಜಿಲ್ಲೆಯಲ್ಲಿ ನಡೆಯುತ್ತಿರುವ ನರ್ಸಿಂಗ್ ಪರೀಕ್ಷೆಯ ಹಲವು ಕೇಂದ್ರಗಳಲ್ಲಿ ನಕಲು ಮಾಡುತ್ತಿರುವ ವಿಷಯ ತಿಳಿದು, ತಕ್ಷಣವೇ ನರ್ಸಿಂಗ್ ಪರೀಕ್ಷಾ ಕೇಂದ್ರಗಳು ಬದಲಾವಣೆ ಮಾಡುವ ಮೂಲಕ ನಕಲು ತಡೆಯುವಲ್ಲಿ ಸಫಲರಾಗಿದ್ದರು. ತಾವು ಕೂಡ ನರ್ಸಿಂಗ್ ಪರೀಕ್ಷೆಯಲ್ಲಿ ಅಕ್ರಮವಾಗಿ ನಕಲು ನಡೆಸಿರುವ ಸಂಸ್ಥೆಗಳ ವಿರುದ್ಧ ಕ್ರಮ ಜರುಗಿಸಿ, ಮರು ಪರೀಕ್ಷೆ ನಡೆಸಿ ಅರ್ಹ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಿ ಕೊಡಬೇಕು ಎಂದು ಮನವಿ ಮಾಡಿದ್ದಾರೆ.