×
Ad

ಮಕ್ಕಳ ಮನವಿ ಬಳಿಕ ಕೇರಳದ ಅಂಗನವಾಡಿ ಮೆನು ಸೇರಿದ ಬಿರಿಯಾನಿ

Update: 2025-06-04 07:32 IST

ಪಟ್ಟಣಂತಿಟ್ಟ: ಸಾಮಾನ್ಯವಾಗಿ ಅಂಗನವಾಡಿಗಳಲ್ಲಿ ನೀಡುವ ಉಪ್ಪಿಟ್ಟಿನ ಬದಲು ಬಿರಿಯಾನಿ ನೀಡಿದರೆ ಉತ್ತಮ ಎಂಬ ಪುಟ್ಟ ಶಂಕು ಮೂರು ತಿಂಗಳ ಹಿಂದೆ ಮನವಿ ಮಾಡಿದ ವಿಡಿಯೊ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಗಮನವನ್ನೂ ಸೆಳೆದಿತ್ತು. ಆದರೆ ಇದೀಗ ಈ ಮನವಿಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿ, ಕೇರಳದಾದ್ಯಂತ ಎಲ್ಲ ಮಕ್ಕಳ ಆರೈಕೆ ಕೇಂದ್ರಗಳಲ್ಲಿ ಮಕ್ಕಳಿಗೆ ವೈವಿಧ್ಯಮಯ ರುಚಿಕರ ಮತ್ತು ಪೌಷ್ಟಿಕ ಆಹಾರವನ್ನು ಒದಗಿಸಲು ಕ್ರಮ ಕೈಗೊಂಡಿದೆ.

ಮಂಗಳವಾರ ಬಿಡುಗಡೆಯಾದ ಮಕ್ಕಳ ಆರೈಕೆ ಕೇಂದ್ರಗಳ ಹೊಸ ಮೆನುವಿನಲ್ಲಿ ಮೊಟ್ಟೆ ಬಿರಿಯಾನಿ, ಪಲಾವ್, ದಾಲ್ ಪಾಯಸ, ಸೋಯಾ ಡ್ರೈ ಕರಿ ಮತ್ತು ಪೌಷ್ಟಿಕ ಲಡ್ಡು ಸೇರಿದೆ. ಈ ಹೊಸ ಖಾದ್ಯಗಳು ಮಕ್ಕಳ ಸುಧೀರ್ಘ ನಿರೀಕ್ಷೆಯನ್ನು ಈಡೇರಿಸಿದ್ದು, ಮಕ್ಕಳಿಗೆ ಹೆಚ್ಚಿನ ಸಂತೋಷ ಮತ್ತು ಉತ್ತಮ ಪೌಷ್ಟಿಕತೆ ನೀಡಲಿದೆ ಎಂದು ಅಧಿಕೃತ ಮೂಲಗಳು ಹೇಳಿವೆ.

ಅಂಗನವಾಡಿ ಮಕ್ಕಳಿಗೆ ಪರಿಷ್ಕøತ ಮೆನು ಬಿಡುಗಡೆ ಮಾಡಿದ ಸಚಿವೆ ವೀಣಾ ಜಾರ್ಜ್, ಸರ್ಕಾರ ನಡೆಸುವ ಎಲ್ಲ ಮಕ್ಕಳ ಆರೈಕೆ ಕೇಂದ್ರಗಳಲ್ಲಿ ಏಕೀಕೃತ ಮೆನು ಜಾರಿಗೆ ತರುತ್ತಿರುವುದು ಇದೇ ಮೊದಲು ಎಮದು ಹೇಳಿದರು.

ಹೊಸ ಮೆನುವಿನಲ್ಲಿ ರುಚಿಕರ, ವೈವಿಧ್ಯಮಯ, ಪೌಷ್ಟಿಕ ಆಹಾರ ಸೇರಿದ್ದು, ಹೆಚ್ಚಿನ ಸಕ್ಕರೆ ಮತ್ತು ಉಪ್ಪಿನ ಅಂಶಗಳ ಬಳಕೆ ಕಡಿಮೆ ಮಾಡಿ, ಪ್ರೊಟೀನ್ ಸಮೃದ್ಧ ಅಂಶಗಳಿಂದ ಮಕ್ಕಳ ಆರೋಗ್ಯ ಸುಧಾರಣೆಗೆ ನೆರವಾಗಲಿದೆ ಎಂದು ವಿವರಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆಯನ್ನೂ ನಿರ್ವಹಿಸುತ್ತಿರುವ ಜಾರ್ಜ್, ರಾಜ್ಯಮಟ್ಟದ ಅಂಗನವಾಡಿ ಪ್ರಾರಂಭೋತ್ಸವ ಸಮಾರಂಭದಲ್ಲಿ ಈ ವಿಷಯ ಪ್ರಕಟಿಸಿದರು.

ಪರಿಷ್ಕøತ ಮೆನುವಿನಲ್ಲಿ ಬೆಳಿಗ್ಗೆ ಉಪಾಹಾರ, ಮಧ್ಯಾಹ್ನದ ಊಟ ಮತ್ತು ಸಾಮಾನ್ಯ ತಿನಿಸುಗಳು ಸೇರಿವೆ. ಅರ್ಧ ಗೋಧಿಯ ಪಲಾವ್, ರಾಯಿತ, ಕಡಲೆ ಕರಿ, ಕೊಳುಕಟ್ಟಾ ಮತ್ತು ಇಳಯಡದಂಥ ಸಾಂಪ್ರದಾಯಿಕ ಖಾದ್ಯಗಳೂ ಸಿಗಲಿವೆ. ಈ ಹಿಂದೆ ವಾರಕ್ಕೆ ಎರಡು ಬಾರಿ ನೀಡುತ್ತಿದ್ದ ಮೊಟ್ಟೆ ಮತ್ತು ಹಾಲನ್ನು ಇನ್ನು ವಾರಕ್ಕೆ ಮೂರು ಬಾರಿ ವಿತರಿಸಲಾಗುತ್ತದೆ.

ಅಲಪ್ಪುಳದ ಪುಟ್ಟ ಬಾಲಕ ಶಂಕು ಮಾಡಿದ ಮನವಿಗೆ ಸ್ಪಂದಿಸಿ ಈ ವರ್ಷದ ಫೆಬ್ರುವರಿಯಲ್ಲಿ ಹೊಸ ಮೆನು ಸಿದ್ಧಪಡಿಸುವ ಭರವಸೆಯನ್ನು ಜಾರ್ಜ್ ನೀಡಿದ್ದರು. ಉಪ್ಪಿಟ್ಟಿನ ಬದಲು ಬಿರಿಯಾನಿ ಮತ್ತು ಚಿಕನ್ ಫ್ರೈ ನಿಡುವಂತೆ ಆತ ಮಾಡಿದ್ದ ಮನವಿ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News