ತಾಂಡಾಗಳಿಗೆ ನಿವೇಶನ ಹಕ್ಕು ಪತ್ರ ನೀಡದಿದ್ದರೆ ನ.18 ರಂದು ಔರಾದ್ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ : ಶಿವಾಜಿ ರಾಠೋಡ್
ಬೀದರ್ : ನ.18ರ ಒಳಗಡೆ ಬಸವನವಾಡಿ ತಾಂಡಾ ಸೇರಿದಂತೆ ನಿವೇಶನ ಹಕ್ಕು ಪತ್ರ ಪಡೆಯದೆ ವಂಚಿತವಾದ ಒಟ್ಟು 12 ತಾಂಡಾಗಳಿಗೆ ನಿವೇಶನ ಹಕ್ಕು ಪತ್ರ ನೀಡದಿದ್ದರೆ ನ.18 ರಂದು 12 ತಾಂಡಾಗಳ ಸಾವಿರಾರು ನಿವಾಸಿಗಳಿಂದ ಔರಾದ್ ತಹಶೀಲ್ದಾರ್ ಕಚೇರಿ ಎದುರಿಗೆ ಪ್ರತಿಭಟನೆ ನಡೆಸಲಾಗುವುದು ಎಂದು ಔರಾದ್ ಪುರಸಭೆ ಸದಸ್ಯ ಶಿವಾಜಿ ರಾಠೋಡ್ ಅವರು ಎಚ್ಚರಿಸಿದರು.
ಇಂದು ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಔರಾದ್ (ಬಿ) ಪಟ್ಟಣದ ಬಸವನವಾಡಿ ತಾಂಡಾದಲ್ಲಿ ವಾಸಿಸುತ್ತಿರುವ ನಿವಾಸಿಗರ ಆಸ್ತಿ ನಿವೇಶನ ಮನೆಗಳನ್ನು ಸಕ್ರಮಗೊಳಿಸಲಿಲ್ಲ. ಆ.18 ಮತ್ತು 19 ರಂದು ಎರಡು ದಿನ ಮೂಲಭೂತ ಸೌಕರ್ಯ ಹಾಗೂ ಈ ಖಾತಾ ನಕಲು ಪಡೆಯಲು 9 ತಾಂಡಗಳ ಬೇಡಿಕೆ ಈಡೇರಿಸುವಂತೆ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು. ಆದರೂ ಅದು ಉಪಯೋಗವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಬಸವನವಾಡಿ ತಾಂಡದಲ್ಲಿ 2 ರಿಂದ 3 ತಲೇಮಾರಿನಿಂದ ಜನರು ವಾಸಿಸುತ್ತಿದ್ದಾರೆ. ತಾಂಡ ನಿವಾಸಿಗರ ನಿವೇಶನಗಳ ಭೂಮಿಯನ್ನು ಸಕ್ರಮಗೊಳಿಸಲು ವಿಳಂಬ ನೀತಿ ಅನುಸರಿಸಲಾಗುತ್ತಿದೆ. ಇಲ್ಲಿಯ ನಿವಾಸಿಗರು 3 ವರ್ಷಗಳ ಹಿಂದೆ ಭೂಮಿಯನ್ನು ಸಕ್ರಮಗೊಳಿಸಲು ಒಟ್ಟು 111 ಫಲಾನುಭವಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದರು. ಆದರೆ ಉದ್ದೇಶಪೂರ್ವಕವಾಗಿ ಗ್ರಾಮ ನಿವೇಶನ ಮಂಜುರಾತಿ ಪ್ರಮಾಣ ಪತ್ರ ನೀಡಲಿಲ್ಲ. ಇದಕ್ಕೆ ಸಂಭದಪಟ್ಟ ಅಧಿಕಾರಿಗಳು ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಸರ್ಕಾರ ಅನಧಿಕೃತವಾಗಿ ನಿರ್ಮಾಣಿಸಿರುವ ಮನೆಗಳನ್ನು ಸಕ್ರಮಗೊಳಿಸಲು ಆದೇಶ ನೀಡಿದ್ದರು, ಕೂಡ ಸಂಭಂಧಪಟ್ಟ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಇದರಿಂದ ಫಲಾನುಭವಿಗಳು ಯೋಜನೆಗಳಿಂದ ವಂಚಿತರಾಗಿದ್ದಾರೆ. ನಿವಾಸಿಗರ ವಿಳಾಸ ಇನ್ನಿತರ ಮೂಲ ನಿವೇಶನದ ದಾಖಲಾತಿಗಳು ಇರಲಾರದ ಕಾರಣಕ್ಕೆ ಸರ್ಕಾರದ ಯೋಜನೆಗಳಿಂದ ವಂಚಿತರಾಗುತ್ತಿದ್ದಾರೆ. ಈ ವಿಚಾರವಾಗಿ ಔರಾದ್ ತಹಶೀಲ್ದಾರ್ ಹಾಗೂ ಔರಾದ್ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳು ನಮ್ಮೆಲ್ಲ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಅವರು ಭರವಸೆ ನೀಡಿ ಕೆಲ ತಿಂಗಳಾದರೂ ಕೂಡ ಯಾವುದೇ ಕ್ರಮ ವಹಿಸದೇ ನಮಗೆ ಅನ್ಯಾಯ ಎಸಗಿದ್ದಾರೆ ಎಂದು ಹರಿಹಾಯ್ದರು.
ಮಾಜಿ ಸಚಿವ ಹಾಗೂ ಹಾಲಿ ಶಾಸಕ ಪ್ರಭು ಚೌವ್ಹಾಣ್ ಅವರಿಗೂ ಈ ವಿಚಾರವನ್ನು ತಿಳಿಸಲಾಗಿದೆ. ಅವರು ಕೂಡ ಯಾವುದೇ ಕ್ರಮ ವಹಸದಿರುವುದು ವಿಪರ್ಯಾಸವಾಗಿದೆ. ಹಾಗಾಗಿ ನ.18 ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಭೀಮರಾವ್ ರಾಠೋಡ್, ಸಂಜು ಚೌವ್ಹಾಣ, ದಿನೇಶ್ ರಠೋಡ್, ರಾಹುಲ್ ಚೌವ್ಹಾಣ ಹಾಗೂ ಸುಧಾಕರ್ ರಠೋಡ್ ಸೇರಿದಂತೆ ಇತರರು ಇದ್ದರು.