ಪ್ರವಾದಿ ಮುಹಮ್ಮದ್ ಅವರ ಬದುಕು ಜಗತ್ತಿಗೆ ಮಾದರಿ : ನಿವೃತ್ತ ಪಿಎಸ್ಐ ಯೂಸುಫ್ ಸೌದಾಗರ್
ಔರಾದ್: ಕಾರ್ಮಿಕನೊಬ್ಬ ಕೆಲಸ ಮುಗಿಸಿ, ಆತನ ಬೆವರು ಆರುವ ಮೊದಲೇ ಕೂಲಿ ಕೊಟ್ಟು ಬಿಡಿ ಎನ್ನುವ ಮೂಲಕ ಕಾರ್ಮಿಕರ ಹಕ್ಕು ರಕ್ಷಣೆ ಮಾಡುವಲ್ಲಿ ಪ್ರವಾದಿ ಮುಹಮ್ಮದ್ ಅವರ ಬದುಕು ಜಗತ್ತಿಗೆ ಮಾದರಿಯಾಗಿದೆ ಎಂದು ನಿವೃತ್ತ ಪಿಎಸ್ಐ ಯೂಸುಫ್ ಸೌದಾಗರ್ ಅವರು ಹೇಳಿದರು.
ಇಂದು ಔರಾದ್ ತಾಲೂಕಿನ ಕೊಳ್ಳೂರ್ ಗ್ರಾಮದಲ್ಲಿ ಪ್ರವಾದಿ ಮುಹಮ್ಮದ್ ಜನ್ಮದಿನದ (ಈದ್ ಮಿಲಾದ್) ಅಂಗವಾಗಿ ಸಸಿ ನೆಟ್ಟು ಮಾತನಾಡಿದ ಅವರು, ಮಾಲಕರಿಂದ ಕಾರ್ಮಿಕರ ಮೇಲೆ ನಡೆಯುತ್ತಿದ್ದ ಶೋಷಣೆಗೆ ಪ್ರವಾದಿ ಮುಹಮ್ಮದ್ ಅವರು ಅಂತ್ಯ ಹಾಡಿದರು. ಮಾಲಕ ಮತ್ತು ಕಾರ್ಮಿಕರ ಮಧ್ಯ ಸೌಹಾರ್ದ ಸಂಬಂಧ ಇರಬೇಕು. ಇಬ್ಬರಿಗೂ ಜವಾಬ್ದಾರಿ ಇದೆ. ಇಬ್ಬರೂ ಅದನ್ನು ನಿಭಾಯಿಸಬೇಕು. ಎಲ್ಲಿಯೂ ಸಂಘರ್ಷಕ್ಕೆ ಅವಕಾಶ ಇಲ್ಲ ಎಂದು ಸಾರಿದ್ದರು ಎಂದು ತಿಳಿಸಿದರು.
ಹಾಫಿಜ್ ರೈಹಾನ್ ಅನ್ಸಾರಿ ಅವರು ಮಾತನಾಡಿ, ಪ್ರವಾದಿ ಮುಹಮ್ಮದ್ ಅವರು ಕೇವಲ ಧರ್ಮ ಗುರು ಅಥವಾ ಸಮಾಜ ಸುಧಾರಕರಾಗಿರದೆ, ಆಡಳಿತಗಾರ, ದಂಡ ನಾಯಕ, ವ್ಯಾಪಾರಿ, ತತ್ವಜ್ಞಾನಿ, ರಾಜಕಾರಣಿ, ವಾಗ್ಮಿ, ಅನಾಥರ ರಕ್ಷಕ, ಗುಲಾಮ ವಿಮೋಚಕ, ಸ್ತ್ರೀ ವಿಮೋಚಕ, ಕಾನೂನು ತಜ್ಞ, ನ್ಯಾಯಾಧೀಶ, ಒಳ್ಳೆಯ ಪತಿ, ಶ್ರೇಷ್ಠ ತಂದೆಯಾಗಿ ಇತಿಹಾಸದ ಪುಟಗಳಲ್ಲಿ ಉಳಿದಿದ್ದಾರೆ. ತಾನು ಬೋಧಿಸಿದ್ದನ್ನು ಸ್ವತಃ ಆಚರಿಸಿಕೊಂಡು ಒಂದು ಮಾದರಿ ಸಮಾಜ ನಿರ್ಮಿಸಿದ್ದಾರೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಶಫಿಉದ್ದಿನ್, ಅಲಿಮಪಾಶಾ, ಮೌಲಾನಾ, ಆಯಾಜಪಾಷಾ, ಅಲ್ತಾಫ್, ಅಬ್ದುಲ್ ಅಸದ್, ಆಫ್ರೋಜ್ ಹಾಗೂ ಅವೇಶ್ ಸೇರಿದಂತೆ ಇತರರು ಇದ್ದರು.