ದಲಿತ ಯುವಕನ ಆತ್ಮಹತ್ಯೆ ಪ್ರಕರಣ| ಸಹೋದರನ ಸಾವಿಗೆ ಪೊಲೀಸ್ ಇಲಾಖೆ ನಿರ್ಲಕ್ಷ್ಯ ಕಾರಣ: ಕಮಲಾಕ್ಷಿ ಆರೋಪ
ಚಿಕ್ಕಮಗಳೂರು: ಸಹೋದರ ಆತ್ಮಹತ್ಯೆ ಮಾಡಿಕೊಳ್ಳಲು ಪೊಲೀಸ್ ಇಲಾಖೆಯ ನಿರ್ಲಕ್ಷವೇ ಕಾರಣ. ನ್ಯಾಯ ಕೊಡಿಸಲು ಪೊಲೀಸರು ಉದ್ದೇಶ ಪೂರ್ವಕವಾಗಿ ವಿಳಂಬ ಮಾಡಿದ್ದು, ಮೂರು ದಿನಗಳಲ್ಲಿ ನ್ಯಾಯ ಸಿಗದಿದ್ದಲ್ಲಿ ಕಳಸ ಪೊಲೀಸ್ ಠಾಣೆ ಎದುರು ಆತ್ಮಹತ್ಯೆಗೆ ಶರಣಾಗುವುದಾಗಿ ಪೊಲೀಸ್ ಪೇದೆಯಿಂದ ಹಲ್ಲೆಗೊಳಗಾಗಿದ್ದೇನೆ ಎಂದು ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ದಲಿತ ಯುವಕ ನಾಗೇಶ್ ಅವರ ಸಹೋದರಿ ಕಮಲಾಕ್ಷಿ ಎಚ್ಚರಿಕೆ ನೀಡಿದ್ದಾರೆ.
ಸೋಮವಾರ ಕಳಸ ಪಟ್ಟಣದಲ್ಲಿ ದಲಿತ ಸಂಘಟನೆಗಳ ಮುಖಂಡರೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುದುರೆಮುಖ ಪೊಲೀಸ್ ಠಾಣೆಯ ಪೇದೆ ಸಿದ್ದೇಶ್ ಹಾಗೂ ಸ್ಥಳೀಯರಾದ ಶಶಿ, ಸುರಕ್ಷಿತ್ ಎಂಬವರು ಜುಲೈ 18ರಂದು ತನ್ನ ಸಹೋದರ ನಾಗೇಶ್ನ ಮೇಲೆ ವಿನಾಕಾರಣ ಹಲ್ಲೆ ಮಾಡಿದ್ದಾರೆ. ಹಲ್ಲೆಯಿಂದ ಗಾಯಗೊಂಡಿದ್ದ ನಾಗೇಶ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾನೆ. ಬಳಿಕ ಪೊಲೀಸ್ ಪೇದೆ ಸಿದ್ದೇಶ್, ಶಶಿ, ಸುರಕ್ಷಿತ್ ಎಂಬವರ ಮೇಲೆ ಕುದುರೆಮುಖ ಠಾಣೆಯಲ್ಲಿ ದೂರು ದಾಖಲಿಸಿದ್ದು, ನ್ಯಾಯ ಕೊಡಿಸಬೇಕಾದ ಅಲ್ಲಿನ ಠಾಣಾಧಿಕಾರಿ ಆದರ್ಶ್ ಎಂಬವರು ಆರೋಪಿಗಳನ್ನು ರಕ್ಷಿಸುವ ಉದ್ದೇಶದಿಂದ ನಾಗೇಶ್ ಮೇಲೆಯೇ ದೂರು ದಾಖಲಿಸಿ ದೂರು ಹಿಂಪಡೆಯುವಂತೆ ಬೆದರಿಕೆ ಹಾಕಿದ್ದಾರೆ. ಅಲ್ಲದೆ, ಪೊಲೀಸರು ಸಹೋದರನ ಮೊಬೈಲ್, ಆಟೊ, ಕಳೆ ಯಂತ್ರ ಜಪ್ತಿ ಮಾಡಿದ್ದಾರೆ. ಈ ಬಗ್ಗೆ ಡಿವೈಎಸ್ಪಿಗೆ ದೂರು ನೀಡಿದರೂ ಅವರು ಆರೋಪಿಗಳನ್ನು ಬಂಧಿಸದೆ ನಿರ್ಲಕ್ಷ ವಹಿಸಿದ್ದರು ಎಂದು ಆರೋಪಿಸಿದರು.
ನ್ಯಾಯ ಸಿಗುವ ಭರವಸೆಯಲ್ಲಿದ್ದ ತನ್ನ ಸಹೋದರ ಪೊಲೀಸರ ಈ ವರ್ತನೆಯಿಂದ ಆಘಾತಕ್ಕೊಳಗಾಗಿದ್ದ. ನಂತರ ಈ ಸಂಬಂಧ ಎಸ್ಪಿಗೆ ದೂರು ನೀಡಿದ ಬಳಿಕ ಪೇದೆಯನ್ನು ಅಮಾನತು ಮಾಡಲಾಗಿದೆ ಎಂಬ ಮಾಹಿತಿ ಬಂದಿದೆ. ಆದರೆ, ಆತನನ್ನು ಅಮಾನತು ಮಾಡಿರುವ ಬಗ್ಗೆ ಅಧಿಕೃತ ಮಾಹಿಸಿ ಸಿಕ್ಕಿರಲಿಲ್ಲ. ಈ ಮಧ್ಯೆ ತನ್ನ ಸಹೋದರ ಆಟೊ ಇಲ್ಲದೆ ಜೀವನ ನಡೆಸಲು ಸಾಧ್ಯವಾಗದೆ ಮಾನಸಿಕವಾಗಿ ನೊಂದು ಕೊಂಡಿದ್ದ. ಸಾಲ ತೀರಿಸಲಾಗದೆ, ಪತ್ನಿ, ಮಗುವನ್ನು ನೋಡಿಕೊಳ್ಳಲಾಗದೆ ಪ್ರತಿದಿನ ಅಳುತ್ತಿದ್ದ ಎಂದರು.
ತನ್ನ ಸಹೋದರ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆಂದು ನಾವ್ಯಾರೂ ಅಂದುಕೊಂಡಿರಲಿಲ್ಲ. ಆದರೆ, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತನ ಸಾವಿಗೆ ಕುದುರೆಮುಖ ಠಾಣಾಧಿಕಾರಿ ಆದರ್ಶ್, ಸಿಬ್ಬಂದಿ ಸಿದ್ದೇಶ್ ಹಾಗೂ ಶಶಿ, ಸುರಕ್ಷಿತ್ ಹಾಗೂ ಪೊಲೀಸ್ ಇಲಾಖೆಯೇ ಕಾರಣ. ಸಹೋದರನ ಸಾವಿಗೆ ಕಾರಣವಾದ ಪೊಲೀಸರನ್ನು ಕೂಡಲೇ ಕೆಲಸದಿಂದ ವಜಾ ಮಾಡಿ ಬಂಧಿಸಬೇಕು ಹಾಗೂ ತಪ್ಪಿತಸ್ಥರನ್ನೂ ಬಂಧಿಸಬೇಕು. ಇಲ್ಲದಿದ್ದರೆ ಪೊಲೀಸ್ ಠಾಣೆ ಎದುರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಕಮಲಾಕ್ಷಿ ಎಚ್ಚರಿಸಿದರು.
ದಸಂಸ(ಅಂಬೇಡ್ಕರ್ ವಾದ) ರಾಜ್ಯ ಸಮಿತಿ ಸದಸ್ಯೆ ಆಶಾ ಸಂತೋಷ್ ಮಾತನಾಡಿ, ಪೊಲೀಸ್ ಸಿಬ್ಬಂದಿ ಹಾಗೂ ಮೇಲ್ವರ್ಗದ ಇಬ್ಬರು ವ್ಯಕ್ತಿಗಳಿಂದ ಅಮಾನುಷವಾಗಿ ಹಲ್ಲೆಗೊಳಗಾದ ನಾಗೇಶ್ ಕುದುರೆಮುಖ ಪೊಲೀಸ್ ಠಾಣಾಧಿಕಾರಿ ಆದರ್ಶ್ ಅವರ ಬೆದರಿಕೆ, ಕಿರುಕುಳದಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಪ್ಪಿತಸ್ಥರನ್ನು ಕೂಡಲೇ ಬಂಧಿಸಬೇಕು. ಮೇಲ್ವರ್ಗದವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ದಲಿತ ಯುವಕ ನಾಗೇಶ್ ಕುಟುಂಬಕ್ಕೆ ನೀಡಬೇಕು.ತಪ್ಪಿದಲ್ಲಿ ರಾಜ್ಯಮಟ್ಟದಲ್ಲಿ ಹೋರಾಟ ರೂಪಿಸಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ದಸಂಸ ನಾಯಕರಾದ ಲಿಂಗಪ್ಪ, ನಾಗೇಶ್, ಅಣ್ಣ ಯೋಗೀಶ್ ಉಪಸ್ಥಿತರಿದ್ದರು.
ಪೊಲೀಸ್ ಪೇದೆ ಸಿದ್ದೇಶ್ ಹಾಗೂ ಆತನಿಗೆ ಸಹಾಯ ಮಾಡಿದ್ದ ಓರ್ವನನ್ನು ಪೊಲೀಸರು ಗೋವಾದಲ್ಲಿ ಬಂಧಿಸಿದ್ದಾರೆಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ನಮಗಾಗಲಿ, ಸಂಘಟನೆಯ ಮುಖಂಡರಿಗಾಗಲಿ ಪೊಲೀಸ್ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿಲ್ಲ. ಸಹೋದರನ ಸಾವಿಗೆ ಕಾರಣರಾಗಿರುವ ಎಲ್ಲ ಆರೋಪಿಗಳನ್ನು ಬಂಧಿಸಬೇಕು. ಕುದುರೆಮುಖ ಠಾಣಾಧಿಕಾರಿ ಆದರ್ಶ್ ಅವರನ್ನೂ ಸೇವೆಯಿಂದ ವಜಾ ಮಾಡಬೇಕು. ತಪ್ಪಿದಲ್ಲಿ ಪೊಲೀಸ್ ಠಾಣೆ ಮುಂದೆಯೇ ನಾನು, ನನ್ನ ಸಹೋದರಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ. ನಮ್ಮ ಸಾವಿಗೂ ಪೊಲೀಸ್ ಇಲಾಖೆಯೇ ಕಾರಣವಾಗಲಿದೆ.
ಯೋಗೀಶ್, ನಾಗೇಶ್ ಸಹೋದರ