×
Ad

ಬೀದರ್ | ದೇಶದ ಸಂಸ್ಕೃತಿ, ಅಭಿವೃದ್ಧಿಗೆ ಅಲೆಮಾರಿ ಸಮುದಾಯದ ಕೊಡುಗೆ ಅಪಾರ : ಪಲ್ಲವಿ ಜಿ

Update: 2025-04-19 19:53 IST

ಬೀದರ್ : ನಮ್ಮ ದೇಶದ ಸಾಂಸ್ಕೃತಿಕ ವೈಭವ, ಜನಜೀವನದ ಅಭಿವೃದ್ಧಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಅಲೆಮಾರಿ ಜನಾಂಗಗಳ ಕೊಡುಗೆ ಸ್ಮರಣೀಯವಾಗಿದೆ ಎಂದು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ. ಅವರು ಹೇಳಿದರು.

ಇಂದು ಬೀದರ್ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಬೀದರ್ ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಅಲೆಮಾರಿ ಸಮುದಾಯಗಳ ಸಮಸ್ಯೆ, ಸವಾಲುಗಳು ಮತ್ತು ಪರಿಹಾರೋಪಾಯಗಳು ಕುರಿತಾದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾವಂತರಾದವರು ತಳವರ್ಗದ, ಅಲೆಮಾರಿಗಳ ಚಿಂತನೆ ಮಾಡಬೇಕು. ಧ್ವನಿಯಿಲ್ಲದವರಿಗೆ, ಅವಕಾಶ ವಂಚಿತರಿಗೆ ಅವಕಾಶ ನೀಡುವ ಮನಸ್ಸು ಮಾಡಬೇಕು. ಸಮಾಜ ಕಲ್ಯಾಣವೆಂದರೆ ಜನರ ಕಲ್ಯಾಣ, ಸಮುದಾಯದ ಕಲ್ಯಾಣ. ಹೀಗಾಗಿ ಮೂಲನಿವಾಸಿಗಳಾದ ಪರಿಶಿಷ್ಟ ಜಾತಿ, ಪಂಗಡ ಹಾಗೂ ಅಲೆಮಾರಿಗಳ ಕುರಿತು ಅಧ್ಯಯನ ಕೈಗೊಂಡು ಅವರ ವಾಸ್ತವ ಬದುಕಿನ ಬಗ್ಗೆ ಬೆಳಕು ಚೆಲ್ಲಬೇಕಾದ ಅವಶ್ಯಕತೆಯಿದೆ ಎಂದರು.

ಬಿ.ಎಸ್.ಆನಂದಕುಮಾರ್ ಏಕಲವ್ಯ ಅವರು ಮಾತನಾಡಿ, ಅಲೆಮಾರಿಗಳು ಪ್ರಕೃತಿಯ ಆರಾಧಕರು. ಪ್ರಕೃತಿಯೊಂದಿಗೆ ಮಾತಾಡುವವರು. ಅರಣ್ಯದ ಹಕ್ಕನ್ನು ನಿಷೇಧ ಮಾಡಿದಾಗ ಅವರು ಅರಣ್ಯವನ್ನು ತೊರೆದು ದೊಂಬರಾಟ, ದುರುಗ ಮುರುಗಿ ಮುಂತಾದ ಕಾಯಕದಲ್ಲಿ ತಮ್ಮನ್ನು ಗುರುತಿಸಿಕೊಂಡು ಬಾಳಿದರು. ಇಂದು ಅಲೆಮಾರಿ ಬದುಕು ಆಧುನಿಕತೆಯ ಹೊಡೆತಕ್ಕೆ ಸಿಕ್ಕು ಮೂರಾಬಟ್ಟೆಯಾಗಿದೆ. ಅವರು ತಯಾರಿಸುವ ವಸ್ತುಗಳ ಸ್ಥಾನದಲ್ಲಿ ಇಂದು ಪ್ಲಾಸ್ಟಿಕ್, ಎಲೆಕ್ಟ್ರಿಕಲ್ ವಸ್ತುಗಳು ಆವರಿಸಿವೆ. ಹೀಗಾಗಿ ಅಲೆಮಾರಿಗಳ ಅಭಿವೃದ್ಧಿ ಬದುಕು ಕಟ್ಟಿಕೊಡುವಲ್ಲಿ ಎಲ್ಲರೂ ಪ್ರಾಮಾಣಿಕವಾಗಿ ಸಹಕಾರಿಯಾಗಬೇಕು ಎಂದರು.

ಕುಲಪತಿ ಪ್ರೊ.ಬಿ.ಎಸ್.ಬಿರಾದಾರ್ ಅವರು ಮಾತನಾಡಿ, ಅಲೆಮಾರಿ ಜನಾಂಗ ಧ್ವನಿಯಿಲ್ಲದ, ಶಕ್ತಿಯಿಲ್ಲದ ಜನಾಂಗ. ಬಡವರ ನೋವು ಅದನ್ನು ಅನುಭವಿಸಿದವರಿಗೆ ಮಾತ್ರ ಅರ್ಥವಾಗುತ್ತದೆ. ಇಂದಿಗೂ ನಿರ್ಲಕ್ಷಕ್ಕೊಳಗಾದ ಅಲೆಮಾರಿ ಸಮುದಾಯ ಸಬಲೀಕರಣಕ್ಕಾಗಿ ಎಲ್ಲರೂ ಶ್ರಮಿಸಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ಬೀದರ್ ವಿಶ್ವವಿದ್ಯಾಲಯದ ಆಡಳಿತ ಕುಲಸಚಿವೆ ಸುರೇಖಾ, ಸಿಂಡಿಕೇಟ್ ಸದಸ್ಯರಾದ ನಾಗಭೂಷಣ ಕಮಠಾಣೆ, ಶಾಂತಲಿಂಗ್ ಸಾವಳಗಿ, ಸಚಿನ್ ಶಿವರಾಜ್, ವಿಠ್ಠಲದಾಸ್ ಪ್ಯಾಗೆ, ಅಬ್ದುಲ್ ಸತ್ತಾರಸಾಬ್, ವೈಷ್ಣವಿ ಪಾಟೀಲ್, ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕಿ ಸಿಂಧು, ಮೌಲ್ಯಮಾಪನ ಕುಲಸಚಿವ ಪ್ರೊ. ಪರಮೇಶ್ವರ್ ನಾಯ್ಕ.ಟಿ., ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಡಾ.ರವೀಂದ್ರನಾಥ್ ವಿ.ಗಬಾಡಿ ಹಾಗೂ ವಿವಿಧ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ, ವಿಶ್ವವಿದ್ಯಾಲಯದ ಅಧ್ಯಾಪಕ, ಅಧ್ಯಾಪಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News