ಬೀದರ್ | ಆರ್‌ಟಿಒ ಅಧಿಕಾರಿಯ ವರ್ಗಾವಣೆಗೆ ಒತ್ತಾಯಿಸಿ ಪ್ರತಿಭಟನೆ
ಬೀದರ್ : ಆರ್‌ಟಿಒ ಅಧಿಕಾರಿ ಜಿ.ಕೆ.ಬಿರಾದಾರ್ ಅವರನ್ನು ವರ್ಗಾವಣೆ ಮಡಾವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ ನಡೆಸಲಾಯಿತು.
ಇಂದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಜಿ.ಕೆ.ಬಿರಾದಾರ್ ಅವರು ಬಸವಕಲ್ಯಾಣ ತಾಲ್ಲೂಕಿನಲ್ಲಿ ಮೂಲ ಹುದ್ದೆಯಲ್ಲಿದ್ದಾರೆ. ಆದರೆ ಅವರು ಹುಮನಾಬಾದ್ ಮತ್ತು ಬೀದರ್ ಆರ್ ಟಿ ಓ ಹುದ್ದೆಯ ಚಾರ್ಜ್ ಕೂಡ ಇವರೇ ಪಡೆದು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ಈ ಮೂರು ಸ್ಥಳಗಳಲ್ಲಿ ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಕರ್ತವ್ಯದ ಅವಧಿ ಮುಗಿದರೂ ಕೂಡ ಬಯೋಮೆಟ್ರಿಕ್ ಮೂಲಕ ಸಹಿ ಹಾಕುತ್ತಿದ್ದಾರೆ ಎಂದು ದೂರಲಾಗಿದೆ.
ಲಾರಿ, ಸರಕು ಸಾಗಾಣಿಕೆ ಇನ್ನಿತರ ವಾಹನ ಸವಾರರಿಂದ ಸಿಬ್ಬಂದಿ ಮೂಲಕ ಅವರು ಹಣ ವಸೂಲಿ ಮಾಡುತ್ತಿದ್ದಾರೆ. ಸಾರ್ವಜನಿಕರು ಡ್ರೈವಿಂಗ್ ಲೈಸನ್ಸ್ ಪಡೆಯಲು ನೇರವಾಗಿ ಅರ್ಜಿ ಸಲ್ಲಿಸಿದ್ದರೆ ಅವರ ಅರ್ಜಿ ರಿಜೆಕ್ಟ್ ಮಾಡುತ್ತಿದ್ದಾರೆ. ಹಾಗೆಯೇ ಲೈಸನ್ಸ್ ಪಡೆಯಲು ಯಾವುದೇ ಮೋಟಾರು ವಾಹನ ತರಬೇತಿ ಶಾಲೆ (ಡ್ರೈವಿಂಗ್ ಸ್ಕೂಲ್) ಅಥವಾ ಮಧ್ಯವರ್ತಿಗಳ ಮೂಲಕ ಅರ್ಜಿ ಸಲ್ಲಿಸಿದವರಿಗೆ ಲೈಸನ್ಸ್ ನೀಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಇದರಿಂದಾಗಿ ಆರ್.ಟಿ.ಒ ಅಧಿಕಾರಿ ಜಿ.ಕೆ.ಬಿರಾದಾರ್ ಅವರು ಸರಿಯಾಗಿ ಕರ್ತವ್ಯ ನೀರ್ವಹಿಸುತ್ತಿಲ್ಲ ಎನ್ನುವುದು ಸಾಬೀತಾಗುತ್ತದೆ. ಹಾಗಾಗಿ ಅವರನ್ನು ಜಿಲ್ಲೆಯಿಂದ ಬೇರೆ ಕಡೆಗೆ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ವಿ.ಎಲ್. ಮಾರ್ಟಿನ್, ಯುವ ಘಟಕದ ಜಿಲ್ಲಾಧ್ಯಕ್ಷ ಮೋಜಸ್ ನಿರ್ಣಾಕರ್, ಕೃಷ್ಣಾ ವಾರಿಕ್, ವಿನೋದ್ ಚಿಟ್ಟಾ, ರವಿ ಯಾಕತಪೂರ್, ಅಬ್ರಹಂ ಹಾಗೂ ಜಾನ್ ವೇಸ್ಲಿ ಸೇರಿದಂತೆ ಅನೇಕರು ಇದ್ದರು.