ಔರಾದ್ (ಬಿ), ಕಮಲನಗರ ತಾಲೂಕುಗಳನ್ನು ಅತಿವೃಷ್ಠಿ ಪ್ರದೇಶಗಳೆಂದು ಘೋಷಿಸಿ : ಮುಖ್ಯಮಂತ್ರಿಗಳಿಗೆ ಶಾಸಕ ಪ್ರಭು ಚೌವ್ಹಾಣ್ ಒತ್ತಾಯ
ಬೀದರ್ : ಔರಾದ್ (ಬಿ) ಮತ್ತು ಕಮಲನಗರ ತಾಲ್ಲೂಕುಗಳನ್ನು ಅತಿವೃಷ್ಠಿ ಪ್ರದೇಶಗಳೆಂದು ಘೋಷಿಸಿ, ಹಾನಿಗೊಳಗಾದ ಜನತೆಗೆ ತಕ್ಷಣದ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಪ್ರಭು ಚೌವ್ಹಾಣ್ ಅವರು ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದ್ದಾರೆ.
ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿದ ಅವರು, ಔರಾದ್ (ಬಿ) ವಿಧಾನಸಭಾ ಕ್ಷೇತ್ರದಲ್ಲಿ ಅತಿವೃಷ್ಠಿಯಿಂದ ಉಂಟಾಗಿರುವ ಹಾನಿಯ ಬಗ್ಗೆ ಮನವರಿಕೆ ಮಾಡಿದ್ದಾರೆ. ಕೆಲ ದಿನಗಳಿಂದ ನಿರಂತರ ಧಾರಾಕಾರ ಮಳೆಯಾಗುತ್ತಿದೆ. ರವಿವಾರ ಒಂದೇ ದಿನ ಎರಡು ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಸುಮಾರು 300 ಎಂಎಂ ಮಳೆ ದಾಖಲಾಗಿದೆ. ಪ್ರತಿ ವರ್ಷ ಬರಗಾಲ ಆವರಿಸುವ ಕ್ಷೇತ್ರದಲ್ಲಿ ಈ ಬಾರಿ ಸುರಿದ ಮಳೆಯ ಪ್ರಮಾಣವು ಸಾಮಾನ್ಯ ಮಿತಿ ಮೀರಿದ್ದು, ಬಿತ್ತನೆಯಾದ ಸೋಯಾಬೀನ್, ಉದ್ದು, ಹೆಸರು, ಜೋಳ, ಹತ್ತಿ ಮುಂತಾದ ಪ್ರಮುಖ ಕೃಷಿ ಬೆಳೆಗಳು ನೀರುಪಾಲಾಗಿವೆ. ಸಾವಿರಾರು ಹೆಕ್ಟೇರ್ ಬೆಳೆ ನಷ್ಟವಾಗಿದೆ. 100ಕ್ಕೂ ಮೇಲ್ಪಟ್ಟು ರೈತರ ಜಾನುವಾರುಗಳು ಸಾವನಪ್ಪಿವೆ ಎಂದು ತಿಳಿಸಿದ್ದಾರೆ.
ರೈತರು ಸಾಲ ಮಾಡಿ ಬೆಳೆದ ಬೆಳೆಗಳು ನೆಲಸಮವಾಗಿ ನಾಶವಾಗಿದ್ದು, ಅವರ ಜೀವನ ಭವಿಷ್ಯ ಗೊಂದಲಕ್ಕೆ ತಳ್ಳಲ್ಪಟ್ಟಿದೆ. ಗ್ರಾಮಗಳು ಜಲಾವೃತ್ತಗೊಂಡು ಸುಮಾರು 50 ಕ್ಕೂ ಹೆಚ್ಚು ಮನೆಗಳು ಕುಸಿದು ಕುಟುಂಬಗಳು ಬೀದಿಗೆ ಬಂದಿವೆ. ಅಷ್ಟೇಯಲ್ಲದೆ, ನಂದಿ ಬಿಜಲಗಾಂವ್, ಚಿಕ್ಲಿ ನಡುವಿನ ಸೇತುವೆ, ಸಾವರಗಾಂವ್, ಹಂಗರಗಾ ನಡುವಿನ ಸೇತುವೆ ಸೇರಿ ಹಲವು ಸೇತುವೆ, ಕೆರೆ ಕಟ್ಟೆಗಳು ಒಡೆದು ಹಾನಿ ಸಂಭವಿಸಿದೆ. ರಸ್ತೆ, ವಿದ್ಯುತ್ ಲೈನ್, ನೀರು ಸರಬರಾಜು ವ್ಯವಸ್ಥೆಗಳು ಹಾನಿಗೊಳಗಾಗಿದ್ದು, ಸಾರಿಗೆ, ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಉಗ್ರಾಣ, ಶಾಲೆ, ಅಂಗನವಾಡಿ, ಸರ್ಕಾರಿ ಕಚೇರಿಗಳು ನೀರಿನಿಂದ ಹಾನಿಗೊಂಡು ಕಚೇರಿ ಕೆಲಸಗಳಿಗೂ ಅಡೆತಡೆಯಾಗುತ್ತಿದೆ ಎಂದು ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿದ್ದಾರೆ.
ಈ ತುರ್ತು ಪರಿಸ್ಥಿತಿ ಮನಗಂಡು, ಔರಾದ(ಬಿ) ಹಾಗೂ ಕಮಲನಗರ ತಾಲ್ಲೂಕುಗಳನ್ನು ಕೂಡಲೇ ಅತಿವೃಷ್ಟಿ ಪೀಡಿತ ಪ್ರದೇಶಗಳೆಂದು ಘೋಷಿಸಬೇಕು. ಹಾನಿಗೊಳಗಾದ ಜನತೆಗೆ ತಕ್ಷಣದ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದಾರೆ. ಇದೇ ವೇಳೆ ಕಂದಾಯ ಸಚಿವ ಕೃಷ್ಣಭೈರೇಗೌಡ, ಕೃಷಿ ಸಚಿವ ಚೆಲುವರಾಯಸ್ವಾಮಿ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಬಿ.ಖಂಡ್ರೆ ಅವರಿಗೂ ಮನವಿ ಪತ್ರ ಸಲ್ಲಿಸಿದ್ದಾರೆ.