ಚಿಕ್ಕಮಗಳೂರು ಜಿಲ್ಲಾ 14ನೇ ಸಿಪಿಐ ಸಮ್ಮೇಳನ
ಪ್ರಧಾನಿ ಮೋದಿ ಆಧುನಿಕ ಔರಂಗಜೇಬ್ : ಸಿದ್ದನಗೌಡ ಪಾಟೀಲ್
ಚಿಕ್ಕಮಗಳೂರು, ಆ. 7 : ಪ್ರಧಾನಿ ನರೇಂದ್ರ ಮೋದಿ ದಿಲ್ಲಿಯಲ್ಲಿ ಕುಳಿತೇ ಇಡೀ ಭಾರತವನ್ನು ಆಳ್ವಿಕೆ ಮಾಡುವ ಹುನ್ನಾರ ನಡೆಸಿದ್ದು, ಅವರು ಔರಂಗಜೇಬ್ ಮಾದರಿಯ ಆಡಳಿತವನ್ನು ದೇಶದಲ್ಲಿ ಜಾರಿಗೆ ತರಲು ಉದ್ದೇಶಿಸಿದ್ದಾರೆ, ಪ್ರಧಾನಿ ಮೋದಿ ಆಧುನಿಕ ಭಾರತದ ಔರಂಗಜೇಬ್ ಎಂದು ಸಿಪಿಐ ಪಕ್ಷದ ರಾಜ್ಯಾಧ್ಯಕ್ಷ ಡಾ.ಸಿದ್ದನಗೌಡ ಪಾಟೀಲ್ ಟೀಕಿಸಿದ್ದಾರೆ.
ನಗರದ ಆಝಾದ್ ಪಾರ್ಕ್ ವೃತ್ತದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷದ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಚಿಕ್ಕಮಗಳೂರು ಜಿಲ್ಲಾ 14ನೇ ಸಿಪಿಐ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ಪೂರ್ವದಲ್ಲಿ ದೇಶದಲ್ಲಿ ರಾಜರ ಆಳ್ವಿಕೆ ಇತ್ತು, ದೇಶವನ್ನು ಬ್ರಿಟಿಷರು, ಹಿಂದೂ, ಮುಸ್ಲಿಮ್ ರಾಜರೂ ಆಳಿದ್ದಾರೆ. ಈ ಪೈಕಿ ಔರಂಗಜೇಬ್ ದಿಲ್ಲಿಯಲ್ಲಿ ಕುಳಿತುಕೊಂಡು ಇಡೀ ದೇಶವನ್ನು ಆಳ್ವಿಕೆ ಮಾಡುವ ಯೋಜನೆ ಹಾಕಿಕೊಂಡಿದ್ದ. ಆದರೆ ಅದು ಸಫಲವಾಗಲಿಲ್ಲ. ಸ್ವತಂತ್ರ ಭಾರತದಲ್ಲಿ ಸದ್ಯ ಪ್ರಧಾನಿ ಮೋದಿ ಆಡಳಿತ ಇದ್ದು, ಔರಂಗಜೇಬ್‌ನಂತೆ ದಿಲ್ಲಿಯಲ್ಲಿ ಕುಳಿತುಕೊಂಡೇ ದೇಶ ಆಳಲು ಯೋಜನೆ ರೂಪಿಸಿದ್ದಾರೆ. ಅದರ ಭಾಗವೇ ಲೋಕಸಭೆ ಕ್ಷೇತ್ರಗಳ ಪುನರ್ವಿಂಗಡಣೆಯಾಗಿದೆ ಎಂದು ಅವರು ಆರೋಪಿಸಿದರು.
ದಕ್ಷಿಣ ಭಾರತದ ರಾಜ್ಯಗಳ ಪೈಕಿ ಕರ್ನಾಟಕದಲ್ಲಿ ಬಿಜೆಪಿ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣದಲ್ಲಿ ಬಿಜೆಪಿ ಅಧಿಕಾರ ಹಿಡಿಯಲು ಸಾಧ್ಯವೇ ಇಲ್ಲ. ಆದರೆ ಉತ್ತರ ಭಾರತದ ರಾಜ್ಯಗಳಲ್ಲಿ ಅಸ್ತಿತ್ವ ಉಳಿಸಿಕೊಂಡಿದೆ, ಇದನ್ನು ಮನಗಂಡಿರುವ ಬಿಜೆಪಿ, ಆರೆಸ್ಸೆಸ್‌ನವರು ಉತ್ತರ ಭಾರತದಲ್ಲಿರುವ ರಾಜ್ಯಗಳಲ್ಲಿನ ಲೋಕಸಭೆ ಕ್ಷೇತ್ರಗಳನ್ನು ಹೆಚ್ಚು ಮಾಡಿಕೊಳ್ಳುವ ಹುನ್ನಾರ ನಡೆಸಿದೆ. ಇದಕ್ಕಾಗಿ ಲೋಕಸಭೆ ಕ್ಷೇತ್ರಗಳ ಪುನರ್ವಿಂಗಡಣೆಯ ಸಂಚು ಮಾಡಿದೆ ಎಂದ ಅವರು, ಇದರ ವಿರುದ್ಧ ದಕ್ಷಿಣದ ರಾಜ್ಯಗಳು ಧ್ವನಿ ಎತ್ತಿದರೆ, ದಕ್ಷಿಣ ಭಾರತದ ರಾಜ್ಯಗಳ ಲೋಕಸಭೆ ಕ್ಷೇತ್ರಗಳಲ್ಲಿ ಯಾವುದೇ ವ್ಯತ್ಯಾಸ ಆಗುವುದಿಲ್ಲ ಎನ್ನುತ್ತಿದ್ದಾರೆ, ಇದು ನಿಜ ಕೂಡ, ದಕ್ಷಿಣದ ರಾಜ್ಯಗಳಲ್ಲಿ ಲೋಕಸಭೆ ಕ್ಷೇತ್ರಗಳಲ್ಲಿ ಹೆಚ್ಚಾದರೂ, ಕಡಿಮೆಯಾದರೂ ಬಿಜೆಪಿಗೆ ಯಾವುದೇ ಲಾಭ ಇಲ್ಲ, ಆದರೆ ಉತ್ತರದ ರಾಜ್ಯಗಳಲ್ಲಿ ಎಂಪಿ ಕ್ಷೇತ್ರಗಳು ಹೆಚ್ಚಾದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ತಡೆಯಲು ಸಾಧ್ಯವಾಗುವುದಿಲ್ಲ. ಈ ಕಾರಣಕ್ಕೆ ಬಿಜೆಪಿ, ಆರೆಸ್ಸೆಸ್‌ನವರು ಲೋಕಸಭೆ ಕ್ಷೇತ್ರಗಳ ಪುನರ್ವಿಂಗಡಣೆಗೆ ಹುನ್ನಾರ ಮಾಡಿದ್ದಾರೆ. ಇದು ಸಾಕಾರಗೊಂಡಲ್ಲಿ ಸಂವಿಧಾನ ಹಾಗೂ ದೇಶದ ಜನರಿಗೆ ಅಪಾಯ ಕಟ್ಟಿಟ್ಟಬುತ್ತಿ ಎಂದು ಎಚ್ಚರಿಸಿದರು.
ಸಿಪಿಐ ಕಾರ್ಮಿಕರು, ಬಡವರು, ಶೋಷಿತರ ಹಕ್ಕುಗಳಿಗಾಗಿ ಹೋರಾಡುತ್ತಿರುವ ಪಕ್ಷವಾಗಿದೆ. ಬಿಜೆಪಿ, ಜನಸಂಘದಂತಹ ಪಕ್ಷಗಳು ಹುಟ್ಟುವುದಕ್ಕೂ ಮುನ್ನವೇ ಸಿಪಿಐ ಪಕ್ಷ ಹುಟ್ಟಿಕೊಂಡಿದ್ದು, ಸದ್ಯ ಈ ಪಕ್ಷಕ್ಕೆ 100 ವರ್ಷಗಳು ತುಂಬಿದೆ. ನೂರು ವರ್ಷಗಳ ಅವಧಿಯಲ್ಲಿ ಪಕ್ಷ ದೇಶದ ರಾಜಕೀಯ, ಆರ್ಥಿಕ ಕ್ಷೇತ್ರದಲ್ಲಾಗಿರುವ ಹಲವಾರು ಬದಲಾವಣೆಗಳಿಗೆ ತನ್ನದೇಯಾದ ಕೊಡುಗೆ ನೀಡಿದೆ ಎಂದು ತಿಳಿಸಿದರು.
ಸಿಪಿಐ ಪಕ್ಷದ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ಮಾತನಾಡಿ, ಸದ್ಯ ಅಧಿಕಾರದಲ್ಲಿರುವ ಮೋದಿ ಸರಕಾರದ ಆಡಳಿತದಿಂದಾಗಿ ಇಡೀ ದೇಶದಲ್ಲಿ ಅಸಮಾನತೆ ತಾಂಡವವಾಡುತ್ತಿದೆ. ಬಡತನ, ಹಸಿವು, ನಿರುದ್ಯೋಗ, ಬೆಲೆ ಏರಿಕೆ ದುಪ್ಪಟ್ಟಾಗಿದೆ. ರೈತ, ಕಾರ್ಮಿಕ ವಿರೋಧಿ ಕಾನೂನುಗಳನ್ನು ಜಾರಿ ಮಾಡಲಾಗುತ್ತಿದೆ. ದೇಶದ ಶೇ.60 ಸಂಪತ್ತು ಶೇ.1 ಇರುವ ಜನರ ಕೈ ಸೇರಿದೆ ಎಂದ ಅವರು, ಪಕ್ಷದ ಹೋರಾಟದ ಫಲವಾಗಿ ಈ ಹಿಂದಿನ ಸರಕಾರಗಳು ಬಡವರು, ಕಾರ್ಮಿಕರು, ರೈತರು, ಮಹಿಳೆಯರು, ವಿದ್ಯಾರ್ಥಿಗಳ ಪರವಾಗಿ ಜಾರಿ ಮಾಡಿದ್ದ ಕಾನೂನು ಕಾಯ್ದೆಗಳನ್ನು ಹಂತಹಂತವಾಗಿ ರದ್ದು ಮಾಡುತ್ತ ಮೋದಿ ಸರಕಾರ ಶ್ರೀಮಂತರ ಪರವಾದ ಆರ್ಥಿಕ ನೀತಿ ಜಾರಿ ಮಾಡುತ್ತಿದೆ ಎಂದು ದೂರಿದರು.
ರಾಜ್ಯದ ಕಾಂಗ್ರೆಸ್ ಸರಕಾರ ಮೋದಿ ಸರಕಾರದ ಆಡಳಿತವನ್ನೇ ಅನುಸರಿಸುತ್ತಿದೆ. ಮೋದಿ ಸರಕಾರ ಜಾರಿ ಮಾಡಿದ್ದ ಕೃಷಿ, ಭೂಸುಧಾರಣೆ ತಿದ್ದುಪಡಿ ಕಾಯ್ದೆ, ಕಾರ್ಮಿಕರ ಕೆಲಸದ ಅವಧಿ ಹೆಚ್ಚಳ ರದ್ದು ಮಾಡುವುದೂ ಸೇರಿದಂತೆ ಭೂಮಿ, ವಸತಿಯ ಹಕ್ಕು ನೀಡಬೇಕೆಂದು ಸಿಎಂ ಸಿದ್ದರಾಮಯ್ಯ ಅವರಿಗೆ ಪಕ್ಷ ಮನವಿ ಮಾಡಿತ್ತು. ಇದನ್ನು ಈಡೇರಿಸುವ ಭರವಸೆ ನೀಡಿದ್ದ ಸರಕಾರ ಇದುವರೆಗೂ ಯಾವುದೇ ಕ್ರಮಕೈಗೊಂಡಿಲ್ಲ. ಈ ಸಂಬಂಧ ಪಕ್ಷದ ರಾಜ್ಯ ಮತ್ತು ರಾಷ್ಟ್ರೀಯ ಮಂಡಳಿ ಅಧಿವೇಶನದಲ್ಲಿ ಚರ್ಚಿಸಿ ಚಳವಳಿ ಮೂಲಕ ಸರಕಾರಗಳ ಮೇಲೆ ಒತ್ತಡ ಹೇರಲಾಗುವುದು ಎಂದರು.
ಸಿಪಿಐ ಪಕ್ಷದ ರಾಜ್ಯ ಮಂಡಳಿ ಸದಸ್ಯ ಎಚ್.ಎಂ.ರೇಣುಕಾರಾಧ್ಯ, ಜಿಲ್ಲಾ ಕಾರ್ಯದರ್ಶಿ ರಾಧಾ ಸುಂದರೇಶ್ ಮಾತನಾಡಿದರು. ವೇದಿಕೆಯಲ್ಲಿ ರಾಜ್ಯ ಮಂಡಳಿ ಸದಸ್ಯ ಪಿ.ವಿ.ಲೋಕೇಶ್, ಮುಖಂಡರಾದ ರಘು, ವಿಜಯ್‌ಕುಮಾರ್, ಕೆರೆಮಕ್ಕಿ ರಮೇಶ್, ಎಚ್.ಕುಮಾರ್, ಕೆಳಗೂರು ರಮೇಶ್, ಕೆಳವಳ್ಳಿ ಕಳಸಪ್ಪ, ಜಾರ್ಜ್ ಆಸ್ಟಿನ್, ಜಿ.ರಮೇಶ್, ಲಕ್ಷ್ಮಣ್ ಆಚಾರ್, ಗೋಪಾಲಶೆಟ್ಟಿ, ಲಕ್ಷ್ಮಣ್‌ಕುಮಾರ್, ವಸಂತ್ ಶಿವಕುಮಾರ್ ಮತ್ತಿತರರಿದ್ದರು. ಸಮಾವೇಶಕ್ಕೂ ಮುನ್ನ ನಗರದ ಪ್ರಮುಖ ರಸ್ತೆಗಳಲ್ಲಿ ಕಾರ್ಯಕರ್ತರು ಬೃಹತ್ ಜಾಥಾ ನಡೆಸಿದರು.
ಧರ್ಮಸ್ಥಳದಲ್ಲಿ ಅಮಾಯಕ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ, ಕೊಲೆಯಾಗಿದೆ. ಅನ್ಯಾಯಕ್ಕೊಳಗಾದವರೆಲ್ಲರೂ ಹಿಂದೂಗಳೇ ಆಗಿದ್ದಾರೆ. ಆದರೆ ಹಿಂದುತ್ವದ ಹುಲಿಗಳು ಎನ್ನುವ ಸಿ.ಟಿ.ರವಿ, ಶೋಭಾ ಕರಂದ್ಲಾಜೆ, ಸೂಲಿಬೆಲೆ, ಪ್ರತಾಪ್‌ಸಿಂಹನಂತವರು ಮೌನಕ್ಕೆ ಶರಣಾಗಿದ್ದಾರೆ, ಹತ್ಯೆಯಾದ ಹೆಣ್ಣು ಮಕ್ಕಳ ಪರ ಮಾತನಾಡುತ್ತಿಲ್ಲ. ಅಲ್ಲಿ ಅತ್ಯಾಚಾರಕ್ಕೊಳಗಾದವರು, ಹತ್ಯೆಯಾದವರ ಕುಟುಂಬದವರಿಗೆ ನ್ಯಾಯ ಸಿಗಬೇಕು, ಆರೋಪಿಗಳಿಗೆ ಶಿಕ್ಷೆಯಾಗಬೇಕು.
- ಸಾತಿ ಸುಂದರೇಶ್
ಮೂಡಿಗೆರೆ ಕ್ಷೇತ್ರದ ಮತದಾರರು ಎಚ್ಚೆತ್ತುಕೊಳ್ಳಲಿ :
ಮೂಡಿಗೆರೆ ಕ್ಷೇತ್ರದ ಶಾಸಕಿ ನಯನಾ ಮೋಟಮ್ಮ ಇತ್ತೀಚೆಗೆ ಕೋಮುವಾದಿಯೊಬ್ಬನ ಜತೆ ವೇದಿಕೆ ಹಂಚಿಕೊಂಡಿದ್ದಾರೆ. ಬೆಳಗಾವಿಯ ಸವದತ್ತಿಯಲ್ಲಿನ ಶಾಲೆಯೊಂದರ ಮುಖ್ಯೋಪಾಧ್ಯಾಯ ಮುಸ್ಲಿಮ್ ಎಂಬ ಕಾರಣಕ್ಕೆ ಅವರನ್ನು ಶಾಲೆಯಿಂದ ವರ್ಗಾವಣೆ ಮಾಡಿಸಲು ಶಾಲೆಯ ಮಕ್ಕಳು ಕುಡಿಯುವ ನೀರಿನ ಟ್ಯಾಂಕ್‌ಗೆ ವಿಷ ಹಾಕಿದ ದುರುಳರು ಪ್ರಮೋದ್ ಮುತಾಲಿಕ್ ಶಿಷ್ಯರು. ಇಂತಹ ಮನುಷ್ಯತ್ವ ವಿರೋಧಿಯೊಂದಿಗೆ ವೇದಿಕೆ ಹಂಚಿಕೊಂಡಿರುವುದಲ್ಲದೇ ಆತನನ್ನು ತನ್ನ ಕ್ಷೇತ್ರಕ್ಕೆ ಸ್ವಾಗತಿಸುತ್ತಿದ್ದೇನೆ ಎಂದು ಶಾಸಕಿ ನಯನಾ ಹೇಳಿದ್ದಾರೆ. ಇದನ್ನು ಮೂಡಿಗೆರೆ ಕ್ಷೇತ್ರದ ಜನತೆ ವಿರೋಧಿಸದಿದ್ದಲ್ಲಿ ಇಡೀ ಜಿಲ್ಲೆ ಕೋಮುವಾದಿಗಳ ಕೈಸೇರುವ ಅಪಾಯ ಎದುರಾಗಲಿದೆ ಎಂದು ಸಿಪಿಐ ಪಕ್ಷದ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ಹೇಳಿದರು.