ಚಿಕ್ಕಮಗಳೂರು | ದಲಿತ ಯುವಕನ ಆತ್ಮಹತ್ಯೆ ಪ್ರಕರಣ : ಪೊಲೀಸ್ ಸಿಬ್ಬಂದಿಯ ಬಂಧನ
ಚಿಕ್ಕಮಗಳೂರು, ಆ.17: ಕುದುರೆಮುಖ ಪೊಲೀಸ್ ಠಾಣೆ ಪೊಲೀಸ್ ಪೇದೆಯಿಂದ ಹಲ್ಲೆಗೊಳಗಾಗಿ ನ್ಯಾಯ ಸಿಗಲಿಲ್ಲ ಎಂದು ಡೆತ್ನೋಟ್ ಬರೆದಿಟ್ಟು ದಲಿತ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಸಿಬ್ಬಂದಿಯನ್ನು ಬಂಧಿಸಿರುವುದಾಗಿ ವರದಿಯಾಗಿದೆ.
ಸಿದ್ದೇಶ್ ಬಂಧಿತ ಪೊಲೀಸ್ ಸಿಬ್ಬಂದಿ.
ಆ.13ರಂದು ಕಳಸ ತಾಲೂಕಿನ ಸಂಸೆ ಬಸ್ತಿಗದ್ದೆ ಗ್ರಾಮದ ನಿವಾಸಿ ನಾಗೇಶ್ (32) ಎಂಬ ದಲಿತ ಯುವಕ ಕುದುರೆಮುಖ ಪೊಲೀಸ್ ಸಿಬ್ಬಂದಿ ದೌರ್ಜನ್ಯ ನಡೆಸಿರುವುದಾಗಿ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ವಿಷಯ ತಿಳಿಯುತ್ತಿದ್ದಂತೆ ದಲಿತ, ಪ್ರಗತಿಪರ ಸಂಘಟನೆಗಳ ಮುಖಂಡರು ಕಳಸ ಪಟ್ಟಣದ ಸಮುದಾಯದ ಆರೋಗ್ಯ ಕೇಂದ್ರದ ಬಳಿ ಪೊಲೀಸರ ವಿರುದ್ಧ ಧಿಕ್ಕಾರ ಕೂಗಿ ಧರಣಿ ನಡೆಸಿ ಆರೋಪಿಗಳನ್ನು ಬಂಧಿಸಲು ಆಗ್ರಹಿಸಿದ್ದರು.
ಸದ್ಯ ಪೊಲೀಸರು ಸಿದ್ದೇಶ್ನನ್ನು ಗೋವಾದಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ತಿಳಿದು ಬಂದಿದೆ.