ಚಿಕ್ಕಮಗಳೂರು | ಕಿವಿ ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಮೃತ್ಯು: ವೈದ್ಯರ ನಿರ್ಲಕ್ಷ್ಯ ಆರೋಪ
ಚಿಕ್ಕಮಗಳೂರು: ಕಿವಿಯ ಶಸ್ತ್ರಚಿಕಿತ್ಸೆಗೆ ದಾಖಲಾಗಿದ್ದ ಮಹಿಳೆಯೊಬ್ಬರು ವೈದ್ಯರು ಅರಿವಳಿಕೆ ನೀಡುತ್ತಿದ್ದಂತೆ ಕುಸಿದುಬಿದ್ದು ಮೃತಪಟ್ಟ ಘಟನೆ ಚಿಕ್ಕಮಗಳೂರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ರಾತ್ರಿ ನಡೆದಿರುವುದು ವರದಿಯಾಗಿದೆ.
ಮೃತರನ್ನು ಭಾಗ್ಯಾ(33) ಎಂದು ಗುರುತಿಸಲಾಗಿದೆ. ಈ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಮೃತರ ಕುಟುಂಬಸ್ಥರು ಗಂಭೀರ ಆರೋಪಿಸಿದ್ದಾರೆ.
ಚಿಕ್ಕಮಗಳೂರು ನಗರದ ಮೂಡಿಗೆರೆ ಮಾರ್ಗದ ಅನ್ನಪೂರ್ಣ ಖಾಸಗಿ ಆಸ್ಪತ್ರೆಯಲ್ಲಿ ಈ ದುರ್ಘಟನೆ ನಡೆದಿದೆ. ಮಂತ್ರಾಲಯದಿಂದ ಬಂದು ಕಳೆದ ಹತ್ತು ವರ್ಷಗಳಿಂದ ಚಿಕ್ಕಮಗಳೂರು ನಗರದ ಹಿರೇಮಗಳೂರಿನಲ್ಲಿ ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಭಾಗ್ಯಾ ಕಿವಿ ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿದ್ದರು. ಇದಕ್ಕೆ ಶಸ್ತ್ರಚಿಕಿತ್ಸೆಗೆ ಒಳಗಾಗಲು ವೈದ್ಯರು ಸೂಚಿಸಿದ್ದು, ಅದರಂತೆ ಮಂಗಳವಾರ ಸಂಜೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಶಸ್ತ್ರಚಿಕಿತ್ಸೆಗೂ ಮುನ್ನ ವೈದ್ಯರು ಭಾಗ್ಯಾರಿಗೆ ಅನಸ್ತೇಷಿಯಾ ನೀಡಿದ್ದಾರೆ. ಈ ವೇಳೆ ಹೃದಯಾಘಾತದಿಂದ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಆದರೆ, ವೈದ್ಯರ ನಿರ್ಲಕ್ಷ್ಯದಿಂದಲೇ ಭಾಗ್ಯಾ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದು, ಆಸ್ಪತ್ರೆ ಎದುರು ಗೋಳಾಟ ನಡೆಸಿದ್ದಾರೆ.
ಚಿಕ್ಕಮಗಳೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಘಟನೆಯ ನಿಖರ ಕಾರಣ ತಿಳಿದುಬರಲಿದೆ.
ಮೃತ ಭಾಗ್ಯಾರಿಗೆ ಎರಡು ಹೆಣ್ಣು ಮತ್ತು ಒಂದು ಗಂಡು ಮಗು ಇದ್ದು ಒಂದು ಮಗು ವಿಕಲ ಚೇತನವಾಗಿದೆ. ಗಂಡ-ಹೆಂಡತಿ ಇಬ್ಬರೂ ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಇದೀಗ, ಭಾಗ್ಯಾರ ಅಕಾಲಿಕ ಸಾವಿನಿಂದಾಗಿ ಕುಟುಂಬ ಸಂಕಷ್ಟಕ್ಕೀಡಾಗಿದೆ.