×
Ad

ಬೀದರ್ | ಪೌರಕಾರ್ಮಿಕರ ನೇಮಕಾತಿಯಲ್ಲಿ ಆಕ್ರಮ ಎಸಗಿದ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಿ : ಕುಂದನ್ ಐನಳ್ಳಿ

Update: 2025-02-21 16:21 IST

ಬೀದರ್ : ಚಿಟಗುಪ್ಪ ಪುರಸಭೆಯಲ್ಲಿ ಆರು ಜನ ನಕಲಿ ಪೌರ ಕಾರ್ಮಿಕರನ್ನು ನೇಮಕ ಮಾಡಿ ಸರ್ಕಾರಕ್ಕೆ ವಂಚಿಸಿದ ಪುರಸಭೆ ಮುಖ್ಯಾಧಿಕಾರಿ ಮತ್ತು ಪ್ರಥಮ ದರ್ಜೆ ಸಹಾಯಕರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಕುಂದನ್ ಐನಳ್ಳಿ ಆಗ್ರಹಿಸಿದ್ದಾರೆ.

ಇಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪುರಸಭೆ ಮುಖ್ಯಾಧಿಕಾರಿ ಹುಸಾಮುದ್ದಿನ್ ಬಾಬಾ ಹಾಗೂ ಸಿಬ್ಬಂದಿ ಚಿದಾನಂದ್ ಪತ್ರಿ ಅವರು 2018 ರಲ್ಲಿ 44 ಜನ ಪೌರ ಕಾರ್ಮಿಕರ ನೇಮಕಾತಿ ಮಾಡಿಕೊಂಡಿದ್ದರು. ಅದರಲ್ಲಿ 19 ಜನರ ವಯಸ್ಸು ಕಾನೂನಿನ ಅಡಿಯಲ್ಲಿ ಬರುವುದಿಲ್ಲ ಎಂದು ನೇಮಕಾತಿಯಿಂದ ಕೈ ಬಿಟ್ಟಿದ್ದರು. ನಂತರ ಸರ್ಕಾರದ ಹೊಸ ಸುತ್ತೋಲೆ ಪ್ರಕಾರ 2023 ರಲ್ಲಿ ಆ 19 ಜನರನ್ನು ಪುನಃ ನೇಮಕ ಮಾಡಿಕೊಂಡಿದ್ದಾರೆ. ಅದರಲ್ಲಿ 13 ಜನರ ದಾಖಲಾತಿಗಳು ಕ್ರಮಬದ್ಧವಾಗಿರುತ್ತವೆ. ಆದರೆ ಉಳಿದ 6 ಜನರ ವಯಸ್ಸಿನಲ್ಲಿ ಲೋಪವಿದೆ ಎಂದಿದ್ದಾರೆ.

ಆ 6 ಜನರ ವಯಸ್ಸು 2018 ರಲ್ಲಿ ಒಂದು ನಮೂದಾಗಿತ್ತು. 2023-24ನೇ ಸಾಲಿನಲ್ಲಿ ಮತ್ತೊಂದು ವಯಸ್ಸು ನಮೂದಿಸಿ ಅವರನ್ನು ನೇಮಕಾತಿ ಮಾಡಲಾಗಿದೆ. ಈ ಆರೂ ಜನರ ನೇಮಕ ಸಂಪೂರ್ಣ ಆಕ್ರಮವಾಗಿದೆ. ಪುರಸಭೆ ಸಿಓ ಹಾಗೂ ಎಫ್ ಡಿ ಸಿ ಸರ್ಕಾರಕ್ಕೆ ಮೋಸ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಈ ಮೇಲೆ ತಿಳಿಸಿದ ಆರೂ ಜನರ ಶಾಲಾ ದಾಖಲಾತಿ ಪರಿಶೀಲಿಸಿದಾಗ ನಿಯಮಾನುಸಾರ ಶೈಕ್ಷಣಿಕ ಅರ್ಹತೆ ಹೊಂದದೆ ಅವರ ನಕಲಿ ವರ್ಗಾವಣೆ ಪ್ರಮಾಣ ಪತ್ರ ಸೃಷ್ಟಿಸಲಾಗಿದೆ. ಈ ವಿಚಾರವಾಗಿ ಈಗಾಗಲೇ ರಾಜ್ಯ ಸರ್ಕಾರದ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕ, ಪೌರಾಡಳಿತ ಸಚಿವ ರಹಿಂ ಖಾನ್, ಹಿಂದಿನ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಬಸವಕಲ್ಯಾಣ ಸಹಾಯಕ ಆಯುಕ್ತ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮೋತಿಲಾಲ್ ಲಮಾಣಿ ಇವರಿಗೆಲ್ಲ ಈ ಕುರಿತು ದೂರು ಸಲ್ಲಿಸಿದರೂ ಸಹ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಹೇಳಿದ್ದಾರೆ.

ನೇಮಕಾತಿಯಲ್ಲಿ ಆಕ್ರಮ ಎಸಗಿದ ಪುರಸಭೆ ಮುಖ್ಯಾಧಿಕಾರಿ ಮತ್ತು ಎಫ್ ಡಿ ಸಿ ಅವರ ಮೇಲೆ ಕಾನೂನು ಕ್ರಮ ಕೈಗೊಂಡು, ಆ ಆರು ಜನ ಪೌರ ಕಾರ್ಮಿಕರ ನೇಮಕಾತಿಯನ್ನು ರದ್ದುಪಡಿಸಬೇಕು ಎಂದು ಅವರು ಒತ್ತಾಯಿಸಿದರು.

ಈ ವಿಚಾರದಲ್ಲಿ ಮೌನ ವಹಿಸಿದ್ದ ಪೌರಾಡಳಿತ ಸಚಿವ ರಹಿಂ ಖಾನ್ ಅವರ ವಿರುದ್ಧವೂ ವಿಧಾನಸಭೆ ಸ್ಪೀಕರ್ ಯು.ಟಿ ಖಾದರ್ ಅವರಿಗೆ ದೂರು ಸಲ್ಲಿಸುತ್ತೇನೆ ಎಂದು ತಿಳಿಸಿದ ಅವರು, ಈ ನಕಲಿ ಪೌರ ಕಾರ್ಮಿಕರ ವಿರುದ್ಧ ಹಾಗೂ ನೇಮಕಾತಿಗೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳದಿದ್ದಲ್ಲಿ ಉಚ್ಛ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವುದಾಗಿ ಅವರು ಎಚ್ಚರಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News