ಬೀದರ್ | ಸಿಜೆಐ ಗವಾಯಿ ಅವರ ಮೇಲೆ ಶೂ ಎಸೆದ ವಕೀಲನ ಪ್ರತಿಕೃತಿ ದಹಿಸಿ ಪ್ರತಿಭಟನೆ
ಬೀದರ್ : ಸಿಜೆಐ ಬಿ.ಆರ್ ಗವಾಯಿ ಅವರ ಮೇಲೆ ಶೂ ಎಸೆದ ವಕೀಲನ ಪ್ರತಿಕೃತಿ ದಹಿಸಿ ನಗರದ ಅಂಬೇಡ್ಕರ್ ವೃತ್ತದಲ್ಲಿ ಸಂವಿಧಾನ ಸಂರಕ್ಷಣಾ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.
ಗುರುವಾರ ಅಂಬೇಡ್ಕರ್ ವೃತ್ತದಲ್ಲಿ ನೂರಾರು ಸಂಖ್ಯೆಯ ಜನರು ಪ್ರತಿಭಟನೆಯಲ್ಲಿ ಭಾಗವಹಿಸಿ, ವಕೀಲನ ವಿರುದ್ಧ ಘೋಷಣೆಗಳು ಕೂಗಿದರು. ವಕೀಲನ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು, ವಕೀಲನ ಪ್ರತಿಕೃತಿ ದಹಿಸಿ ಆಕ್ರೋಶ ಹೊರಹಾಕಿದರು.
ರಾಷ್ಟ್ರಪತಿಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಸೋಮವಾರ ಸುಪ್ರೀಂ ಕೋರ್ಟ್ ಕಲಾಪದ ವೇಳೆ ವಕೀಲನೊಬ್ಬ ಮುಖ್ಯ ನ್ಯಾಯಮೂರ್ತಿಯವರನ್ನು ಗುರಿಯಾಗಿಸಿ ಶೂ ಎಸೆದ ಘಟನೆ ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಒಂದು ಅಕ್ಷಮ್ಯ ಅಪರಾಧವಾಗಿದೆ. ವಕೀಲ ರಾಕೇಶ್ ಕಿಶೋರ್ ಈ ಘಟನೆ ನಡೆದ ಬಳಿಕ ಸನಾತನ ಧರ್ಮದ ಮೇಲಿನ ಅವಮಾನವನ್ನು ಹಿಂದುಸ್ಥಾನವು ಸಹಿಸುವುದಿಲ್ಲ ಎಂದು ಕೂಗಾಡಿದ್ದಾನೆ. ಅವನ ಈ ಕೂಗಾಟಕ್ಕೆ ಸನಾತನ ಧರ್ಮದ ಪ್ರತಿಪಾದನೆ ಮಾಡುವ ಆರ್ ಎಸ್ ಎಸ್ ಮತ್ತು ಬಿಜೆಪಿಗಳ ಮಾನವ ವಿರೋಧಿ ಸಿದ್ಧಾಂತವೇ ಪ್ರೇರಣೆಯಾಗಿದೆ ಎಂದು ಆರೋಪಿಸಲಾಗಿದೆ.
ಭಾರತವನ್ನು ಸನಾತನ ಧರ್ಮದ ಆಧಾರದಲ್ಲಿ ಕಟ್ಟಲು ಹೊರಟಿರುವ ಬಿಜೆಪಿಯ ಅಜೆಂಡಾ, ಭಾರತ ದೇಶದ ಸಂವಿಧಾನವನ್ನು ಬುಡಮೇಲು ಮಾಡಿ ಸನಾತನ ಧರ್ಮದ ಶ್ರೇಣಿಕೃತ ಸಮಾಜವನ್ನು ನಮ್ಮ ದೇಶದಲ್ಲಿ ಭದ್ರಪಡಿಸಲು ಹೊರಟಿದೆ. ಇದು ಭಾರತದ ಭವಿಶ್ಯಕ್ಕೆ ಅಪಾಯಕಾರಿ ನಡೆಯಾಗಿದೆ. ನಮ್ಮ ದೇಶದ ಸಂವಿಧಾನವನ್ನು ನಾಶಗೊಳಿಸಿ, ಮನುವಾದ ಪ್ರೇರಿತ ಶೋಷಿತ ಸಮಾಜ ನಿರ್ಮಾಣದ ಮುನ್ಸೂಚನೆಯಾಗಿದೆ ಎಂದು ದೂರಲಾಗಿದೆ.
ದಲಿತ ಸಮುದಾಯಕ್ಕೆ ಸೇರಿದ, ಅವಕಾಶ ವಂಚಿತ ವ್ಯಕ್ತಿಯೊಬ್ಬರು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಾಗಿದ್ದು, ಸನಾತನವಾದಿಗಳಿಗೆ ನುಂಗಲಾರದ ತುತ್ತಾಗಿದೆ. ಇದನ್ನು ಸಹಿಸಲಾರದ ಜಾತಿಗ್ರಸ್ತ ಸನಾತನ ಮನಸ್ಸುಗಳು ಇಂತಹ ಕೃತ್ಯವೆಸಗುತ್ತಿವೆ. ಇಂತಹ ನೀಚ ಮನಸ್ಥಿತಿ, ಸಿದ್ಧಾಂತವನ್ನು ದಿನನಿತ್ಯ ಬೋಧಿಸುತ್ತಿರುವ ಸಂಘಪರಿವಾರ ದೇಶದ ಸಂವಿಧಾನ ವಿರೋಧಿ ಕೆಲಸಗಳನ್ನು ಎಗ್ಗಿಲ್ಲದೆ ಮಾಡುತ್ತಿದೆ ಎಂದು ಆಕ್ರೋಶ ಹೊರಹಾಕಲಾಗಿದೆ.
ಈ ಸಂದರ್ಭದಲ್ಲಿ ಅನೀಲಕುಮಾರ್ ಬೆಲ್ದಾರ್, ಅಮೃತರಾವ್ ಚಿಮಕೊಡೆ, ಗೌಸೊದ್ದಿನ್, ಮಾಜಿ ಎಂಎಲ್ಸಿಗಳಾದ ಅರವಿಂದಕುಮಾರ್ ಅರಳಿ, ಕೆ.ಪುಂಡಳಿಕರಾವ್, ಪಂಡಿತರಾವ್ ಚಿದ್ರಿ, ಆಸಿಫೊದ್ದಿನ್, ಶ್ರೀಪತರಾವ್ ದೀನೆ, ಪ್ರದೀಪ್ ನಾಟೆಕರ್, ರಮೇಶ್ ಡಾಕುಳಗಿ, ಶಿವಕುಮಾರ್ ನೀಲಿಕಟ್ಟಿ, ಶ್ರೀಪತರಾವ್ ದೀನೆ, ಸರಫರಾಜ್ ಹಾಸ್ಮಿ, ಅಬ್ದುಲ್ ಮನ್ನಾನಸೇಠ್, ಬಾಬುರಾವ ಹೊನ್ನಾ, ಮಹಮ್ಮದ್ ನಿಜಾಮೊದ್ದಿನ್, ಜಗದೀಶ್ ಬಿರಾದಾರ್, ಮನ್ಸೂರ್ ಖಾದ್ರಿ ಹಾಗೂ ಸುರ್ಯಕಾಂತ್ ಸಾದೂರೆ ಸೇರಿದಂತೆ ಹಿಂದುಳಿದ ವರ್ಗಗಳ, ಗೊಂಡ ಪರ, ಅಲ್ಪ ಸಂಖ್ಯಾತರ ಪದಾಧಿಕಾರಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.