Koppa | ಡಿ.5ರಂದು ಸಂತ ಜೋಸೆಫರ ಪ್ರೌಢ ಶಾಲೆಯ ವಜ್ರ ಮಹೋತ್ಸವ
ಚಿಕ್ಕಮಗಳೂರು : ಕೊಪ್ಪ ಸಂತ ಜೋಸೆಫರ ಪ್ರೌಢಶಾಲೆಯ ವಜ್ರಮಹೋತ್ಸವ ಆಚರಣೆ ಕಾರ್ಯಕ್ರಮವು ಡಿಸೆಂಬರ್ 5ರಂದು ಆಯೋಜಿಸಲಾಗಿದೆ. ಈ ಸಂಬಂಧ ಸ್ವಾಗತ ಸಮಿತಿ, ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರು ಹಾಗೂ ಕಾರ್ಯಕಾರಿ ಮಂಡಳಿ ಸದಸ್ಯರ ಸಭೆಯನ್ನು ಶುಕ್ರವಾರ ನಡೆಸಲಾಯಿತು.
ಈ ವೇಳೆ ಮಾತನಾಡಿದ ಸ್ವಾಗತ ಸಮಿತಿ ಅಧ್ಯಕ್ಷ ಎಚ್.ಜಿ.ವೆಂಕಟೇಶ್, ವಜ್ರಮಹೋತ್ಸವ ಆಚರಣೆಯ ಧ್ಯೇಯೋದ್ದೇಶಗಳನ್ನು ವಿವರಿಸಿ, ಸರ್ವರನ್ನು ಆಮಂತ್ರಿಸಿದರು. ಹಾಗೂ ಶಾಲೆಯ ಎಲ್ಲ ಹಳೇ ವಿದ್ಯಾರ್ಥಿಗಳಿಗೆ ಆಹ್ವಾನ ಪತ್ರಿಕೆ ತಲುಪಲು ಸಹಕರಿಸುವಂತೆ ವಿನಂತಿಸಿಕೊಂಡರು.
ಶಾಲೆಯ ಕಾನೂನು ಸಲಹೆಗಾರ ಸುಧೀರ್ ಕುಮಾರ್ ಮುರೊಳ್ಳಿ ಮಾತನಾಡಿ, 60 ವರ್ಷಗಳ ಹಿಂದೆ ಮಲೆನಾಡಿನ ಈ ಭಾಗದ ಕೇವಲ ಹೆಣ್ಣು ಮಕ್ಕಳ ಶೈಕ್ಷಣಿಕ ಸುಧಾರಣೆಗೆಂದು ಪ್ರಾರಂಭವಾದ ಈ ಸಂಸ್ಥೆ 1985ರ ನಂತರ ಕೋ - ಎಜುಕೇಷನ್ (ಗಂಡು ಮತ್ತು ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ) ಪ್ರಾರಂಭಿಸಿ ಸಾವಿರಾರು ಮಕ್ಕಳ ಭವಿಷ್ಯದ ಭಾಷ್ಯವನ್ನು ಬರೆದಿದೆ. ಈ ಶಾಲೆಯು ತನ್ನ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಮಟ್ಟದ ಸರ್ವತೋಮುಖ ವಿದ್ಯಾಭ್ಯಾಸವನ್ನು ನೀಡುವುದರೊಂದಿಗೆ ಈ ಭಾಗದ ಖಾಸಗಿ ಶಾಲೆಗಳ ಶ್ರೇಣಿಯಲ್ಲಿ ಮುಂಚೂಣಿಯಲ್ಲಿದ್ದು, ಸುಮಾರು 6,000ಕ್ಕೂ ಮಿಗಿಲಾಗಿ ಹಿರಿಯ ವಿದ್ಯಾರ್ಥಿಗಳ ಬಳಗವನ್ನು ಹೊಂದಿದೆ. ಶಾಲೆಯ ಆವರಣದಲ್ಲಿ ‘ಹಿರಿಯ ವಿದ್ಯಾರ್ಥಿಗಳ ಸಂಘದ’ ಪ್ರತ್ಯೇಕ ಕಚೇರಿಯನ್ನು ಹೊಂದಿದ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಪಾರ ಸಂಖ್ಯೆಯಲ್ಲಿರುವ ಈ ಶಾಲೆಯ ಹಿರಿಯ ವಿದ್ಯಾರ್ಥಿಗಳು ವಜ್ರಮಹೋತ್ಸವ ಕಾರ್ಯಕ್ರಮದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಿದರು.
ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ದೀಪಕ್ ಎಚ್.ಎಲ್. ಮಾತನಾಡಿ, ವಜ್ರಮಹೋತ್ಸವ ಕಾರ್ಯಕ್ರಮ ಅಂಗವಾಗಿ ಸುಮಾರು 2,000ಕ್ಕೂ ಅಧಿಕ ಹಿರಿಯ ವಿದ್ಯಾರ್ಥಿಗಳ ಸಂಪರ್ಕವನ್ನು ಸಾಧಿಸಿದ್ದು, ಬಹುತೇಕ ಹಿರಿಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗುವುದಲ್ಲದೆ ಶಾಲೆಯ ಅಭಿವೃದ್ಧಿಗೆ ತನು-ಮನ-ಧನ ಸಹಾಯ ನೀಡುತ್ತಿದ್ದಾರೆ ಎಂದರು.
ಶಾಲೆಯ ಮುಖ್ಯೋಪಾಧ್ಯಾಯ ಭಗಿನಿ ಅನಿತಾ ಮಿನೇಜಸ್ ಮಾತನಾಡಿ, ಹಿರಿಯ ವಿದ್ಯಾರ್ಥಿಗಳ ಸಂಘ ಮತ್ತು ವಜ್ರಮಹೋತ್ಸವ ಸಮಿತಿಯ ಎಲ್ಲ ಸದಸ್ಯರಿಂದ ಈ ಅಭೂತಪೂರ್ವ ಕಾರ್ಯ ಸಾಧ್ಯವಾಗಿದೆ ಎಂದು ತಿಳಿಸುತ್ತಾ, ಎಲ್ಲ ಹಿರಿಯ ವಿದ್ಯಾರ್ಥಿಗಳಿಗೆ ವಜ್ರಮಹೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದರು.
ಶಿಕ್ಷಕ ಛಾಯಾಪತಿ ನಿರೂಪಿಸಿದರು.