ಬೀದರ್ | ವಿದ್ಯಾರ್ಥಿಗಳು ಪುಸ್ತಕ ಓದಿ ಜ್ಞಾನ ಸಂಪಾದಿಸಿ : ಸಚಿವ ಈಶ್ವರ್ ಖಂಡ್ರೆ
ಬೀದರ್ : ವಿದ್ಯಾರ್ಥಿಗಳು ದಿನನಿತ್ಯ ಗ್ರಂಥಾಲಯದಲ್ಲಿನ ಪುಸ್ತಕ ಓದಿ ಜ್ಞಾನ ಸಂಪಾದಿಸುವ ಮೂಲಕ ಜೀವನದಲ್ಲಿ ಯಶಸ್ಸು ಸಾಧಿಸಬೇಕು ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಹೇಳಿದರು.
ಇಂದು ನಗರದಲ್ಲಿ 2022-23ನೇ ಸಾಲಿನ ಕೆ ಕೆ ಆರ್ ಡಿ ಬಿ ಮ್ಯಾಕ್ರೊ ಯೋಜನೆ ಅಡಿಯಲ್ಲಿ 2.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಜಿಲ್ಲಾ ಕೇಂದ್ರ ಗ್ರಂಥಾಲಯದ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.
ಜ್ಞಾನವೇ ಸಂಪತ್ತು. ಜ್ಞಾನ ಗಳಿಸಲು ವಿದ್ಯಾರ್ಥಿಗಳು ಪುಸ್ತಕ, ಪತ್ರಿಕೆ, ನಿಯತಕಾಲಿಕೆಗಳನ್ನು ಓದಬೇಕು. ಶೈಕ್ಷಣಿಕ ಅಭ್ಯಾಸದ ಜೊತೆ ಇತರೇ ಜ್ಞಾನವನ್ನು ಸಹ ಗಳಿಸಬೇಕು. ಗ್ರಂಥಾಲಯದಲ್ಲಿ ಒಟ್ಟು 10 ಲಕ್ಷ ರೂ. ವಿವಿಧ ವಿಷಯಗಳ ಪುಸ್ತಕಗಳಿದ್ದು, ತಾಲ್ಲೂಕು ಮಟ್ಟದ ಗ್ರಂಥಾಲಯಗಳಿಗೆ ಕಳಿಸಲಾಗುತ್ತದೆ ಎಂದರು.
ಇಂದು ಜಗತ್ತು ಒಂದು ಹಳ್ಳಿಯಾಗಿದೆ. ಅಧುನಿಕ ವಿಜ್ಞಾನ, ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನದ ಪರಿಣಾಮವಾಗಿ ಯುವಕರು ಸಾಮಾಜಿಕ ಜಾಲತಾಣದಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಫೇಸ್ಬುಕ್, ಇನಸ್ಟಾಗ್ರಾಂ, ಟ್ವಿಟಿರ್ ಗಳಲ್ಲಿ ರೀಲ್ಸ್ ಗಳನ್ನೇ ವೀಕ್ಷಿಸುತ್ತಿದ್ದಾರೆ. ಇದು ಆರೋಗ್ಯಕ್ಕೆ ಹಾನಿಕಾರಕ. ಪುಸ್ತಕ ಓದುವುದರಿಂದ ಹೆಚ್ಚಿನ ಜ್ಞಾನ ಗಳಿಸಿ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಪ್ರತಿದಿನ 500-600 ವಿದ್ಯಾರ್ಥಿಗಳು ಗ್ರಂಥಾಲಯಕ್ಕೆ ಭೇಟಿ ನೀಡುತ್ತಾರೆ. ಮುಂಬರುವ ದಿನಗಳಲ್ಲಿ ಇಲ್ಲಿ ಡಿಜಿಟಲ್ ಗ್ರಂಥಾಲಯ ಸ್ಥಾಪಿಸಲು ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪೌರಾಡಳಿತ ಹಾಗೂ ಹಜ್ ಸಚಿವ ರಹೀಮ್ ಖಾನ್, ನಗರಸಭೆ ಅಧ್ಯಕ್ಷ ಮಹ್ಮದ್ ಗೌಸ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಬದೋಲೆ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಶಿವಕುಮಾರ್ ಶಾಮಶೆಟ್ಟಿ, ಜಿಲ್ಲಾ ಕೇಂದ್ರದ ಮುಖ್ಯ ಗ್ರಂಥಾಲಯ ಅಧಿಕಾರಿ ಸಿದ್ದಾರ್ಥ ಭಾವಿಕಟ್ಟಿ ಹಾಗೂ ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯ ಅಧಿಕಾರಿ ಸವಿತಾ ಎನ್.ಎಮ್ ಸೇರಿದಂತೆ ಇತರ ಸಿಬ್ಬಂದಿ ಉಪಸ್ಥಿತರಿದ್ದರು.