ಚಿಕ್ಕಮಗಳೂರು | ಸೊಂಟಕ್ಕೆ ಬಿಸಿ ನೀರು ಸುರಿದ ಸಿಬ್ಬಂದಿ: ಮಗು ಗಂಭೀರ
ಸಾಂದರ್ಭಿಕ ಚಿತ್ರ | PC : freepik
ಚಿಕ್ಕಮಗಳೂರು : ಸರಕಾರಿ ವಿಶೇಷ ದತ್ತು ಸ್ವೀಕಾರ ಸಂಸ್ಥೆಯಲ್ಲಿ ಆಶ್ರಯ ಪಡೆದಿದ್ದ ಹೆಣ್ಣು ಮಗುವಿನ ಮೇಲೆ ಮಕ್ಕಳನ್ನು ಆರೈಕೆ ಮಾಡುವ ಸಿಬ್ಬಂದಿಯೇ ಬಿಸಿ ನೀರು ಸುರಿದ ಪರಿಣಾಮ ಮಗುವಿನ ಸೊಂಟದ ಕೆಳ ಭಾಗ ಹಾಗೂ ಎಡ ಕಾಲು ಸಂಪೂರ್ಣವಾಗಿ ಸುಟ್ಟು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಚಿಕ್ಕಮಗಳೂರು ನಗರದ ಗಾಂಧಿನಗರದಲ್ಲಿ ಸರಕಾರಿ ವಿಶೇಷ ದತ್ತು ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು, ಈ ಸಂಸ್ಥೆ ಮಕ್ಕಳ ರಕ್ಷಣಾ ನಿರ್ದೇಶನಾಲಯದಡಿ ನೋಂದಾಯಿತ ಸಂಸ್ಥೆಯಾಗಿದೆ. ಈ ಸಂಸ್ಥೆಯಲ್ಲಿ ಹಲವಾರು ಅನಾಥ ಮಕ್ಕಳಿದ್ದು, ಈ ಪೈಕಿ ಒಂದೂವರೆ ವರ್ಷದ ಹೆಣ್ಣು ಮಗುವೊಂದು ಮಲ ವಿಸರ್ಜನೆ ಮಾಡಿದ್ದ ಸಂದರ್ಭದಲ್ಲಿ ಮಕ್ಕಳನ್ನು ಆರೈಕೆ ಮಾಡುವ ಸಿಬ್ಬಂದಿ ಕುದಿಯುತ್ತಿದ್ದ ಬಿಸಿ ನೀರನ್ನು ತಂದು ಮಗುವಿನ ಸೊಂಟದ ಕೆಳ ಭಾಗಕ್ಕೆ ಸುರಿದಿದ್ದಾರೆ ಎನ್ನಲಾಗಿದ್ದು, ಕುದಿಯುತ್ತಿದ್ದ ಬಿಸಿ ನೀರು ಸುರಿದ ಪರಿಣಾಮ ಮಗುವಿನ ಸೊಂಟದ ಕೆಳಭಾಗ ಹಾಗೂ ಎಡಕಾಲು ಬಿಸಿನೀರಿನಿಂದಾಗಿ ಸುಟ್ಟು ಹೋಗಿದೆ ಎಂದು ತಿಳಿದು ಬಂದಿದೆ.
ಘಟನೆಯಿಂದಾಗಿ ಮಗು ಗಂಭೀರವಾಗಿ ಗಾಯಗೊಂಡಿದ್ದು, ಏನೂ ತಿಳಿಯದ ಮಗು ನೋವಿನಿಂದ ನರಳಾಡುವಂತಾಗಿದೆ. ಘಟನೆಯಿಂದ ಕೆಲಸ ಕಳೆದುಕೊಳ್ಳುವ ಹಾಗೂ ಶಿಕ್ಷೆಗೆ ಗುರಿಯಾಗುವ ಭೀತಿಯಿಂದ ಸಿಬ್ಬಂದಿ ಘಟನೆಯ ಬಗ್ಗೆ ಮೇಲಾಧಿಕಾರಿಗಳಿಗೆ ಯಾವುದೇ ಮಾಹಿತಿ ನೀಡದೇ ಮಗುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಈ ಮಗುವನ್ನು ಮಕ್ಕಳಿಲ್ಲದ ದಂಪತಿ ದತ್ತು ಪಡೆಯಲು ಸಿದ್ಧತೆ ನಡೆಸಿದ್ದರು ಎನ್ನಲಾಗುತ್ತಿದ್ದು, ಘಟನೆ ನಡೆದು ಒಂದು ವಾರ ಕಳೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಘಟನೆ ಸಂಬಂಧ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆಂದು ತಿಳಿದು ಬಂದಿದೆ. ದತ್ತು ಸಂಸ್ಥೆಯ ಸಿಬ್ಬಂದಿ ವರ್ತನೆಗೆ ಸಾರ್ವಜನಿಕ ವಲಯದಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಸಂಸ್ಥೆಯ ಸಿಬ್ಬಂದಿ ಹಾಗೂ ಮೇಲಾಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.