ಚಿಕ್ಕಮಗಳೂರು: ಮಲೆನಾಡಲ್ಲಿ ಮುಂದುವರಿದ ಗಾಳಿ-ಮಳೆಯ ಅಬ್ಬರ
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಅಬ್ಬರದ ಮಳೆ, ಜೊತೆಗೆ ಗಾಳಿಯು ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಕಳಸ, ಮೂಡಿಗೆರೆ, ಕೊಪ್ಪ, ಎನ್ ಆರ್. ಪುರ ತಾಲೂಕುಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ.
ಭದ್ರಾ, ತುಂಗಾ, ಹೇಮಾವತಿ ನದಿಗಳು ಉಕ್ಕಿ ಹರಿಯುತ್ತಿದ್ದು, ನದಿಗಳ ನೆರೆ ನೀರು ಅಕ್ಕಪಕ್ಕದ ಹೊಲಗದ್ದೆಗಳಿಗೆ ನುಗ್ಗಿ ಅಪಾರ ಹಾನಿ ಸಂಭವಿಸಿದೆ.
ಭಾರೀ ಮಳೆಯ ಹಿನ್ನೆಲೆಯಲ್ಲಿ ಮಲೆನಾಡು ಭಾಗದ ತಾಲೂಕುಗಳಲ್ಲಿನ ಅಂಗನವಾಡಿ, ಶಾಲೆಗಳಿಗೆ ಸೋಮವಾರ ರಜೆ ಘೋಷಣೆ ಮಾಡಲಾಗಿದೆ.
ಶೃಂಗೇರಿ ತಾಲೂಕಿನ ಸುತ್ತಮುತ್ತ ಧಾರಾಕಾರ ಮಳೆ ಆಗುತ್ತಿದ್ದು , ತುಂಗಾ ನದಿ ಅಬ್ಬರಕ್ಕೆ ಶೃಂಗೇರಿ ಪಟ್ಟಣದ ರಸ್ತೆಗಳು ಜಲಾವೃತವಾಗಿವೆ.
ಶೃಂಗೇರಿ ದೇಗುಲದ ಕಪ್ಪೆಶಂಕರನಾರಾಯಣ ದೇಗುಲ, ಗುರುಗಳ ಸಂಧ್ಯಾವಂದನೆ ಮಂಟಪವೂ ಮುಳುಗಡೆಯಾಗಿದೆ.
ದೇಗುಲದ ಗಾಂಧಿ ಮೈದಾನ ಸಂಪೂರ್ಣ ಜಲಾವೃತಗೊಂಡಿದ್ದು, ದೇವಸ್ಥಾನದ ಪಾರ್ಕಿಂಗ್ ಜಾಗದ ಮಾರ್ಗ ಹಾಗೂ ಬದಲಿ ರಸ್ತೆ ಕೂಡ ಮುಳುಗಡೆಯಾಗಿದೆ.
ನಿರಂತರ ಮಳೆಯಿಂದ ಮಲೆನಾಡಿಗರ ಜನಜೀವನ ಸಂಪೂರ್ಣ ಅಸ್ತವ್ಯಸ್ತ ಕೊಂಡಿದ್ದು, ಕಾಫಿ-ಅಡಿಕೆ-ಮೆಣಸು ಬೆಳೆಗಾರರಿಗೆ ಕೊಳೆ ರೋಗದ ಭೀತಿ ಎದುರಾಗಿದೆ.
ತೆಕ್ಕೂರು ಬಳಿ ಗುಡ್ಡ ಕುಸಿದು, ಶೃಂಗೇರಿ ತೆಕ್ಕೂರು ರಸ್ತೆ ಬಂದ್ ಆಗಿದೆ.