Chikkamagaluru | ಅಯ್ಯಪ್ಪ ಮಾಲೆ ಧರಿಸಿ ಬಂದವರನ್ನು ಕಾಲೇಜಿನಿಂದ ಹೊರ ಕಳುಹಿಸಿದ ಪ್ರಾಂಶುಪಾಲರು; ಆರೋಪ
ಚಿಕ್ಕಮಗಳೂರು : ಅಯ್ಯಪ್ಪಸ್ವಾಮಿ ಮಾಲೆ ಧರಿಸಿ ಕಾಲೇಜಿಗೆ ಬಂದಿದ್ದ ಮೂವರು ವಿದ್ಯಾರ್ಥಿಗಳನ್ನು ಪ್ರಾಂಶುಪಾಲರು ಕಾಲೇಜಿನಿಂದ ಹೊರಕಳಿಸಿದ ಘಟನೆ ನಗರದ ಎಂಇಎಸ್ ಕಾಲೇಜಿನಲ್ಲಿ ನಡೆದಿದೆ. ಕಾಲೇಜಿನ ನಡೆಗೆ ಹಿಂದುತ್ವ ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೊದಲ ವರ್ಷದ ಪಿಯುಸಿ ಓದುತ್ತಿರುವ ಮೂವರು ವಿದ್ಯಾರ್ಥಿಗಳು ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ಸೋಮವಾರ ಕಾಲೇಜಿಗೆ ಬಂದಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಪ್ರಾಂಶುಪಾಲರು ವಿದ್ಯಾರ್ಥಿಗಳನ್ನು ತರಗತಿಯಲ್ಲಿ ಕೂರಲು ಅವಕಾಶ ಕೊಡದೆ ಹೊರಗೆ ಕಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ, ಅಯ್ಯಪ್ಪ ಸ್ವಾಮಿ ಮಾಲೆ ತೆಗೆದು ಬರುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಘಟನೆ ಬೆಳಕಿಗೆ ಬರುತ್ತಿದ್ದಂತೆ ಕಾಲೇಜಿಗೆ ಹಿಂದುತ್ವ ಸಂಘಟನೆಗಳ ಮುಖಂಡರು ಆಗಮಿಸಿ ಪ್ರಾಂಶುಪಾಲರ ತಾರತಮ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಪ್ರಾಂಶುಪಾಲರು, ಕಾಲೇಜಿನಲ್ಲಿ ಸಮವಸ್ತ್ರ ಬಿಟ್ಟರೆ ಬೇರೆ ಯಾವುದೇ ವಸ್ತ್ರಸಂಹಿತೆಗೆ ಅವಕಾಶವಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ.
ಅದಕ್ಕೆ ಅಸಮಾಧಾನಗೊಂಡ ಹಿಂದುತ್ವ ಸಂಘಟನೆಗಳ ಮುಖಂಡರು, ಮಾಲೆ ಧರಿಸಿದ ಹುಡುಗರು ಕಾಲೇಜಿನ ಸಮವಸ್ತ್ರದಲ್ಲಿಯೇ ಬಂದಿದ್ದಾರೆ. ಸಮವಸ್ತ್ರದ ಮೇಲೆ ಒಂದು ಕಪ್ಪುವಸ್ತ್ರ ಧರಿಸಿದ್ದಾರೆ ಅಷ್ಟೇ. ಇದು ನಿಮ್ಮ ವಸ್ತ್ರಸಂಹಿತೆಯ ಉಲ್ಲಂಘನೆ ಹೇಗಾಗುತ್ತದೆ?, ಉದ್ದೇಶ ಪೂರ್ವಕವಾಗಿ ಗುರಿಯಾಗಿರಿಸಿಕೊಂಡು ಈ ರೀತಿ ಕ್ರಮ ಕೈಗೊಳ್ಳುತ್ತಿದ್ದೀರಾ ಎಂದು ಆರೋಪಿಸಿ ಪ್ರಾಂಶುಪಾಲರೊಂದಿಗೆ ವಾಗ್ವಾದ ನಡೆಸಿದ್ದಾರೆ.
ಬಳಿಕ ಮಾಲೆ ಧರಿಸಿ ಬಂದಿದ್ದ ವಿದ್ಯಾರ್ಥಿಗಳನ್ನು ಕಾಲೇಜಿಗೆ ಹೋಗಲು ಪ್ರಾಂಶುಪಾಲರು ಅನುಮತಿ ನೀಡಿದ್ದರಿಂದ ಪರಿಸ್ಥಿತಿ ತಿಳಿಗೊಂಡಿದೆ.