×
Ad

ಚಿಕ್ಕಮಗಳೂರು | ತುಂಗಾ ನದಿಗೆ ಶೃಂಗೇರಿ ಮಠದ ಬಳಿ 89 ಕೋಟಿ ರೂ. ವೆಚ್ಚದಲ್ಲಿ ಬ್ಯಾರೇಜ್ ನಿರ್ಮಾಣ

Update: 2025-11-25 13:40 IST

ಸಾಂದರ್ಭಿಕ ಚಿತ್ರ

ಚಿಕ್ಕಮಗಳೂರು: 8ನೇ ಶತಮಾನದಲ್ಲಿ ಆದ್ವೈತ ವೇದಾಂತದ ಪ್ರತಿಪಾದಕರಾದ ಶ್ರೀ ಶಂಕರಾಚಾರ್ಯರು ಸ್ಥಾಪಿಸಿದ ದೇಶದ ಪ್ರಸಿದ್ಧ ತೀರ್ಥಕ್ಷೇತ್ರ ಶೃಂಗೇರಿ ಶಾರದಾ ಪೀಠದ ಬಳಿ ವರ್ಷದ ಹನ್ನೆರಡು ತಿಂಗಳು ಮಠದ ಭಕ್ತಾದಿಗಳಿಗೆ ಧಾರ್ಮಿಕ ವಿಧಿವಿಧಾನಗಳನ್ನು ತೊಂದರೆಯಿಲ್ಲದೆ ನೆರವೇರಿಸಲು ನೀರಿನ ಕೊರತೆಯಾಗದಂತೆ ತುಂಗಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗುವ ಬ್ಯಾರೇಜ್ ಕಾಮಗಾರಿ ಶೀಘ್ರದಲ್ಲಿ ಆರಂಭವಾಗಲಿದೆ.

ಶ್ರೀಮಠದ ಮನವಿಯಂತೆ ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ಡಿ. ರಾಜೇಗೌಡರ ಕೋರಿಕೆ, ಜೊತೆಗೆ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿಶೇಷ ಆಸಕ್ತಿ ಮತ್ತು ಪ್ರಯತ್ನದಿಂದ ಈ ಯೋಜನೆ ಕಾರ್ಯರೂಪಕ್ಕೆ ಬಂದಿದೆ. ತುಂಗಾ ನದಿಯ ಹರಿವಿನ ಉದ್ದಕ್ಕೂ 19 ಬ್ಯಾರೇಜ್‌ಗಳ ಯೋಜನೆ ರೂಪಿತವಾಗಿದ್ದರೂ, ವಿಶ್ವೇಶ್ವರಯ್ಯ ಜಲನಿಗಮದ ಸಭೆಯಲ್ಲಿ ಶೃಂಗೇರಿ ಶ್ರೀಮಠಕ್ಕೆ ಸಂಬಂಧಿಸಿದ ಬ್ಯಾರೇಜ್‌ಗೆ ಮಾತ್ರ ಮಂಜೂರಾತಿ ದೊರೆತಿದೆ.

ಯೋಜನೆಯ ಒಟ್ಟು ವೆಚ್ಚ 89 ಕೋಟಿ ರೂ. ಆಗಿದ್ದು, ಶೃಂಗೇರಿ ಮಠದ ತೂಗುಸೇತುವೆಯ ಕೆಳಭಾಗದಲ್ಲಿ ನೀರು ಸಂಗ್ರಹಿಸುವ ಉದ್ದೇಶದಿಂದ ಬ್ಯಾರೇಜ್ ನಿರ್ಮಿಸಲಾಗುತ್ತಿದೆ. ಕಾಮಗಾರಿಗೆ ಅಗತ್ಯವಾದ ಅಡಿಪಾಯ ಪರೀಕ್ಷೆಯ ಟ್ರಯಲ್ ಬೋರ್ ಕಾರ್ಯಕ್ಕಾಗಿ ಒಂದು ಕೋಟಿ ರೂ. ಮೌಲ್ಯದ ಟೆಂಡರ್‌ನ್ನು ಡಿಸೈನ್ ಕನ್ಸಲ್ಟಿಂಗ್ ಪ್ರೈವೇಟ್ ಲಿಮಿಟೆಡ್, ಬೆಂಗಳೂರು ಸಂಸ್ಥೆ ಈಗಾಗಲೇ ಪಡೆದಿದೆ. ಮಳೆಯ ಪ್ರಮಾಣ ಕಡಿಮೆಯಾದ ತಕ್ಷಣ ಈ ಕಾರ್ಯ ಆರಂಭವಾಗಲಿದ್ದು, ನದಿಯ ಸುಮಾರು ನಾಲ್ಕರಿಂದ ಐದು ಮೀಟರ್ ಆಳದಲ್ಲಿ ಗಟ್ಟಿಬಂಡೆ ಸಿಗುವವರೆಗೆ ಪರೀಕ್ಷೆ ನಡೆಸಲಾಗುತ್ತದೆ. ಅಡಿಪಾಯ ಪರೀಕ್ಷೆ ಪೂರ್ಣಗೊಂಡ ಬಳಿಕ ಮುಖ್ಯ ಕಾಮಗಾರಿ ಪ್ರಾರಂಭವಾಗಲಿದೆ.

ಬ್ಯಾರೇಜ್‌ ಸುಮಾರು 135 ರಿಂದ 140 ಮೀಟರ್ ಅಗಲ ಮತ್ತು ಮೂರು ಮೀಟರ್ ಎತ್ತರ ಹೊಂದಿರಲಿದೆ. ನೀರಿನ ಮಟ್ಟ ‘ಕಪ್ಪೆ ಶಂಕರ’ ಮಟ್ಟದವರೆಗೆ ಮಾತ್ರ ನಿಲ್ಲಲಿದೆ. ನರಸಿಂಹವನಕ್ಕೆ ಯಾವುದೇ ತೊಂದರೆ ಉಂಟಾಗದಂತೆ ಯೋಜನೆ ರೂಪಿಸಲಾಗಿದ್ದು, ನದಿಯಲ್ಲಿ ಈಗಿರುವ ಮಣ್ಣು ಮತ್ತು ಶಿಲ್ಟ್ ತೆರವುಗೊಳಿಸಲಾಗುತ್ತದೆ. ಮಣ್ಣು ಕೊರೆಯುವ ಪ್ರದೇಶಗಳಲ್ಲಿ ರಿಟೇನ್ ವಾಲ್ ನಿರ್ಮಿಸಲಾಗುತ್ತಿದ್ದು, ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿಯುವಂತೆ ಸುಯಿಜ್ ಗೇಟ್ ವ್ಯವಸ್ಥೆ ನಿರ್ಮಿಸಲಾಗುವುದು.

ಈ ಯೋಜನೆಯಿಂದ ಯಾವುದೇ ಕಾಡು ನಾಶವಾಗುವುದಿಲ್ಲ ಹಾಗೂ ಭೂಮಿ ಮುಳುಗಡೆಯ ಸಾಧ್ಯತೆ ಇಲ್ಲದಿರುವುದರಿಂದ ಇದು ಪರಿಸರ ಸ್ನೇಹಿ ಪ್ರಸ್ತಾಪವಾಗಲಿದೆ. ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಂತರ್‌ ಜಲ ಅಭಿವೃದ್ಧಿ ಸಾಧ್ಯವಾಗುವುದರ ಜೊತೆಗೆ ಪ್ರವಾಸೋದ್ಯಮಕ್ಕೂ ಹೆಚ್ಚುವರಿ ಉತ್ತೇಜನ ಲಭ್ಯವಾಗಲಿದೆ. ವರ್ಷಪೂರ್ತಿ ನೀರು ನಿಲ್ಲುವ ಪರಿಸ್ಥಿತಿ ನಿರ್ಮಾಣವಾದರೆ ಬೋಟಿಂಗ್‌ ವ್ಯವಸ್ಥೆ ಮತ್ತು ಶೃಂಗೇರಿಯ ಗಾಂಧಿ ಮೈದಾನದಲ್ಲಿ ಸುಂದರ ಪಾರ್ಕ್ ನಿರ್ಮಾಣ ಮಾಡಲು ಅವಕಾಶ ಸಿಗುತ್ತದೆ ಎಂದು ಶಾಸಕ ಟಿ.ಡಿ.ರಾಜೇಗೌಡರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಲುಷಿತ ನೀರು ಮತ್ತು ತ್ಯಾಜ್ಯ ಹರಿವಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗುತ್ತಿದೆ. ಯೋಜನೆಯ ಮುಂದಿನ ಹಂತದಲ್ಲಿ ಶೃಂಗೇರಿ ಮೆಣಸೇ ಸಮೀಪ ಮತ್ತು ಹರಿಹರಪುರ ಮಠದ ಬಳಿಯಲ್ಲಿ ತಲಾ ಒಂದು ಬ್ಯಾರೇಜ್ ನಿರ್ಮಿಸುವ ನಿರ್ಧಾರ ನಿರ್ಮಿಸಲಾಗುವುದು. ಈ ಸಂಪೂರ್ಣ ಯೋಜನೆಯ ಮುಖ್ಯ ಉದ್ದೇಶ ತುಂಗಾ ನದಿ ತೀರದ ಅಂತರ್‌ಜಲ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಎನ್ನಲಾಗಿದೆ.



Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಎಂ.ಯೂಸುಫ್ ಪಟೇಲ್

contributor

Similar News