ಬಿಹಾರ ಮತಪಟ್ಟಿ ಪರಿಷ್ಕರಣೆಯಲ್ಲಿ ನಗರಕ್ಕೊಂದು ನ್ಯಾಯ, ಗ್ರಾಮೀಣ ಪ್ರದೇಶಕ್ಕೆ ಇನ್ನೊಂದು
ಸಾಂದರ್ಭಿಕ ಚಿತ್ರ
ಪಾಟ್ನಾ: ಬಿಹಾರದಲ್ಲಿ ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಇದೀಗ ವೇಗ ಪಡೆಯುತ್ತಿದ್ದು, 7.89 ಕೋಟಿ ಮತದಾರರ ಪೈಕಿ ಶೇಕಡ 57ರಷ್ಟು ಅಂದರೆ 4.5 ಕೋಟಿ ಮಂದಿ ಈಗಾಗಲೇ ತಮ್ಮ ಗಣತಿ ಅರ್ಜಿಗಳನ್ನು ಸಲ್ಲಿಸಿದ್ದಾರೆ.
ಆದರೆ ಈ ಪ್ರಕ್ರಿಯೆಯಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸ್ಪಷ್ಟವಾದ ಭಿನ್ನತೆ ಕಂಡುಬಂದಿದ್ದು, ಪಾಟ್ನಾದಂಥ ನಗರ ಪ್ರದೇಶಗಳಲ್ಲಿ ಆಧಾರ್ ಕಾರ್ಡ್ ಗಳನ್ನು ಪುರಾವೆಯಾಗಿ ಪಡೆದರೆ, ಸೀಮಾಂಚಲ ಪ್ರದೇಶ ಮತ್ತು ರಾಜ್ಯದ ಇತರ ಗ್ರಾಮೀಣ ಭಾಗಗಳಲ್ಲಿ ಅಧಿಕಾರಿಗಳು ಇದಕ್ಕೆ ಒಪ್ಪದೇ, ಜನನ ಪ್ರಮಾಣಪತ್ರ, ಜಾತಿ ಪ್ರಮಾಣಪತ್ರ, ಭೂಹಂಚಿಕೆ ದಾಖಲೆಗಳನ್ನು ನೀಡುವಂತೆ ಕಡ್ಡಾಯಪಡಿಸುತ್ತಿದ್ದಾರೆ ಎನ್ನುವ ಅಂಶ ತಿಳಿದುಬಂದಿದೆ.
ಬೂತ್ ಮಟ್ಟದ ಅಧಿಕಾರಿಗಳು ಅಂದರೆ ಜೀವಿಕಾ ದೀದಿಗಳು, ಶಿಕ್ಷಾಮಿತ್ರರು ಮತ್ತು ಅಂಗನವಾಡಿ ಸೇವಕರು ಗಣತಿ ನಮೂನೆಗಳನ್ನು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಕ್ಷಿಪ್ರವಾಗಿ ವಿತರಿಸುತ್ತಿದ್ದಾರೆ. ಪಾಟ್ನಾ ಮತ್ತು ಅಕ್ಕಪಕ್ಕದ ಪ್ರದೇಶಗಳಲ್ಲಿ ಈ ನಮೂನೆಯನ್ನು ಭರ್ತಿ ಮಾಡಿ ಮತದಾರರ ಗುರುತಿನ ಚೀಟಿ, ಆಧಾರ್ ಅಥವಾ ಪಡಿತರ ಕಾರ್ಡ್ ಗಳನ್ನು ಇಲ್ಲವೇ ಚುನಾವಣಾ ಆಯೋಗ ನಿಗದಿಪಡಿಸಿದ 11 ದಾಖಲೆಗಳಲ್ಲಿ ಯಾವುದನ್ನಾದರೂ ಸಲ್ಲಿಸಲು ಸೂಚಿಸಲಾಗುತ್ತಿದೆ. ಯಾವುದೇ ದಾಖಲೆಗಳಿಲ್ಲದಿದ್ದರೂ ಆಧಾರ್ ಕಾರ್ಡ್ ಗಳನ್ನಾದರೂ ಸಲ್ಲಿಸಬಹುದು ಎಂದು ಪಾಲಿಕೆ ಸದಸ್ಯ ರಾಹುಲ್ ಯಾದವ್ ಹೇಳಿದ್ದಾರೆ.
ಆಧಾರ್ ಮತ್ತು ಪಡಿತರ ಚೀಟಿಗಳನ್ನು ಚುನಾವಣಾ ಆಯೋಗ ಕಡ್ಡಾಯಪಡಿಸಿದ 11 ದಾಖಲೆಗಳ ಪಟ್ಟಿಯಲ್ಲಿ ಸೇರಿಸಿಲ್ಲ ಎಂಬ ಅಂಶ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿದೆ. ಆದರೆ ಸದ್ಯಕ್ಕೆ ಗಣತಿ ನಮೂನೆಗಳನ್ನು ಭರ್ತಿ ಮಾಡಿ ಮತದಾರರು ಅಪ್ಲೋಡ್ ಮಾಡಬಹುದಾಗಿದೆ. ದಾಖಲೆಗಳನ್ನು ಆ ಬಳಿಕ ಸಲ್ಲಿಸಲು ಅವಕಾಶವಿದೆ. ನಮೂನೆಗಳನ್ನು ಸಲ್ಲಿಸಲು ಜುಲೈ 25 ಕೊನೆಯ ದಿನ ಎಂದು ಚುನಾವಣಾ ಆಯೋಗ ಹೇಳಿದೆ.
ಆದರೆ ಪಾಟ್ನಾ ಜಿಲ್ಲೆಯ ಬಿಕ್ರಮ್ ಪ್ರದೇಶದ ರಾಮಾಶಿಶ್ ಹೇಳುವಂತೆ, ಅರ್ಜಿಗಳನ್ನು ವಿತರಿಸಿದ ಬೂತ್ ಮಟ್ಟದ ಅಧಿಕಾರಿಗಳು ಚುನಾವಣಾ ಆಯೋಗ ನಿಗದಿಪಡಿಸಿದ ದಾಖಲೆಗಳಲ್ಲಿ ಒಂದನ್ನು ಸಲ್ಲಿಸುವಂತೆ ಕಡ್ಡಾಯಪಡಿಸುತ್ತಿದ್ದಾರೆ. ಹಲವು ಮಂದಿ ಗ್ರಾಮಸ್ಥರಲ್ಲಿ ಈ 11 ದಾಖಲೆಗಳ ಪೈಕಿ ಯಾವುದೂ ಇಲ್ಲ. ಆದ್ದರಿಂದ ಪ್ರತಿರೋಧ ವ್ಯಕ್ತವಾಗುತ್ತಿದೆ. ಆದರೆ ಈಗ ತಂದೆ, ತಾಯಿಯ ಹೆಸರು, ಪತಿ/ಪತ್ನಿಯ ಹೆಸರು, ಆಧಾರ್ ಕಾರ್ಡ್ ನಂಬರ್ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಸಹಿ ಮಾಡಿ ನೀಡಲು ಅವಕಾಶ ನೀಡಲಾಗಿದೆ. ಇದರಿಂದಾಗಿ ಇಡೀ ಪ್ರಕ್ರಿಯೆ ವೇಗ ಪಡೆದಿದೆ.