×
Ad

ಚುನಾವಣಾ ಆಯೋಗ ರಾಹುಲ್ ಗಾಂಧಿ ಅವರಿಗೆ ಬೆದರಿಕೆ ಹಾಕುವ ಕೆಲಸ ಮಾಡುತ್ತಿದೆ : ಮಾಜಿ ಸಚಿವ ವಿನಯಕುಮಾರ್ ಸೊರಕೆ

ʼʼತಲಾ ಆದಾಯದಲ್ಲಿ ಕರ್ನಾಟಕ ಪ್ರಥಮʼʼ

Update: 2025-09-18 18:25 IST

ಬೀದರ್: ಕರ್ನಾಟಕ ರಾಜ್ಯ ಮಾತ್ರವಲ್ಲದೆ ಇಡೀ ದೇಶದಲ್ಲಿಯೂ ಮತಕಳ್ಳತನ ನಡೆದಿದೆ ಎಂಬುದು ಜಗಜ್ಜಾಹಿರವಾಗಿದೆ. ಆದರೆ ಚುನಾವಣಾ ಆಯೋಗವು ಅದನ್ನು ತಡೆಗಟ್ಟುವ ಬದಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಬೆದರಿಕೆ ಹಾಕುತ್ತಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿಯ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಚಿವ ವಿನಯಕುಮಾರ್ ಸೊರಕೆ ಆರೋಪಿಸಿದರು.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ಲೋಕಸಭೆ ಚುನಾವಣೆಯಲ್ಲಿ ಮಹಾದೇವಪುರ ಕ್ಷೇತ್ರದಲ್ಲಿ ಮಾತ್ರವೇ 1 ಲಕ್ಷಕ್ಕೂ ಹೆಚ್ಚು ಸುಳ್ಳು ಮತದಾರರನ್ನು ಪತ್ತೆಹಚ್ಚಲಾಗಿದೆ. ಇಂತಹ ಘಟನೆಗಳು ರಾಜ್ಯದ ಇತರೆಡೆಗಳಲ್ಲೂ ನಡೆದಿವೆ. ಈ ಪ್ರಕರಣಗಳನ್ನು ಬಹಿರಂಗ ಪಡಿಸುವ ಜವಾಬ್ದಾರಿ ಕಾಂಗ್ರೆಸ್ ಪ್ರಚಾರ ಸಮಿತಿಯ ಮೇಲಿದೆ ಎಂದರು.

ಕಾಂಗ್ರೆಸ್ ಸಂಘಟನೆ ಗಟ್ಟಿಗೊಳಿಸಲು ಜಿಲ್ಲಾ ಮತ್ತು ಬ್ಲಾಕ್ ಮಟ್ಟದಲ್ಲಿ 23 ಪದಾಧಿಕಾರಿಗಳ ಸಮಿತಿ ರಚಿಸಲಾಗುತ್ತಿದೆ. ಬ್ಲಾಕ್ ಸಮಿತಿಯಲ್ಲಿ ವಾರ್ಡ್ ಮತ್ತು ಪಂಚಾಯತ್ ಮಟ್ಟದ ಪ್ರತಿನಿಧಿಗಳು ಇರಲಿದ್ದು, ಮಹಿಳೆಯರಿಗೆ ಪ್ರಾಮುಖ್ಯತೆ ನೀಡಲಾಗುವುದು. ಪ್ರತಿ ಬೂತ್‌ನಿಂದ ಇಬ್ಬರನ್ನು ‘ಡಿಜಿಟಲ್ ಯೂತ್’ ಹೆಸರಿನಲ್ಲಿ ಆಯ್ಕೆಮಾಡಿ ಪಂಚಾಯತ್ ಮಟ್ಟದ ಸಮಿತಿ ರಚಿಸಲಾಗುವುದು. ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಹಾಗೂ ಪ್ರಚಾರ ಸಮಿತಿಗಳು ಸೇರಿ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಸಮಾವೇಶ ಹಮ್ಮಿಕೊಳ್ಳಲಿದ್ದಾರೆ ಎಂದು ವಿವರಿಸಿದರು.

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲೂ ಮತಕಳ್ಳತನ ನಡೆದಿದ್ದಕ್ಕೆ ಸಾಕ್ಷಿ ದೊರೆತಿದೆ. ಬಿಹಾರ ಚುನಾವಣೆಯಲ್ಲೂ ಇದೇ ರೀತಿಯ ಆತಂಕವಿದ್ದು, ರಾಹುಲ್ ಗಾಂಧಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ ಎಂದು ಹೇಳಿದರು.

ರಾಜ್ಯದಲ್ಲಿ ಮುಂಬರುವ ಜಿಪಂ ಮತ್ತು ತಾಪಂ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಮೂಲಕವೇ ಮತದಾನ ನಡೆಯಲಿದೆ. 59 ಸಾವಿರ ಬೂತ್‌ಗಳಲ್ಲಿ ಪ್ರತಿ ಬೂತ್‌ಗೆ ಇಬ್ಬರು ಕಾರ್ಯಕರ್ತರನ್ನು ನೇಮಿಸಿ, ಒಟ್ಟು 1 ಲಕ್ಷಕ್ಕೂ ಹೆಚ್ಚು ‘ಡಿಜಿಟಲ್ ಯೂತ್’ ಮೂಲಕ ಪಕ್ಷದ ಸಾಮಾಜಿಕ ಜಾಲತಾಣ ಚಟುವಟಿಕೆಗಳನ್ನು ಬಲಪಡಿಸಲಾಗುವುದು. ಇವರಿಗೆ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ವಿಶೇಷ ತರಬೇತಿ ನೀಡಲಾಗುವುದು. ಸಮಿತಿ ಕೇವಲ ಚುನಾವಣೆಗೆ ಮಾತ್ರ ಸೀಮಿತವಾಗದೆ, ಐದು ವರ್ಷಗಳ ಕಾಲ ಸತತ ಪ್ರಚಾರ ಕಾರ್ಯ ನಡೆಸಲಿದೆ ಎಂದು ತಿಳಿಸಿದರು.

ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಾಗ ವಿರೋಧ ಪಕ್ಷ ಟೀಕಿಸಿದರೂ, ಮುಖ್ಯಮಂತ್ರಿ ಸಿದ್ಧರಾಮಯ್ಯ ಮಂಡಿಸಿದ 4.9 ಲಕ್ಷ ಕೋಟಿ ರೂ. ಬಜೆಟ್‌ನಲ್ಲಿ 58 ಸಾವಿರ ಕೋಟಿ ರೂ. ಗ್ಯಾರಂಟಿ ಯೋಜನೆಗಳಿಗೆ, 18 ಸಾವಿರ ಕೋಟಿ ರೈತರಿಗೆ, 20 ಸಾವಿರ ಕೋಟಿ ಅಭಿವೃದ್ಧಿ ಕಾರ್ಯಗಳಿಗೆ ಮೀಸಲಿಟ್ಟಿದ್ದಾರೆ. ಪಾರದರ್ಶಕವಾಗಿ 1 ಲಕ್ಷ ಕೋಟಿ ರೂ. ನೇರವಾಗಿ ಜನರ ಖಾತೆಗೆ ಜಮೆ ಮಾಡಲಾಗಿದೆ. ಯಾವುದೇ ರೀತಿಯ ಭ್ರಷ್ಟಾಚಾರ ಇಲ್ಲ ಎಂದು ಸ್ಪಷ್ಟಪಡಿಸಿದರು.

ಕೇಂದ್ರದ ಅಂಕಿಅಂಶ ಪ್ರಕಾರ, ತಲಾ ಆದಾಯದಲ್ಲಿ ಕರ್ನಾಟಕ ಪ್ರಥಮ ಸ್ಥಾನದಲ್ಲಿದ್ದು, 2.4 ಲಕ್ಷ ರೂ. ತೋರಿಸಿದೆ. ಕೇಂದ್ರದ ಜಿಡಿಪಿ 8.2 ಆಗಿದ್ದರೆ, ಕರ್ನಾಟಕದಲ್ಲಿ 10.2 ಜಿಡಿಪಿ ದಾಖಲೆಯಾಗಿದೆ. ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಪ್ರಚಾರ ಸಮಿತಿಯ ಉಪಾಧ್ಯಕ್ಷ ಭೀಮಣ್ಣ ಮೇಟಿ, ಗ್ಯಾರಂಟಿ ಯೋಜನೆ ಜಿಲ್ಲಾಧ್ಯಕ್ಷ ಅಮೃತರಾವ್ ಚಿಮಕೊಡೆ, ಭಾಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಣಮಂತರಾವ್ ಚೌವ್ಹಾಣ, ಬೂಡಾ ಸದಸ್ಯ ಮಹಮ್ಮದ್ ಸಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಾರ್ಜ್ ಫರ್ನಾಂಡಿಸ್ ಹಾಗೂ ಇತರರು ಉಪಸ್ಥಿತರಿದ್ದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News