×
Ad

ಚಿಕ್ಕಮಗಳೂರು | ಭಾರೀ ಮಳೆಗೆ ಮನೆ ಕುಸಿತ : ಮಹಿಳೆ ಪ್ರಾಣಾಪಾಯದಿಂದ ಪಾರು

Update: 2024-07-13 20:38 IST

ಚಿಕ್ಕಮಗಳೂರು : ಕಾಫಿನಾಡಿನಲ್ಲಿ ಶುಕ್ರವಾರ ರಾತ್ರಿಯಿಂದ ಶನಿವಾರ ಸಂಜೆವರೆಗೆ ಭಾರೀ ಮಳೆಯಾಗಿದ್ದು, ಭಾರೀ ಮಳೆ ಹಾಗೂ ಗಾಳಿಯಿಂದಾಗಿ ಮೂಡಿಗೆರೆ ತಾಲೂಕಿನಲ್ಲಿ ಮನೆಯೊಂದು ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಈ ವೇಳೆ ಮನೆಯಲ್ಲಿದ್ದ ಮಹಿಳೆಯೊಬ್ಬರು ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮಳೆಯಿಂದಾಗಿ ಮೂಡಿಗೆರೆ ತಾಲೂಕಿನ ಬಕ್ಕಿ ಗ್ರಾಮದಲ್ಲಿ ಮನೆಯೊಂದರ ಮೇಲ್ಛಾವಣಿ ಹಾಗೂ ಮನೆಯ ಗೋಡೆಗಳು ಕುಸಿದಿದ್ದು, ಈ ವೇಳೆ ಮನೆಯಲ್ಲಿದ್ದ ಸರಿತಾ ಎಂಬುವವರು ಅದೃಷ್ಟವಶಾತ್​ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇನ್ನೂ, ಕಳಸ ಗ್ರಾಪಂ ವ್ಯಾಪ್ತಿಯ ಹೊಸೂರು ಗ್ರಾಮದಲ್ಲಿ ಭಾರೀ ಮಳೆಗೆ ಶಂಕರ ಎಂಬವರ ಮನೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆ ಕುಸಿದ ಪರಿಣಾಮ ಮನೆ ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಳಸ ಪಟ್ಟಣ ಸಮೀಪದ ಕಂಚಿನಕೆರೆ ಎಂಬಲ್ಲಿ ಭಾರೀ ಮಳೆಗೆ ಕಾಂಕ್ರೀಟ್ ರಸ್ತೆ ಬಿರುಕು ಬಿಟ್ಟಿದ್ದು, ಪರಿಣಾಮ ವಾಹನ ಹಾಗೂ ಜನಸಂಚಾರಕ್ಕೆ ತೊಂದರೆಯಾಗಿದೆ. ಕಳಸ, ಕುದುರೆಮುಖ, ಸಂಸೆ, ಜಾಂಬಳೆ ಭಾಗದಲ್ಲೂ ಶನಿವಾರ ಭಾರೀ ಮಳೆಯಾಗಿದ್ದು, ಭದ್ರಾ ನದಿ ತುಂಬಿ ಹರಿಯಲಾರಂಭಿಸಿದೆ.

ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಬಣಕಲ್, ಚಾರ್ಮಾಡಿ ಘಾಟಿ, ಬಾಳೂರು ಭಾಗದಲ್ಲೂ ಶನಿವಾರ ಬೆಳೆಗ್ಗೆ ಹಾಗೂ ಸಂಜೆ ಮಳೆಯ ಆರ್ಭಟ ಜೋರಾಗಿದ್ದು, ಭಾರೀ ಮಳೆಯಿಂದಾಗಿ ಕೊಟ್ಟಿಗೆಹಾರ ಹಾಗೂ ಚಾರ್ಮಾಡಿ ಘಾಟ್ ವ್ಯಾಪ್ತಿಯಲ್ಲಿ ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ. ಭಾರೀ ಮಳೆ, ಮಂಜಿನ ವಾತಾವರಣದಿಂದಾಗಿ ರಸ್ತೆಯೇ ಕಾಣದಂತಾಗಿದ್ದು, ಶನಿವಾರ ಕೊಟ್ಟಿಗೆಹಾರದಲ್ಲಿ ವಾಹನಗಳು ಸಂಚಾರ ಸಾಧ್ಯವಾಗದೇ ಸರತಿ ಸಾಲಿನಲ್ಲಿ ನಿಂತಿದ್ದ ದೃಶ್ಯಗಳು ಕಂಡು ಬಂತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News