ಇ-ಖಾತಾ ಅಭಿಯಾನ; ವಾರ್ಡವಾರು ಮೇಳ ಆಯೋಜಿಸಲು ಸಿದ್ಧತೆ: ಬೀದರ್ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ
ಬೀದರ್: ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇ-ಖಾತಾ ನೀಡುವ ಅಭಿಯಾನಕ್ಕೆ ಈಗಾಗಲೇ ಚಾಲನೆ ನೀಡಲಾಗಿದ್ದು, ಈ ಅಭಿಯಾನವನ್ನು ಮುಂದಿನ 3 ತಿಂಗಳ ಒಳಗಾಗಿ ಪೂರ್ಣಗೊಳಿಸಲು ವಾರ್ಡವಾರು ಮೇಳ ಆಯೋಜಿಸಲು ಸಿದ್ಧತೆ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಹೇಳಿದರು.
ಇಂದು ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವತ್ತಿನ ಮಾಲೀಕರು ತಮ್ಮ ನಗರ ಸ್ಥಳೀಯ ಸಂಸ್ಥೆಗೆ ಭೇಟಿ ನೀಡಿ, ವಾರ್ಡವಾರು ಆಯೋಜಿಸಲಾಗುವ ಮೇಳಗಳಲ್ಲಿ ಅಗತ್ಯ ದಾಖಲೆ ಸಲ್ಲಿಸಿ 7 ದಿನಗಳ ಒಳಗಾಗಿ ಇ-ಖಾತಾ ಪಡೆಯಬಹುದಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಹಾಗೂ ಸಾರ್ವಜನಿಕರ ಸಹಾಯಕ್ಕಾಗಿ ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಹಾಯವಾಣಿ ಸ್ಥಾಪಿಸಲಾಗಿದೆ. ಇ-ಖಾತಾ ನೀಡಲು ಅಭಿಯಾನ ಕೈಗೊಂಡು ನಿಗದಿತ ಕಾರ್ಯವಿಧಾನ ಅನುಸರಿಸಲಾಗುತ್ತಿದೆ. ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇ-ಖಾತಾ ನೀಡಲು ಬಾಕಿಯಿರುವ ಆಸ್ತಿಗಳ ಗುರುತಿಸುವುದು, ಇ-ಖಾತಾ ಪಡೆಯಲು ಗುರುತಿಸಲಾದ ಆಸ್ತಿಗಳ ಮಾಲೀಕರು, ಇ-ಖಾತಾ ಪಡೆಯಲು ಬೇಕಾದ ದಾಖಲೆಗಳನ್ನು ಸಲ್ಲಿಸಲು ಮಾಹಿತಿ ನೀಡಲಾಗುತ್ತದೆ ಎಂದರು.
ಸಾರ್ವಜನಿಕರಿಗೆ ಅಗತ್ಯ ಮಾಹಿತಿ ನೀಡಿ, ನಿಗದಿತ ಕಾಲವಾಧಿಯಲ್ಲಿ ಕ್ರಮ ಕೈಗೊಳ್ಳುವಂತೆ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರಿಗೆ ಸೂಚನೆ ನೀಡಲಾಗಿದೆ.
ಸಾರ್ವಜನಿಕರಿಗೆ ತಮ್ಮ ಸ್ವತ್ತಿನ ಮಾಹಿತಿಯಲ್ಲಿ ತಿದ್ದು ಪಡಿಗಳಿದ್ದಲ್ಲಿ ಅಗತ್ಯ ದಾಖಲೆಗಳು ನಗರ ಸ್ಥಳೀಯ ಸಂಸ್ಥೆಗೆ ಸಲ್ಲಿಸಿ ತಿದ್ದುಪಡಿ ಮಾಡಲು ಅವಕಾಶವನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು.
ನಗರ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿನ ಅನಧಿಕೃತ ಸ್ವತ್ತುಗಳಿಗೂ ಖಾತಾ ನೀಡುವ ಸಂಬಂಧ, ಕಾಯ್ದೆ ಮತ್ತು ನಿಯಮಗಳಿಗೆ ತಿದ್ದುಪಡಿ ಮಾಡಲಾಗಿದೆ. ಇದರಿಂದ ಅನಧಿಕೃತ ಸ್ವತ್ತುಗಳ ಮಾಲೀಕರು ತಮ್ಮ ಸ್ವತ್ತಿನ ಕಂದಾಯ ಪಾವತಿಸುವ ಮೂಲಕ ಇ-ಖಾತಾ ಪಡೆಯಬಹುದಾಗಿದೆ. ಇದರಿಂದ ಬಹಳ ದಿನಗಳಿಂದ ಇದ್ದ ಅನಧಿಕೃತ ಸ್ವತ್ತುಗಳ ಖಾತಾ ಸಮಸ್ಯೆಗೆ ಪರಿಹಾರ ಕಲ್ಪಿಸಲಾಗಿದೆ ಎಂದರು.
ಸೆ.10, 2024 ರ ಕ್ಕಿಂತ ಮುಂಚಿನ ಆಸ್ತಿಗಳಿಗೆ ಈ ಕಾಯ್ದೆ ಅನ್ವಯವಾಗುತ್ತದೆ. ಒಂದು ಬಾರಿ ಪರಿಹಾರ ಕ್ರಮವಾಗಿರುವ ಹಿನ್ನಲೆಯಲ್ಲಿ ಸಾರ್ವಜನಿಕರು ಅಭಿಯಾನದ ಸದುಪಯೋಗ ಪಡೆದುಕೊಳ್ಳಲು ಸಾರ್ವಜನಿಕರಿಗೆ ಈ ಸೌಲಭ್ಯದ ಮಾಹಿತಿ ತಲುಪುವಂತೆ ವ್ಯಾಪಕ ಪ್ರಚಾರ ಮಾಡಲಾಗುತ್ತದೆ. ಬೀದರ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಆಸ್ತಿ ಲಭ್ಯ ಮಾಹಿತಿಯನ್ನು ಜಾಲತಾಣ http://aasthikanaja.karnatakasmartcity.in/kmf24 ರಲ್ಲಿ ಪ್ರಕಟಿಸಲಾಗಿದೆ. ಸಾರ್ವಜನಿಕರು ಈ ಜಾಲತಾಣಕ್ಕೆ ಭೇಟಿ ನೀಡಿ, ತಮ್ಮ ಸ್ವತ್ತಿನ ಮಾಹಿತಿ ಸರಿಯಾಗಿರುವ ಕುರಿತು ಪರಿಶೀಲಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ್ ಪೂಜಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿರೀಶ್ ಬದೋಲೆ ಹಾಗೂ ನಗರಾಭಿವೃದ್ಧಿ ಕೋಶದ ಮೋತಿಲಾಲ್ ಲಮಾಣಿ ಸೇರಿದಂತೆ ಇತರರು ಉಪಸ್ಥಿತರಿದ್ದರು.