ಬೀದರ್ | ಜಿಲ್ಲೆಯ ಆರು ಮಂದಿ ಸ್ವ-ಇಚ್ಛೆಯಿಂದ ದೇಹದಾನಕ್ಕೆ ಒಪ್ಪಿಗೆ
ಬೀದರ್ : ಜಿಲ್ಲೆಯ ಆರು ಜನರು ಸ್ವ-ಇಚ್ಛೆಯಿಂದ ಬೀದರ್ ವ್ಯೆದ್ಯಕೀಯ ವಿಜ್ಞಾನದ ಸಂಸ್ಥೆಯಲ್ಲಿನ ವಿದ್ಯಾರ್ಥಿಗಳ ಅಧ್ಯಯನಕ್ಕಾಗಿ ತಮ್ಮ ಮರಣದ ನಂತರ ದೇಹದಾನ ಮಾಡಲಿದ್ದಾರೆ ಎಂದು ಅಂಗ ರಚನಾಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ.ಸಂದೀಪ್ ದೇಶಮುಖ ಅವರು ತಿಳಿಸಿದ್ದಾರೆ.
ಶಿವರಾಜ್ ಎಸ್.ನಿಲಗೆ, ಬಂಡೆಪ್ಪಾ ಎಮ್.ಬಚ್ಚನ್, ಲಕ್ಷ್ಮೀ ಘಾಳೆಪ್ಪಾ, ಲತಾ ಚಂದ್ರಕಾಂತ್ ಹಾಗೂ ದಂಪತಿಗಳಾದ ಬಸವರಾಜ್ ಕೆ.ಪಾಟೀಲ್ ಮತ್ತು ಗೌರಮ್ಮ ಪಾಟೀಲ್ ಅವರು ದೇಹದಾನ ಮಾಡಲಿರುವ ದಾನಿಗಳಾಗಿದ್ದಾರೆ.
ದೇಹದಾನ ಒಂದು ಪವಿತ್ರ ದಾನವಾಗಿದೆ. ಮನುಷ್ಯನ ದೇಹವನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಲು ಅನುಕೂಲ ಮಾಡಿಕೊಡುತ್ತದೆ. ಮರಣದ ನಂತರ ದೇಹ ಮಣ್ಣಾಗುವ ಬದಲು ಅಂಗರಚನಾಶಾಸ್ತ್ರದ ಎಂಬಿಬಿಎಸ್ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳ ಅಧ್ಯಯನಕ್ಕೆ ನೀಡಿರುವುದು ಇವರ ಒಳ್ಳೆಯ ನಿರ್ಧಾರವಾಗಿದೆ. ವ್ಯಕ್ತಿ ತಮ್ಮ ದೇಹವನ್ನು ಸ್ವ ಇಚ್ಛೆಯಿಂದ ಯಾವುದೇ ಸರಕಾರಿ ವ್ಯೆದ್ಯಕೀಯ ಕಾಲೇಜುಗಳಿಗೆ ದೇಹದಾನ ಮಾಡಬಹುದು ಎಂದು ಅವರು ಹೇಳಿದ್ದಾರೆ.
ದೇಹದಾನದ ಬಗ್ಗೆ ಪತ್ರಿಕೆಯಲ್ಲಿ ಓದಿ, ಸ್ವಯಂ ಪ್ರೇರಿತರಾಗಿ ದೇಹದಾನ ಮಾಡಲು ಇಚ್ಛಿಸಿರುವ ಇವರಿಗೆ ಪ್ರಮಾಣ ಪತ್ರ ನೀಡಿ ಸನ್ಮಾನ ಮಾಡಲಾಗಿದೆ. ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕ ಡಾ.ಶಿವಕುಮಾರ್ ಶೇಟಕಾರ್, ಪ್ರಿನ್ಸಿಪಾಲ ಡಾ.ರಾಜೇಶ್ ಪಾರ್, ಡಾ.ಸುನಿಲ್ ತಾಪಸೆ ಹಾಗೂ ವಿಭಾಗದ ಮುಖ್ಯಸ್ಥರು ಇವರನ್ನು ಧನ್ಯವಾದ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಡಾ.ಡಿ.ಬಿ.ಪಾಟಿಲ್, ಡಾ.ವರುಷಾಲಿ, ಪಿ.ಜಿ ವಿದ್ಯಾರ್ಥಿಗಳಾದ ಡಾ ಆಸಮಾ, ಡಾ.ದಿವ್ಯಜೋತಿ, ಡಾ.ರಾಜೇಶ್ ಪಾಟೀಲ್, ದೇಹದಾನದ ಸಂಚಾಲಕ ನಾಗೇಂದ್ರ ಕಮಲಾಪುರೆೆ, ಶಿವಪುತ್ರ ಮುತ್ತತ್ತಿ ಹಾಗೂ ಸಿಬ್ಬಂದಿ ವರ್ಗ, ವ್ಯೆದ್ಯಕೀಯ ವಿದ್ಯಾರ್ಥಿಗಳು ಸೇರಿದಂತೆ ಇತರರು ಭಾಗವಹಿಸಿದ್ದರು.