×
Ad

ಚಿಕ್ಕಮಗಳೂರು | ಯುವತಿಗೆ ಚೂರಿ ಇರಿದು ಕೊಲೆಗೆ ಯತ್ನ : ಆರೋಪಿಯ ಬಂಧನ

Update: 2025-09-06 12:49 IST

ಚಿಕ್ಕಮಗಳೂರು: ಪ್ರೇಮ ವೈಫಲ್ಯದಿಂದ ಮನನೊಂದ ಯುವಕನೊರ್ವ ಯುವತಿಗೆ ಚಾಕು ಇರಿದು ಕಲ್ಲಿನಿಂದ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ ಘಟನೆ ಶುಕ್ರವಾರ ಸಂಜೆ ಜಿಲ್ಲೆಯ ಕಳಸ ಪಟ್ಟಣದಲ್ಲಿ ವರದಿಯಾಗಿದೆ.

ಕೊಪ್ಪ ತಾಲೂಕಿನ ಗುಡ್ಡೆತೋಟದ ಯುವತಿ ಮಾಜಿ ಪ್ರಿಯಕರನಿಂದ ಚಾಕು ಇರಿತಕ್ಕೊಳಗಾದ ಯುವತಿಯಾಗಿದ್ದು, ಈಕೆ ಕಳಸ ಪಟ್ಟಣದ ಕಾವೇರಿ ನರ್ಸಿಂಗ್ ಹೋಮ್ ನಲ್ಲಿ ಲ್ಯಾಬ್ ಟೆಕ್ನಿಶಿಯನ್ ಆಗಿ ಕೆಲಸ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ.

ಕೊಪ್ಪ ತಾಲೂಕಿನ ಜಯಪುರ ನಿವಾಸಿ ಮೋಹನ್ ಕುಮಾರ್ (24) ಹಲ್ಲೆ ಮಾಡಿದ ಯುವಕನಾಗಿದ್ದಾನೆ.

ಮೋಹನ್ ಕುಮಾರ್ ಹಾಗೂ ಯುವತಿ ಕೆಲ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇತ್ತೀಚೆಗೆ ಇಬ್ಬರ ನಡುವೆ ಮನಸ್ತಾಪ ಉಂಟಾಗಿದ್ದು, ಯುವತಿ ಬೇರೊಬ್ಬನನ್ನ ಪ್ರೀತಿಸುತ್ತಿದ್ದಳು. ಇದರಿಂದ‌ ಮನನೊಂದ ಯುವಕ ಯುವತಿಯನ್ನು ಕೊಂದು ತಾನೂ ಸಾಯಲು ನಿರ್ದರಿಸಿದ್ದ. ಶುಕ್ರವಾರ ಕಳಸ ಪಟ್ಟಣಕ್ಕೆ ಬಸ್ ನಲ್ಲಿ‌ಬಂದಿದ್ದ ಮೋಹನ್ ಕುಮಾರ್, ಆಸ್ಪತ್ರೆ ಸಮೀಪದ ಮಹಾವೀರ ರಸ್ತೆಯ ಬಳಿಯ ಓಣಿಯಲ್ಲಿ ಯುವತಿಗೆ ಹಿಂದಿನಿಂದ ಬಂದು ಚೂರಿ ಇರಿದಿದ್ದಾನೆ. ನಂತರ ಯುವತಿಯ ತಲೆಗೆ ಕಲ್ಲಿನಿಂದ ಹಲ್ಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡ ಯುವತಿ ಕಿರುಚಿಕೊಂಡಿದ್ದರಿಂದ ಅಕ್ಕಪಕ್ಕದವರು ಸ್ಥಳಕ್ಕೆ ಬಂದಿದ್ದರಿಂದ ಯುವಕ ಪರಾರಿಯಾಗಿದ್ದಾನೆ. ಯುವಕ ಹಲ್ಲೆ ಮಾಡಿ ಪರಾರಿಯಾಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಹಲ್ಲೆ ಬಳಿಕ ಯುವಕ ಬೈಕ್ ಹಾಗೂ ಬಸ್ ಮೂಲಕ ಕೊಟ್ಟಿಗೆಹಾರ ತಲುಪಿದ್ದ, ಈ ಮಧ್ಯೆ ಎಸ್ಪಿ ಡಾ.ವಿಕ್ರಮ್ ಅಮಟೆ ಅವರು ಆರೋಪಿ ಬಂಧನಕ್ಕಾಗಿ 4 ತಂಡ ರಚಿಸಿದ್ದು, ಈ ತಂಡ ಆರೋಪಿಯನ್ನು ಕೊಟ್ಟಿಗೆಹಾರದಲ್ಲಿ ಬಂಧಿಸಿದೆ.

ಆರೋಪಿ ಬಳಿ ವಿಷದ ಬಾಟಲಿ ಪತ್ತೆಯಾಗಿದ್ದು, ಯುವತಿ ಮೃತಪಟ್ಟ ಬಳಿಕ ತಾನೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News