Chikkamagaluru | ಚಾಕುವಿನಿಂದ ಇರಿದು ಮಹಿಳೆಯ ಹತ್ಯೆ
ಸಾಂದರ್ಭಿಕ ಚಿತ್ರ
ಚಿಕ್ಕಮಗಳೂರು : ಪತಿಯಿಂದ ಬೇರ್ಪಟ್ಟು ತವರು ಮನೆಯಲ್ಲಿ ವಾಸವಾಗಿದ್ದ ಮಹಿಳೆಯೊಬ್ಬರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ತಾಲೂಕಿನ ಆಲ್ದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ವರದಿಯಾಗಿದೆ.
ಆಲ್ದೂರು ಪಟ್ಟಣ ಸಮೀಪದ ಅರೇನೂರು ಗ್ರಾಮದ ನೋಣಯ್ಯ, ಕವಿತಾ, ದಂಪತಿಯ ಪುತ್ರಿ ಸಂಧ್ಯಾ ರವಿ (32) ಕೊಲೆಯಾದ ಮಹಿಳೆಯಾಗಿದ್ದು, ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಧ್ಯಾಳನ್ನು ಕೆಲ ವರ್ಷಗಳ ಹಿಂದೆ ರವಿ ಎಂಬವರಿಗೆ ವಿವಾಹ ಮಾಡಿಕೊಡಲಾಗಿದ್ದು, ಕಳೆದ ಮೂರು ವರ್ಷಗಳಿಂದ ಸಂಧ್ಯಾ ಅವರು ಪತಿ ರವಿ ಅವರಿಂದ ಬೇರ್ಪಟ್ಟು ತವರು ಮನೆಯಲ್ಲಿ ನೆಲೆಸಿದ್ದರು.
ಮಂಗಳವಾರ ಮುಂಜಾನೆ ಮನೆಯಲ್ಲಿರುವ ಸದಸ್ಯರು ಕೆಲಸಕ್ಕೆ ತೆರಳಿದ್ದು, ಸಂಧ್ಯಾಳ ತಂದೆ, ಮಕ್ಕಳು ಹಾಗೂ ಓರ್ವ ಸಹೋದರ ಮನೆಯಲ್ಲಿದ್ದರು. ಸಂಧ್ಯಾಳ ಸಹೋದರ ಶೌಚಾಲಯಕ್ಕೆ ಹೋಗಿದ್ದ ಸಂದರ್ಭ ಮನೆಯ ಸ್ನಾನ ಗೃಹದ ಒಳಗಿರುವ ಬಟ್ಟೆ ಒಗೆಯುವ ಕಲ್ಲಿನ ಬಳಿ ಸಂಧ್ಯಾ ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ಕಂಡಿದ್ದಾರೆ. ಅಪರಿಚಿತ ವ್ಯಕ್ತಿ ಸಂಧ್ಯಾಳ ಕುತ್ತಿಗೆಗೆ ಮಾರಕಾಸ್ತ್ರದಿಂದ ಇರಿದ ಪರಿಣಾಮ ತೀವ್ರ ರಕ್ತಸ್ರಾವವಾಗಿ ಸಂಧ್ಯಾ ಪ್ರಜ್ಞಾಹೀನಳಾಗಿ ನೆಲದ ಮೇಲೆ ಬಿದ್ದಿದ್ದರು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗ ಮಧ್ಯದಲ್ಲಿಯೇ ಮೃತಪಟ್ಟಿದ್ದಾಳೆಂದು ತಿಳಿದು ಬಂದಿದೆ.
ಈ ಸಂಬಂಧ ಸಂಧ್ಯಾ ಸಹೋದರ ಸತೀಶ್ ಆಲ್ದೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಸಂಧ್ಯಾಳನ್ನು ಹತ್ಯೆ ಮಾಡಿದ ಆರೋಪಿಯಾರೆಂಬುದು ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ.