ಅತಿವೃಷ್ಟಿಯಿಂದ ಹಾನಿಯಾದ ಪ್ರತಿ ಎಕರೆಗೆ ಸರಕಾರ 25 ಸಾವಿರ ರೂ. ಪರಿಹಾರ ನೀಡಬೇಕು : ನಿಖಿಲ್ ಕುಮಾರಸ್ವಾಮಿ
ಬೀದರ್ : ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರತಿ ಎಕರೆ ಕೃಷಿ ಭೂಮಿಗೆ ಸರ್ಕಾರವು ಕನಿಷ್ಠ 20,000 ರೂ. ನಿಂದ 25,000 ರೂ. ಪರಿಹಾರ ನೀಡಬೇಕು ಎಂದು ಜ್ಯಾತ್ಯಾತೀತ ಜನತಾದಳ (ಜೆಡಿಎಸ್) ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಒತ್ತಾಯಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ವರದಿಯ ಪ್ರಕಾರ 5.20 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಾಶವಾಗಿದೆ. ಕಲ್ಯಾಣ ಕರ್ನಾಟಕದ ಬೀದರ್, ಕಲಬುರಗಿ, ಯಾದಗಿರಿ, ಭಾಗಶಃ ರಾಯಚೂರು ಹಾಗೂ ಕಿತ್ತೂರು ಕರ್ನಾಟಕದ ವಿಜಯಪುರ ಸೇರಿದಂತೆ ಹಲವು ಜಿಲ್ಲೆಗಳು ಹಾನಿಗೊಳಗಾಗಿವೆ. ವಿಶೇಷವಾಗಿ ಬೀದರ್ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಸಂಪೂರ್ಣ ಬೆಳೆ ನಾಶವಾಗಿದೆ ಎಂದು ತಿಳಿಸಿದರು.
ಬೀದರ್ ಜಿಲ್ಲೆಯಲ್ಲೇ 79–80 ಸಾವಿರ ಹೆಕ್ಟೇರ್ ಬೆಳೆ ಹಾನಿಯಾಗಿದೆ. ತೊಗರಿ, ಸೋಯಾ, ಉದ್ದು, ಹೆಸರು, ಹತ್ತಿ ಬೆಳೆಗೆ ತೀವ್ರ ಹಾನಿಯಾಗಿದೆ ಎಂದು ಅವರು ವಿವರಿಸಿದರು.
ನಾನು ಸ್ವತಃ ಬೀದರ್ ಉತ್ತರ ಕ್ಷೇತ್ರದ ಹಳ್ಳಿಗಳಿಗೆ ಭೇಟಿ ನೀಡಿದ್ದು, ರೈತರು ತಮ್ಮ ಸಂಕಷ್ಟ ಹಂಚಿಕೊಂಡಿದ್ದಾರೆ. ಸರ್ಕಾರವು ತಕ್ಷಣ ಪರಿಹಾರ ಕ್ರಮ ಕೈಗೊಳ್ಳಬೇಕು” ಎಂದು ಹೇಳಿದರು.
ರಸಗೊಬ್ಬರದ ಚೀಲಕ್ಕೆ 260 ರೂ. ಬದಲು ಕೆಲವು ಖಾಸಗಿ ಕಂಪನಿಗಳು ಗುಣಮಟ್ಟ ಪರೀಕ್ಷೆ ಮಾಡದೇ 800 ರೂ. ವಸೂಲು ಮಾಡುತ್ತಿರುವುದು ಗಂಭೀರ ವಿಷಯ. 55 ಸಾವಿರ ಕೋಟಿ ರೂ. ಗ್ಯಾರಂಟಿ ಯೋಜನೆಗಳಿಗೆ ಖರ್ಚು ಮಾಡುತ್ತಿರುವ ಸರ್ಕಾರ, ರೈತರ ಸಂಕಷ್ಟಕ್ಕೆ ಪ್ರತಿ ಎಕರೆಗೆ ಕನಿಷ್ಠ 20–25 ಸಾವಿರ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್, ಜೆಡಿಎಸ್ ಜಿಲ್ಲಾಧ್ಯಕ್ಷ ರಮೇಶ್ ಪಾಟೀಲ್ ಸೋಲಾಪುರ, ಮುಖಂಡರು ಸೂರ್ಯಕಾಂತ್ ನಾಗಮಾರಪಳ್ಳಿ, ಬಸವರಾಜ್ ಪಾಟೀಲ್ ಹಾರೂರಗೇರಿ, ದೇವೇಂದ್ರ ಸೋನಿ, ಅಶೋಕ್ ಕೊಡಗೆ, ಶಾಂತಲಿಂಗ್ ಸಾವಳಗಿ, ರಾಜಶೇಖರ್ ಜವಳೆ, ತರುಣ್ ನಾಗಮಾರಪಳ್ಳಿ, ಅಭಿ ಕಾಳೆ, ಸುದರ್ಶನ್ ಸುಂದರರಾಜ್ ಹಾಗೂ ಶಿವಪುತ್ರ ಮಾಳಗೆ ಸೇರಿದಂತೆ ಅನೇಕರು ಹಾಜರಿದ್ದರು.