×
Ad

ಸಿದ್ದರಾಮಯ್ಯ ಸರಕಾರದಿಂದ ದಲಿತ ವಿರೋಧಿ ನೀತಿ : ಬಿಎಸ್ಪಿ ರಾಜ್ಯಾಧ್ಯಕ್ಷ ಡಾ.ಕೃಷ್ಣಮೂರ್ತಿ ಆರೋಪ

Update: 2025-07-30 18:57 IST

ಬೀದರ್ : ಅಹಿಂದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಲಿತ ಅಧಿಕಾರಿಗಳ ವಿರುದ್ಧ ಅಧಿಕಾರ ಚಲಾಯಿಸಿ, ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ಬಿಎಸ್ಪಿ ರಾಜ್ಯಾಧ್ಯಕ್ಷ ಡಾ.ಎಂ. ಕೃಷ್ಣಮೂರ್ತಿ ಆರೋಪಿಸಿದ್ದಾರೆ.

ನಗರದಲ್ಲಿ ಬಹುಜನ ಸಮಾಜ ಪಕ್ಷದಿಂದ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಎಸ್ಸಿ, ಎಸ್ಟಿ ಅಧಿಕಾರಿಗಳಿಗೆ ಮುಂಬಡ್ತಿ ನೀಡದೆ ಸರ್ಕಾರ ವಿರೋಧಿ ನೀತಿ ತೋರುತ್ತಿದೆ. ಸಿದ್ದರಾಮಯ್ಯ ಸರ್ಕಾರ ಅಹಿಂದ ಹೆಸರಿನಲ್ಲಿ ಎಸ್ಸಿ, ಎಸ್ಟಿಗಳ ಶೇ.90 ರಷ್ಟು ಮತ ಪಡೆದು ಬಹುಮತದಿಂದ ಗೆದ್ದು ಬಂದಿದ್ದಾರೆ. ದಲಿತರ ಮತ ಪಡೆದ ಸಿದ್ದರಾಮಯ್ಯ ಭಾಷಣಕ್ಕೆ ಮಾತ್ರ ದಲಿತರನ್ನು ಸೀಮಿತ ಮಾಡಿಕೊಂಡಿದ್ದಾರೆ. ಕೋಲಾರ ಜಿಲ್ಲೆ ಹೊರತುಪಡಿಸಿ ಬೇರೆಲ್ಲೂ ಎಸ್ಸಿ, ಎಸ್ಟಿ ಜಿಲ್ಲಾಧಿಕಾರಿ ಇಲ್ಲ. ಹಾಗಾದರೆ ದಲಿತರಿಗೆ ಜಿಲ್ಲಾಧಿಕಾರಿ ಆಗಿ ಅಧಿಕಾರ ಪಡೆಯುವ ಅರ್ಹತೆ ಇಲ್ಲವೇ ಎಂದು ಪ್ರಶ್ನಿಸಿದರು.

ದಲಿತರನ್ನು ಮೂಲೆ ಗುಂಪು ಮಾಡುವುದು ಸಿದ್ದರಾಮಯ್ಯ ಅವರಿಗೆ ಗೌರವ ತರುವುದಿಲ್ಲ. ಅವರು ಅಹಿಂದ ನಾಯಕ ಎಂದು ಹೇಳಲು ಶಕ್ತರಲ್ಲ. ಅವರಿಗೆ ದಲಿತರ ಪರ ಎಂದು ಹೇಳಲು ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದ ಅವರು, ಇದರ ಬಗ್ಗೆ ಮಲ್ಲಿಕಾರ್ಜುನ್ ಖರ್ಗೆ ಮತ್ತು ರಾಹುಲ್ ಗಾಂಧಿ ಮಾತನಾಡದೇ ಸುಮ್ಮನಿದ್ದಾರೆ ಎಂದು ಕಿಡಿಕಾರಿದರು.

ಸಾಮಾನ್ಯ ವರ್ಗದ 288 ಜನರನ್ನು ಪದವಿ ಪೂರ್ವ ಕಾಲೇಜುಗಳಿಗೆ ಪ್ರಾಂಶುಪಾಲರಾಗಿ ನೇಮಕ ಮಾಡಿದ್ದಾರೆ. ನರೇಂದ್ರ ಸ್ವಾಮಿ ಅವರ ಮಾಹಿತಿಯನ್ನು ಪರಿಗಣಿಸದೆ ಸರ್ಕಾರ ದಲಿತರ ವಿರೋಧಿ ನೀತಿ ತೋರಿದೆ. ಕೆ.ಜೆ.ಜಾರ್ಜ್ ಅವರು ಸಚಿವರಾಗಿದ್ದಾಗ ಇಂಧನ ಇಲಾಖೆಯಲ್ಲಿ 160 ಎಸ್ಸಿ, ಎಸ್ಟಿ ಸಹಾಯಕ ಇಂಜಿನಿಯರ್‌ ಗಳಿಗೆ ಬಡ್ತಿ ನೀಡದೆ ವಂಚಿಸಲಾಗಿದೆ. ಕೃಷಿ ಇಲಾಖೆಯಲ್ಲಿ ಸುಮಾರು 50 ಅಧಿಕಾರಿಗಳಿಗೆ ಬಡ್ತಿ ನೀಡಿಲ್ಲ. ತೋಟಗಾರಿಕೆ ಇಲಾಖೆಯಲ್ಲಿ ಸಹಾಯಕ ತೋಟಗಾರಿಕೆ ನಿರ್ದೇಶಕರ ಹುದ್ದೆಗೆ ಬಡ್ತಿ ನೀಡುವಾಗ ರೋಸ್ಟರ್ ಪದ್ಧತಿ ಅಳವಡಿಸಿಕೊಳ್ಳದೆ ನೌಕರರಿಗೆ ವಂಚನೆ ಮಾಡಲಾಗಿದೆ. ಪರಮೇಶ್ವರ್ ಅವರು ಗೃಹಮಂತ್ರಿಯಾಗಿದ್ದರೂ ಕೂಡ ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿ ವಿವಿಧ ವೃಂದಗಳಿಗೆ ಬಡ್ತಿ ನೀಡುವಾಗ ನೌಕರರಿಗೆ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿದರು.

ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ನಾಗರಾಜ್ ಮಾತನಾಡಿ, ಅಹಿಂದ, ಬಡವರ ಪರ ಎಂದು ಹೇಳಿ ಜನರಿಗೆ ಮೋಸ ಮಾಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಮುಂದಿನ ದಿನಗಳಲ್ಲಿ ಬಹುಜನ ಸಮಾಜ ಪಕ್ಷದಿಂದ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಎಸ್ಸಿ, ಎಸ್ಟಿಯವರಿಗೆ ಆಗಿರುವ ಅನ್ಯಾಯ ಸರಿಪಡಿಸುವಂತೆ ಒತ್ತಾಯಿಸಿ ಮನವಿ ಪತ್ರ ಸಲ್ಲಿಸಲು ನಿರ್ಧರಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಸೆಂಟ್ರಲ್ ಸ್ಟೇಟ್ ಕೋ ಆರ್ಡಿನೇಟರ್ ಅಥರಸಿಂಗ್ ರಾವ್, ಕಲ್ಲಪ್ಪ ಆರ್ ತೊರವಿ, ರಾಜ್ಯ ಉಸ್ತುವಾರಿ ಗಂಗಾಧರ್ ಬಹುಜನ್, ಬಿಎಸ್ಪಿ ಜಿಲ್ಲಾಧ್ಯಕ್ಷ ಕಪಿಲ್ ಗೋಡಬೊಲೆ, ಎಲ್ ಆರ್ ಬೋಸ್ಲೆ, ಮಹಾದೇವ್ ಧನ್ನಿ, ಅಶೋಕ್ ಮಂಠಾಳಕರ್, ಶಕ್ತಿಕಾಂತ್ ಭಾವಿದೊಡ್ಡಿ, ಅಂಬಾದಾಸ್ ಚಕ್ರವರ್ತಿ, ಮಹೇಶ್ ಬೋಲಾ, ಉತ್ತಮ್ ಸುತಾರ್, ಜಾಫರ್ ಖುರೇಷಿ ಹಾಗೂ ಸಚಿನ್ ಗಿರಿ, ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News