×
Ad

ಚಿಕ್ಕಮಗಳೂರು: ಪೋಕ್ಸೋ ಪ್ರಕರಣದ ಆರೋಪಿಗೆ 7 ವರ್ಷ ಕಠಿಣ ಶಿಕ್ಷೆ, ದಂಡ

Update: 2026-03-09 13:25 IST

ಚಿಕ್ಕಮಗಳೂರು: ಜಿಲ್ಲೆಯ ಮಲ್ಲಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಪ್ರಾಪ್ತ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ವಿಚಾರಣೆ ನಡೆಸಿದ ಇಲ್ಲಿನ ನ್ಯಾಯಾಲಯವು ಆರೋಪಿಗೆ 7 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ನರಿಗುಡ್ಡೆ ಗ್ರಾಮದ ನಿವಾಸಿ ಮೂರ್ತಿ (45) ಶಿಕ್ಷೆಗೊಳಗಾದ ಆರೋಪಿ. ಪ್ರಕರಣ ಸಂಬಂಧ ರೇಣುಕ ಹೆಚ್.ಆರ್ , ರಕ್ಷಣಾಧಿಕಾರಿ (ಅಸಾಂಸ್ಥಿಕ ಸೇವೆ), ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಚಿಕ್ಕಮಗಳೂರು ಇವರು ದೂರು ದಾಖಲಿಸಿದ್ದರು. ಆರೋಪಿಯು ಬಾಲಕಿಯ ಮೇಲೆ ದೌರ್ಜನ್ಯ ಎಸಗಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ, ಚಿಕ್ಕಮಗಳೂರಿನ ಘನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಎಫ್.ಟಿ.ಎಸ್.ಸಿ.-1) ಈ ಮಹತ್ವದ ತೀರ್ಪು ಪ್ರಕಟಿಸಿದೆ.

ಶಿಕ್ಷೆಯ ಜೊತೆಗೆ ಆರೋಪಿಗೆ 25,000 ರೂ. ದಂಡ ವಿಧಿಸಲಾಗಿದ್ದು, 'ಕರ್ನಾಟಕ ಸಂತ್ರಸ್ತ ಪರಿಹಾರ ಯೋಜನೆ-2011' ರ ಅಡಿಯಲ್ಲಿ ನೊಂದ ಬಾಲಕಿಗೆ 1,00,000 ರೂ. ಪರಿಹಾರ ನೀಡುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ.

ಆಲ್ದೂರು ವೃತ್ತ ನಿರೀಕ್ಷಕರಾದ ಸೋಮೇಗೌಡ ಪಿ.ಪಿ. ಅವರು ಈ ಪ್ರಕರಣದ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಬಿ. ಭರತ್ ಕುಮಾರ್ ವಾದ ಮಂಡಿಸಿದ್ದರು. ತನಿಖಾ ಸಹಾಯಕರಾಗಿ ಎ.ಎಸ್.ಐ. ಸುಬ್ರಮಣಿ, ಸಿ.ಹೆಚ್.ಸಿ. ಅಶೋಕ್ ಕೆ.ಎಂ., ಸಿ.ಪಿ.ಸಿ. ಚಿದಾನಂದ ಕೆ.ಡಿ. ಹಾಗೂ ಪ್ರೋಸೆಸ್ ಕರ್ತವ್ಯದಲ್ಲಿ ಸಿ.ಪಿ.ಸಿ. ಹರ್ಷ ಎಂ.ವಿ. ಸಹಕರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News