×
Ad

ಎನ್.ಆರ್.ಪುರ |ರಾವೂರು ಮೀನುಗಾರರ ಕ್ಯಾಂಪ್ ನಿವಾಸಿಗಳಿಗೆ ಸ್ಮಶಾನದ ಕೊರತೆ

Update: 2025-08-25 23:08 IST

ಚಿಕ್ಕಮಗಳೂರು, ಆ.25 : ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ರಾವೂರು ಕ್ಯಾಂಪ್‌ನಲ್ಲಿ ನೂರಾರು ಮೀನುಗಾರರ ಕುಟುಂಬಗಳು ವಾಸವಾಗಿದ್ದು, ಇಲ್ಲಿ ಸ್ಮಶಾನ ಜಾಗದ ಕೊರತೆ ಎದುರಿಸುತ್ತಿದ್ದಾರೆ.

ಜಿಲ್ಲೆಯ ನರಸಿಂಹರಾಜಪುರ (ಎನ್.ಆರ್.ಪುರ) ತಾಲೂಕಿನ ಮೆಣಸೂರು ಗ್ರಾಪಂ ವ್ಯಾಪ್ತಿಯಲ್ಲಿರುವ ರಾವೂರು ಕ್ಯಾಂಪ್‌ನಲ್ಲಿ ನೂರಾರು ಮೀನುಗಾರರ ಕುಟುಂಬಗಳು ಅನೇಕ ವರ್ಷಗಳಿಂದ ವಾಸವಾಗಿವೆ. ಈ ಗ್ರಾಮದ ನಿವಾಸಿಗಳು ಭದ್ರಾ ಡ್ಯಾಮ್‌ನ ಹಿನ್ನೀರಿನಲ್ಲಿ ಮೀನು ಹಿಡಿದು ಜೀವನ ನಡೆಸುತ್ತಿದ್ದಾರೆ. ಹಲವಾರು ದಶಕಗಳಿಂದ ಈ ಗ್ರಾಮದಲ್ಲಿ ಮೀನುಗಾರರ ಕುಟುಂಬಗಳು ವಾಸವಾಗಿದ್ದರೂ ಇಲ್ಲಿ ಸ್ವಂತದ್ದೊಂದು ಸ್ಮಶಾನ ಜಾಗ ಇಲ್ಲವಾಗಿದೆ ಎಂದು ನಿವಾಸಿಗಳು ಅಳಲು ತೋಡಿಕೊಳ್ಳುತ್ತಿದ್ದಾರೆ.

ಕ್ಯಾಂಪ್‌ನಲ್ಲಿ ಅನಾರೋಗ್ಯ ಮತ್ತಿತರ ಕಾರಣದಿಂದಾಗಿ ಯಾರಾದರೂ ಮೃತಪಟ್ಟಲ್ಲಿ ಅವರನ್ನು ಭದ್ರಾ ಅಣೆಕಟ್ಟೆಯ ಹಿನ್ನೀರಿನಲ್ಲಿ ಮೊಣಕಾಲುದ್ದದ ನೀರಿನಲ್ಲಿ ನಡೆದುಕೊಂಡು ನಂತರ ತೆಪ್ಪದ ಸಹಾಯದಿಂದ ಕ್ಯಾಂಪ್‌ನ ಮತ್ತೊಂದು ಬದಿಯಲ್ಲಿರುವ ಸರಕಾರಿ ಭೂಮಿಯಲ್ಲಿ ಅಂತ್ಯಸಂಸ್ಕಾರ ಮಾಡುವಂತಾಗಿದೆ. ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಅಧಿಕಾರಿಗಳು, ಶಾಸಕರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬೇಸಿಗೆಯಲ್ಲಿ ಭದ್ರಾ ಡ್ಯಾಮ್‌ನಲ್ಲಿ ನೀರು ಕಡಿಮೆ ಇರುವುದರಿಂದ ಹಿನ್ನೀರು ಕಡಿಮೆಯಾಗುತ್ತದೆ. ಈ ವೇಳೆ ಅಣೆಕಟ್ಟೆಯ ಹಿನ್ನೀರು ತುಂಬುವ ಜಾಗದ ದಡದಲ್ಲಿ ನಡೆದುಕೊಂಡು ಹೋಗಿ ಅಂತ್ಯಸಂಸ್ಕಾರ ಮಾಡುವ ನಿವಾಸಿಗಳು ಮಳೆಗಾಲದಲ್ಲಿ ಮಾತ್ರ ಭಾರೀ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಮಳೆಗಾಲದಲ್ಲಿ ಇಲ್ಲಿ ಭಾರೀ ನೀರು ಸಂಗ್ರಹವಾಗುವುದರಿಂದ ತೆಪ್ಪ ಮಗುಚಿದಲ್ಲಿ ಭಾರೀ ಅನಾಹುತ ಸಂಭವಿಸುವ ಸಾಧ್ಯತೆ ಇದ್ದು, ಈ ಹಿಂದೆ ಅನೇಕ ಬಾರಿ ಇಂತಹ ಅವಘಡಗಳು ನಡೆದಿವೆ ಎಂದು ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ. ರಾವೂರು ಕ್ಯಾಂಪ್‌ನ ನಿವಾಸಿಗಳಿಗಾಗಿ ಕ್ಯಾಂಪ್ ಸಮೀಪ ಶಾಶ್ವತ ಸ್ಮಶಾನ ಜಾಗ ಮಂಜೂರು ಮಾಡಿಕೊಡುವಂತೆ ಸಂಬಂಧಿಸಿದ ಇಲಾಖಾಧಿಕಾರಿಗಳೂ ಸೇರಿದಂತೆ ಹಾಲಿ ಶಾಸಕ ಟಿ.ಡಿ.ರಾಜೇಗೌಡ, ಹಿಂದೆ ಶಾಸಕ, ಮಂತ್ರಿಯಾಗಿದ್ದ ಡಿ.ಎನ್.ಜೀವರಾಜ್ ಅವರಿಗೂ ನಿವಾಸಿಗಳು ಹಲವಾರು ಬಾರಿ ಮನವಿ ಮಾಡಿದ್ದೆವು. ಆದರೆ, ಯಾವುದೇ ಪ್ರಯೋಜನವಾಗಿಲ್ಲ ಎಂದು ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾವೂರು ಕ್ಯಾಂಪ್‌ನಲ್ಲಿ ಸೋಮವಾರ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಅವರನ್ನು ಭದ್ರಾ ಅಣೆಕಟ್ಟೆಯ ಹಿನ್ನೀರಿನಲ್ಲಿ ತೆಪ್ಪದ ಸಹಾಯದಿಂದ ಮತ್ತೊಂದು ದಡಕ್ಕೆ ಕೊಂಡೊಯ್ದು ಅಂತ್ಯಸಂಸ್ಕಾರ ಮಾಡಿದ್ದೇವೆ. ನೀರು ಹೆಚ್ಚು ಸಂಗ್ರಹವಾಗಿರುವುದರಿಂದ ಅಪಾಯದ ನಡುವೆಯೂ ಪ್ರಾಣಭೀತಿ ತೊರೆದು ಅಂತ್ಯಸಂಸ್ಕಾರ ಮಾಡುವಂತಹ ಪರಿಸ್ಥಿತಿ ನಮ್ಮದಾಗಿದೆ. ನಮ್ಮ ಸಮಸ್ಯೆಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ. ನಮ್ಮ ಗೋಳನ್ನೂ ಯಾರೂ ಕೇಳುತ್ತಿಲ್ಲ. ಮಳೆಗಾದಲ್ಲಿ ನಮಗೆ ಇಂತಹ ಸಂಕಟ ಅನುಭವಿಸುವುದು ಸಾಮಾನ್ಯವಾಗಿದೆ. ರಾವೂರು ಕ್ಯಾಂಪ್ ಸುತ್ತಮುತ್ತ ಸರಕಾರಿ ಜಾಗವಿದ್ದರೂ ಸ್ಮಶಾನ ಜಾಗ ಮಂಜೂರು ಮಾಡಲು ನಿರ್ಲಕ್ಷ್ಯ ವಹಿಸಲಾಗಿದೆ. ಇನ್ನಾದರೂ ಸಂಬಂಧಿಸಿದ ಇಲಾಖೆಯವರು, ಶಾಸಕರು ನಮ್ಮ ಸಮಸ್ಯೆಗೆ ಸ್ಪಂದಿಸಬೇಕು. ಕೂಡಲೇ ಸರಕಾರಿ ಜಾಗದಲ್ಲಿ ಸ್ಮಶಾನ ಜಾಗ ಮಂಜೂರು ಮಾಡಬೇಕು.

ರವಿಕುಮಾರ್, ರಾವೂರು ಕ್ಯಾಂಪ್ ನಿವಾಸಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಕೆ.ಎಲ್.ಶಿವು, ಚಿಕ್ಕಮಗಳೂರು

contributor

Similar News