×
Ad

Chikkamagaluru | ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ ಆರೋಪ : ಪ್ರಾಧ್ಯಾಪಕನ ವಿರುದ್ಧ ದೂರು; ಪ್ರತಿದೂರು ದಾಖಲು

Update: 2025-11-26 20:27 IST

ಸಾಂದರ್ಭಿಕ ಚಿತ್ರ

ಚಿಕ್ಕಮಗಳೂರು : ಇಲ್ಲಿನ ವೈದ್ಯಕೀಯ ಕಾಲೇಜು ವಿದ್ಯಾರ್ಥಿನಿಯೊಬ್ಬರು ಪ್ರಾಧ್ಯಾಪಕರೊಬ್ಬರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದು, ಪೊಲೀಸರಿಗೆ ಮಂಗಳವಾರ ರಾತ್ರಿ ದೂರು ನೀಡಿದ್ದಾರೆ.

ಕಾಲೇಜಿನ ಪ್ರಾಧ್ಯಾಪಕ ಡಾ.ಗಂಗಾಧರ ಅವರು ಅಸಭ್ಯ ಮೆಸೇಜ್ ಕಳುಹಿಸಿದ್ದಾರೆ. ಅವರು ಹೇಳಿದಂತೆ ಕೇಳದ ಕಾರಣಕ್ಕೆ ಹಾಜರಾತಿ ಕೊರತೆಯ ನೆಪದಲ್ಲಿ ಪರೀಕ್ಷೆಗೆ ಹಾಜರಾಗದಂತೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಕುರಿತು ವಿದ್ಯಾರ್ಥಿನಿ ನೀಡಿರುವ ಹೇಳಿಕೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಈ ಸಂಬಂಧ ಕಾಲೇಜಿನ ಪ್ರಾಧ್ಯಾಪಕ ಗಂಗಾಧರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ತೆರಳಿ ಪ್ರತಿ ದೂರು ಸಲ್ಲಿಸಿದ್ದು, ವಿದ್ಯಾರ್ಥಿನಿ ತರಗತಿಗೆ ಹಾಜರಾಗದ ಕಾರಣ ಹಾಜರಾತಿ ಕೊರತೆಯಾಗಿದೆ. ತನ್ನ ವಿರುದ್ಧ ಕಾಲೇಜಿಗೆ ಲಿಖಿತ ದೂರು ನೀಡಿಲ್ಲ. ಆಂತರಿಕ ವಿಚಾರಣಾ ಸಮಿತಿ, ಪೋಶ್ ಸಮಿತಿ ಮುಂದೆಯೂ ದೂರು ನೀಡಿಲ್ಲ. ಇದು ಎರಡು ವರ್ಷಗಳ ಹಳೆಯ ಪ್ರಕರಣವಾಗಿದ್ದು, ಸಂಪೂರ್ಣ ವೈಯಕ್ತಿಕ ವಿಷಯ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಇದೇ ಕಾಲೇಜಿನ ಉಪನ್ಯಾಸಕರೊಬ್ಬರನ್ನು ವಿದ್ಯಾರ್ಥಿನಿ ವಿವಾಹವಾಗಿದ್ದು, ಅ.29ರಂದು ಕೆಲ ಸಂಘಟನೆಗಳ ಜತೆ ಪರೀಕ್ಷೆಗೆ ಅರ್ಹತೆ ನೀಡುವಂತೆ ಕೇಳಿದ್ದರು. ಈ ವೇಳೆ ತನ್ನ ವಿರುದ್ಧ ಆರೋಪ ಮಾಡಿದ್ದರು. ಪೊಲೀಸರಿಗೆ ಲಿಖಿತವಾಗಿ ದೂರು ನೀಡಲು ವಿದ್ಯಾರ್ಥಿನಿಗೆ ತಿಳಿಸಲಾಗಿತ್ತು. ಹಾಜರಾತಿ ಮತ್ತು ಅಂಕಗಳ ಕೊರತೆ ಇರುವುದರಿಂದ ಪೂರಕ ಪರೀಕ್ಷೆ ಬರೆಯಲು ಒಪ್ಪಿದ್ದರು ಎಂದು ಅವರು ಮನವಿಯಲ್ಲಿ ವಿವರಿಸಿದ್ದಾರೆ.

ಈಗ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ಹರಿಬಿಟ್ಟಿದ್ದು, ಕಾಲೇಜಿನ ಗೌರವಕ್ಕೆ ಧಕ್ಕೆಯಾಗುತ್ತಿದೆ. ದುರುದ್ದೇಶದಿಂದ ಕೂಡಿರುವ ವೀಡಿಯೊ ಪ್ರಸರಣ ತಡೆಯಬೇಕು ಎಂದು ಮನವಿ ಮಾಡಿದ್ದಾರೆ.

ʼಗಂಗಾಧರ ಅವರ ವಿರುದ್ಧ ಲಿಖಿತ ದೂರನ್ನು ಕಾಲೇಜಿಗೆ ನೀಡಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಅವರು ಮಾಡಿರುವ ಆರೋಪದ ವೀಡಿಯೊ ನೋಡಿದ ಬಳಿಕ ನೋಟಿಸ್ ನೀಡಿದ್ದೇವೆʼ

ಹರೀಶ್, ಡೀನ್, ಚಿಕ್ಕಮಗಳೂರು ಮೆಡಿಕಲ್ ಕಾಲೇಜು

ʼವಿದ್ಯಾರ್ಥಿನಿ ಪ್ರಾಧ್ಯಾಪಕನ ವಿರುದ್ಧ ದೂರು ನೀಡಿದ್ದು, ಘಟನೆ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಮಗ್ರ ತನಿಖೆ ಬಳಿಕ ಸತ್ಯಾಂಶ ಹೊರಬರಲಿದೆʼ

ಡಾ.ವಿಕ್ರಮ್ ಅಮಟೆ, ಎಸ್ಪಿ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News