ಚಿಕ್ಕಮಗಳೂರು : ಆನೆ ದಾಳಿಗೆ ಯುವತಿ ಬಲಿ
ಚಿಕ್ಕಮಗಳೂರು : ಆನೆ ದಾಳಿಗೆ ಯುವತಿಯೊಬ್ಬಳು ಮೃತಪಟ್ಟ ಘಟನೆ ಜಿಲ್ಲೆಯಎನ್ ಆರ್ ಪುರ ಸಮೀಪದ ಬನ್ನೂರು ಗ್ರಾಮದ ಬಳಿ ನಡೆದಿದೆ.
ಹೊನ್ನಳ್ಳಿ ಮೂಲದ ಅನಿತಾ (25) ಮೃತ ಯುವತಿ. ಕಾಫಿ ತೋಟದಲ್ಲಿ ಕೂಲಿ ಕಾರ್ಮಿಕಳಾಗಿದ್ದ ಈಕೆ ಅಲ್ಲಿನ ತೋಟದ ಮನೆಯಲ್ಲಿ ವಾಸವಾಗಿದ್ದರು.
ಕಳೆದ ರಾತ್ರಿ 9 ಗಂಟೆಗೆ ಮನೆಗೆ ಹೋಗುವಾಗ ಆನೆ ದಾಳಿ ಮಾಡಿದೆ. ಬಾಳೆಹೊನ್ನೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಶಿವಮೊಗ್ಗಕ್ಕೆ ಹೋಗುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ
ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಸ್ಥಳಕ್ಕೆ ಹೋಗಿದ್ದು, ಮೃತರಿಗೆ ಕಾನೂನು ಪ್ರಕಾರ ಪರಿಹಾರ ನೀಡುವ ಭರವಸೆ ಕೊಟ್ಟಿದ್ದಾರೆ.
ಇತ್ತೀಚೆಗೆ ಆನೆ ದಾಳಿಯಲ್ಲಿ ಈ ಭಾಗದಲ್ಲಿ ಹಲವಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಹಾಸನ ಜಿಲ್ಲೆಯಲ್ಲಿ ಆನೆ ಸೆರೆ ಹಿಡಿದು ತಂದು ಭದ್ರಾ ಅಭಯಾರಣ್ಯಕ್ಕೆ ಬಿಡಲಾಗಿದೆ ಸಾಕಷ್ಟು ಆನೆಗಳನ್ನು ತಂದು ಬಿಟ್ಟು ಅವು ಗ್ರಾಮಗಳತ್ತ ಬರುತ್ತಿವೆ. ಈ ಹಿಂದೆ ಈ ಭಾಗದಲ್ಲಿ ಆನೆಗಳ ಸಮಸ್ಯೆ ಇರಲಿಲ್ಲ. ಅದರಲ್ಲೂ ಜನರ ಮೇಲೆ ದಾಳಿ ಮಾಡಿರುವುದು ಇತ್ತೀಚೆಗೆ ಹೆಚ್ಚಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.