ಬೀದರ್ | ಪಾರಂಪರಿಕ ವೈದ್ಯರು ಸದಾ ಶೋಧನೆ ಮಾಡುತ್ತಾ ಉತ್ತಮ ಚಿಕಿತ್ಸೆ ನೀಡಬೇಕು : ಡಾ.ವಿ.ಪಿ.ಸಿಂಗ್
ಬೀದರ್ : ಪಾರಂಪರಿಕ ವೈದ್ಯ ಪದ್ಧತಿಗೆ ಭಾರತದಲ್ಲಿ ತನ್ನದೇ ಆದ ಶ್ರೀಮಂತ ಇತಿಹಾಸವಿದೆ. ವೈದ್ಯರು ಸದಾ ಶೋಧನೆ ಮಾಡುತ್ತಾ, ಜನತೆಗೆ ಉತ್ತಮ ಚಿಕಿತ್ಸೆ ನೀಡಬೇಕು ಎಂದು ತೋಟಗಾರಿಕಾ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ವಿ.ಪಿ.ಸಿಂಗ್ ತಿಳಿಸಿದರು.
ಇಂದು ಜಿಲ್ಲಾಡಳಿತ, ಕರ್ನಾಟಕ ಜೀವ ವೈವಿಧ್ಯ ಮಂಡಳಿ, ಪಾರಂಪರಿಕ ವೈದ್ಯ ಪರಿಷತ್ತು ಹಾಗೂ ಲಿಂಗಸುಗೂರಿನ ಕಲ್ಯಾಣ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ತು ಇವರ ಸಂಯುಕ್ತಾಶ್ರಯದಲ್ಲಿ ನಗರದ ಡಾ.ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ನಡೆಯುತ್ತಿರುವ ʼ15ನೇ ಪಾರಂಪರಿಕ ವೈದ್ಯ ಸಮ್ಮೇಳನʼದಲ್ಲಿ ಅವರು ಔಷಧಿ ಸಸ್ಯಗಳನ್ನು ಬೆಳೆಸುವುದು ಮತ್ತು ಮಾರಾಟ ಮಾಡುವುದು ಹಾಗೂ ಔಷಧಿ ಸಸ್ಯಗಳ ಸಂರಕ್ಷಣೆ ಮಾಡುವ ಬಗ್ಗೆ ಮಾತನಾಡಿದರು.
ಔಷಧಿ ಸಸ್ಯಗಳು ಬೆಳೆಸುವುದು ಮತ್ತು ಮಾರಾಟ ಮಾಡುವುದರ ಜೊತೆಗೆ ಅವುಗಳನ್ನು ಸಂರಕ್ಷಣೆ ಮಾಡಬೇಕಾದ ಅವಶ್ಯಕತೆ ಇದೆ. ಸದ್ಯ ಪಾರಂಪರಿಕ ಔಷಧ ಕ್ಷೇತ್ರವು ಒಟ್ಟು 55 ಬಿಲಿಯನ್ ಡಾಲರ್ ವ್ಯವಹಾರ ಮಾಡುತ್ತಿದೆ ಎಂದರು.
ನಾಟಿ ವೈದ್ಯರು ಹೊಸ ಹೊಸ ಸಸ್ಯಗಳಾದ ಅಶ್ವಗಂಧ, ಮುಸ್ಲಿ ಗಿಡ, ನಾಗದಾಲಿ ಗಿಡ ಹಾಗೂ ಭೋಮಿ ಆವ್ಲಾ ಇವುಗಳ ಉಪಯೋಗ ಅರಿತು ಜನತೆಗೆ ಚಿಕಿತ್ಸೆ ನೀಡಬೇಕು. ಸದಾ ಸಂಶೋಧನಾ ಶೀಲರಾಗಿ ರಾಜ್ಯದ ಪಾರಂಪರಿಕ ವೈದ್ಯರೊಂದಿಗೆ ಸಂಪರ್ಕ ಸಾಧಿಸಿ ಉತ್ತಮ ವೈದ್ಯರಾಗಿ ಹೊರಹೊಮ್ಮಬೇಕು. ಹಲವು ದೀರ್ಘಕಾಲಿಕ ಕಾಯಿಲೆಗಳನ್ನು ಹೊಡೆದೋಡಿಸುವ ಶಕ್ತಿ ಆಯುರ್ವೇದಕ್ಕೆ ಇದೆ ಎಂದು ಡಬ್ಲುಎಚ್ಓ ಅಭಿಪ್ರಾಯಪಟ್ಟಿದೆ ಎಂದು ಅವರು ತಿಳಿಸಿದರು.
ಎನ್.ಕೆ.ಜಾಬಶೆಟ್ಟಿ ಆಯುರ್ವೇದ ಮೆಡಿಕಲ್ ಕಾಲೇಜಿನ ಉಪನ್ಯಾಸಕ ಡಾ.ಧೂಳಪ್ಪ ಅವರು ಮಾತನಾಡಿ, ಔಷಧ ಇಲ್ಲದ ಸಸ್ಯಗಳಿಲ್ಲ. ಅದನ್ನು ಯುಕ್ತಿಯಿಂದ ಬಳಸಿಕೊಳ್ಳುವ ಜಾಣ್ಮೆ ಪಾರಂಪರಿಕ ವೈದ್ಯರಲ್ಲಿ ಇರಬೇಕು. ತನ್ಮೂಲಕ ಆಯುರ್ವೇದಕ್ಕೆ ವೈಜ್ಞಾನಿಕ ಪರಿವರ್ತನೆ ಕೊಡಬಹುದು. ಜೀವ ಸಂರಕ್ಷಕ ಔಷಧಿಗಳನ್ನು ತಯಾರಿಸುವ ಚಾಕಚಕ್ಯತೆ ವೈದ್ಯರಲ್ಲಿ ಇರಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ಜೀವ ವೈವಿಧ್ಯ ಮಂಡಳಿ ಉಪನಿರ್ದೇಶಕಿ ಡಾ.ಪವಿತ್ರಾ, ಪಾರಂಪರಿಕ ವೈದ್ಯ ಪರಿಷತ್ತಿನ ಕಾರ್ಯದರ್ಶಿ ಅನುಗನಾಳು ಕೃಷ್ಣಮೂರ್ತಿ, ದಿನಕರರಾವ್ ಕುಲಕರ್ಣಿ, ವಿಶ್ವನಾಥ್ ವೈದ್ಯ, ರಮೇಶ್ ಮಹೇಂದ್ರಕರ್, ಪ್ರಕಾಶ್ ಬೀಳೂರ್, ವಿರೂಪಾಕ್ಷ ಕೋಡಿಹಾಳ್, ಸುಭಾಷ ನೇಳಗೆ, ವೈಜಿನಾಥ್ ಪಾಟೀಲ್, ಹಾಗೂ ಡಾ. ರಾಜಕುಮಾರ್ ಹೆಬ್ಬಾಳೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.