ಮುತ್ತಂಗಿ ಗ್ರಾಮವನ್ನು 24x7 ನೀರು ಸರಬರಾಜು ಗ್ರಾಮ ಎಂದು ಘೋಷಿಸಿದ ಶಾಸಕ ಶೈಲೇಂದ್ರ ಬೆಲ್ದಾಳೆ
ಬೀದರ್ : ಜಿಲ್ಲೆಯ ಮುತ್ತಂಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುತ್ತಂಗಿ ಗ್ರಾಮವು ವಾರದ 24ಗಂಟೆ ನೀರು ಸರಬರಾಜು ಗ್ರಾಮ ಎಂದು ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ರವರು ಘೋಷಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ 24×7 ನೀರು ಸರಬರಾಜು ಗ್ರಾಮ ಎಂದು 6ನೇ ಗ್ರಾಮವಾಗಿ ಹಾಗೂ ನಮ್ಮ ಜಿಲ್ಲೆಯಲ್ಲಿ ಮುತ್ತಂಗಿ ಗ್ರಾಮವು ಎರಡನೇ ಗ್ರಾಮವಾಗಿ ನನ್ನ ಕ್ಷೇತ್ರದಲ್ಲಿಯೇ ಘೋಷಣೆ ಮಾಡಿರುವುದು ನನಗೆ ಅತ್ಯಂತ ಸಂತೋಷ್ ಆಗಿದೆ ಎಂದು ಹೇಳಿದರು.
ಇದಕ್ಕೆ ಅಧಿಕಾರಿಗಳು ಮನಸೋ ಇಚ್ಚೆಯಾಗಿ ಕೆಲಸ ಮಾಡಿದ್ದಕ್ಕೆ ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದ ಅವರು, ಮುತ್ತಂಗಿ ಗ್ರಾಮದ ಜೆಜೆಎಂ ಕಾಮಗಾರಿಯು ಉತ್ತಮ ಗುಣಮಟ್ಟದಲ್ಲಿ ಹಾಗೂ ಯಶಸ್ವಿಯಾಗಿ ಪೂರ್ಣಗೊಳಿಸಿದ್ದ ಪರಿಣಾಮವಾಗಿ ರಾಜೇಶ್ವರ್ ವಿ. ಗುಜ್ಜಲವಾರ್ ಪ್ರಥಮ ದರ್ಜೆ ಗುತ್ತಿಗೆದಾರರಿಗೆ ಪ್ರಶಂಸನಾ ಪ್ರಮಾಣಪತ್ರ ನೀಡಿ ಸನ್ಮಾನಿಸಿದರು.
ಮುತ್ತಂಗಿ ಗ್ರಾಮದಂತೆ ಅವರ ಕ್ಷೇತ್ರದಲ್ಲಿ ಇನ್ನು 5 ಗ್ರಾಮಗಳು 24x7 ಗ್ರಾಮ ಎಂದು ಘೋಷಣೆ ಮಾಡಲು ಸಂಬಂಧಿಸಿದ ಅಧಿಕಾರಿ ಕೆಲಸ ಮಾಡಬೇಕು ಎಂದು ಸೂಚಿಸಿದರು.
ನೀರು ಮಿತವಾಗಿ ಬಳಸಬೇಕು. ಮಾಸಿಕ ಶುಲ್ಕ ಪ್ರತಿ ತಿಂಗಳು ಕಟ್ಟಬೇಕು ಎಂದು ಗ್ರಾಮಸ್ಥರಿಗೆ ತಿಳಿಹೇಳಿದ ಅವರು, 24×7 ನೀರಿನ ವ್ಯವಸ್ಥೆಯನ್ನು ನಿರಂತರವಾಗಿ ನಡೆಸಿಕೊಂಡು ಹೋಗುವಂತೆ ಗ್ರಾಮ ಪಂಚಾಯತ್ ಅಧಿಕಾರಿ ಹಾಗೂ ಸಿಬ್ಬಂದಿಗೆ ತಿಳಿಸಿದರು.
ರಾಜ್ಯ ಯೋಜನಾ ಸಮನ್ವಯಾಧಿಕಾರಿ ಡಾ.ನಂದಕುಮಾರ್ ಮಾತನಾಡುತ್ತಾ ಕರ್ನಾಟಕ ರಾಜ್ಯವು ಕುಡಿಯುವ ನೀರು ಸರಬರಾಜು ಯೋಜನೆಗಳು ಸ್ವಾವಲಂಬನೆ ಗ್ರಾಮಗಳಾಗಿ ಪರಿವರ್ತನೆಯಾಗುತ್ತಿವೆ. ನೀರು ಸರಬರಾಜು ಯೋಜನೆಗಳ ಸುಸ್ಥಿರತೆ ಕಾಪಾಡಲು ಗ್ರಾಮದ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಜನರು ಸ್ವ-ಸಹಾಯ ಸಂಘಗಳ ಬಳಕೆ ಮಾಡಿಕೊಂಡು ನಿರ್ವಹಿಸಬೇಕು. ಹಾಗೂ ಸದರಿಯವರಿಗೆ ನೀರಿನ ಕರ ವಸೂಲಾತಿಯ ಮೇಲೆ 10% ಗೌರವ ಧನ ನೀಡಬೇಕು ಎಂದು ಸಲಹೆ ನೀಡಿದರು.
ಗ್ರಾಮಸ್ಥರು ನೀರು ಪೋಲಾಗದಂತೆ ಉಳಿಸಬೇಕು. ಹಾಗೂ ಪ್ರತಿ ಮನೆಗೆ ಶೌಚಾಲಯ ಹಾಗೂ ಇಂಗು ಗುಂಡಿಗಳು ನಿರ್ಮಾಣ ಮಾಡಿಕೊಳ್ಳಬೇಕು. 24x7 ನೀರು ಸರಬರಾಜು ಯೋಜನೆಯಿಂದ ಪ್ರತಿ ಮನೆಗೆ ಮೀಟರ್ ಒದಗಿಸಲಾಗಿದೆ. ಪ್ರತಿ ದಿನ ಪ್ರತಿ ವ್ಯಕ್ತಿಗೆ 55 ಲೀಟರ್ ನೀರು ಪೂರೈಸಲಾಗುತ್ತದೆ. ಪ್ರತಿ ದಿನ ಕುಡಿಯುವ ನೀರನ್ನು ಶುದ್ಧೀಕರಿಸಿ ಸ್ವಚ್ಚವಾದ ನೀರು ಪೂರೈಕೆ ಮಾಡಲಾಗುತ್ತದೆ. ಕಾರ್ಯಾಚರಣೆ ಮತ್ತು ನಿರ್ವಹಣೆಗೆ ಸ್ವಸಹಾಯ ಸಂಘಗಳ ಬಳಕೆ ಮಾಡಿಕೊಳ್ಳಲಾಗುವುದು. ಸುಸ್ಥಿರತೆ ಗ್ರಾಮ ನೀರು ಸರಬರಾಜು ಮತ್ತು ನೈರ್ಮಲ್ಯ ಸಮಿತಿಗಳಿಗೆ ತರಬೇತಿ ನೀಡಿ ಬಲಪಡಿಸಲಾಗಿದೆ. ಹಾಗೂ ಪ್ರತಿ ನಲ್ಲಿಯಿಂದ ಒಂದು ನಿಮಿಷಕ್ಕೆ 9 ಲೀಟರ್ ನೀರು ಪೂರೈಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಈ ಕಾರ್ಯಕ್ರಮದಲ್ಲಿ ಮುತ್ತಂಗಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸವಿತಾ, ಸಹಾಯಕ ಕಾರ್ಯಪಾಲಕ ಅಭಿಯಂತರರು ಶೇಖರರಾಗ, ಶಾಖಾಧಿಕಾರಿಗಳಾದ ಗೋರಕನಾಥ್, ಪಿರಾಜಿ, ಪಂಚಾಯತಿ ಸಿಬ್ಬಂದಿಗಳಾದ ಓಂಕಾರ್, ಅನಿಲ್, ಅಮರನಾಥ್, ಶಶಿಕುಮಾರ್, ಶೇಖರ್ ಹಾಗೂ ಜಗನ್ನಾಥ್ ಮಜಗೆ ಸೇರಿದಂತೆ ಇತರರು ಉಪಸ್ಥಿತರಿದ್ದರು.