ಕಾಡುಕೋಣ ದಾಳಿಯಿಂದ ರೈತ ಮೃತ್ಯು
ಕಳಸ : ಹಳುವಳ್ಳಿ ಸಮೀಪದ ಲಲಿತಾದ್ರಿಯಲ್ಲಿ ಗುರುವಾರ ಸಂಜೆ ಕಾಫಿ ಬೆಳೆಗಾರರೊಬ್ಬರನ್ನು ಕಾಡುಕೋಣ ತಿವಿದು ಸಾಯಿಸಿದ ಹಿನ್ನೆಲೆಯಲ್ಲಿ ತಾಲೂಕಿನ ರೈತರು, ಸಾರ್ವಜನಿಕರು ಪಟ್ಟಣದಲ್ಲಿ ಶುಕ್ರವಾರ ಬಂದ್ ಆಚರಿಸಿ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕೆಸಿಎ ಬ್ಯಾಂಕ್ ಅಧ್ಯಕ್ಷ ಮಂಜಪ್ಪಯ್ಯ, ಮಲೆನಾಡಿನಲ್ಲಿ ವನ್ಯಜೀವಿ ಮಾನವ ಸಂಘರ್ಷ ತಪ್ಪಿಸಲು ರಾಜ್ಯ ಮಟ್ಟದಲ್ಲಿ ಕ್ರಿಯಾ ಯೋಜನೆ ರೂಪಿಸಲಾಗುತ್ತಿದೆ. ಆದರೆ ಅರಣ್ಯ ಇಲಾಖೆ ಈವರೆಗೂ ವನ್ಯಪ್ರಾಣಿಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ ವಹಿಸಿಲ್ಲ. ಕಾಫಿ, ಅಡಿಕೆ ತೋಟಗಳಲ್ಲಿ ಕಾಡುಪ್ರಾಣಿಗಳ ಹಾವಳಿ ಮಿತಿಮೀರಿದೆ. ಕಾಡುಕೋಣಗಳು ಕಾರ್ಮಿಕರು, ರೈತರನ್ನು ಬಲಿ ಪಡೆಯುತ್ತಿವೆ. ಅರಣ್ಯ ಇಲಾಖೆ ರೈತರು ಮೃತಪಟ್ಟಾಗ ಮಾತ್ರ ಪರಿಹಾರ ನೀಡಿ ಕೈತೊಳೆದುಕೊಳ್ಳುತ್ತಿದೆಯೇ ಹೊರತು ಕಾಡುಕೋಣಗಳ ಹಾವಳಿ ನಿಯಂತ್ರಣಕ್ಕೆ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಮುಖಂಡ ಶೇಷಗಿರಿ ಮಾತನಾಡಿ, ಮಲೆನಾಡಿನಲ್ಲಿ ಕಾಡುಪ್ರಾಣಿಗಳ ಹಾವಳಿಯಿಂದ ಜನರು ಗುಳೆ ಹೋಗುವ ಸ್ಥಿತಿ ನಿರ್ಮಾಣ ಆಗುತ್ತಿದೆ. ವನ್ಯಜೀವಿಗಳ ಹಾವಳಿ ಬಗ್ಗೆ ಜಿಲ್ಲಾ ಮಟ್ಟದಲ್ಲಿ ಹೋರಾಟ ಸಮಿತಿ ರಚನೆ ಮಾಡಿ ಪ್ರಬಲವಾಗಿ ದನಿ ಎತ್ತಬೇಕು ಎಂದರು.
ಕೃಷಿಕ ಟಿ.ವಿ.ವೆಂಕಟಸುಬ್ಬಯ್ಯ ಮಾತನಾಡಿ, ಕಳೆದ 3 ವರ್ಷಗಳಲ್ಲಿ ಕಾಡುಕೋಣ ಹಾವಳಿಯಿಂದ ಅನೇಕ ಬೆಳೆಗಾರರಿಗೆ ಗಾಯಗಳಾಗಿವೆ. ಮೂವರು ಈಗಾಗಲೇ ಮೃತಪಟ್ಟಿದ್ದಾರೆ. ನಮಗೆ ಕೃಷಿ ಬಿಟ್ಟರೆ ಬೇರೆ ವೃತ್ತಿ ಗೊತ್ತಿಲ್ಲ. ತೋಟಗಳಲ್ಲಿ ಕಾಡುಕೋಣಗಳ ಹಾವಳಿಯಿಂದ ಕಾರ್ಮಿಕರು ಕೆಲಸಕ್ಕೆ ಬರುತ್ತಿಲ್ಲ.ಆದ್ದರಿಂದ ತೋಟಕ್ಕೆ ಕಾಡುಕೋಣ ಬಂದರೆ ನಾವು ಗುಂಡು ಹಾರಿಸುತ್ತೇವೆ ಎಂದು ಆಕ್ರೋಶದಿಂದ ನುಡಿದರು.
ಜೆಡಿಎಸ್ ಮುಖಂಡ ಜ್ವಾಲನಯ್ಯ, ಮುಖಂಡ ದೀಪಕ್ ದೊಡ್ಡಯ್ಯ, ಸಿಪಿಐ ಮುಖಂಡ ಗೋಪಾಲ ಶೆಟ್ಟಿ ಮಾತನಾಡಿದರು.
ಮುಖಂಡರಾದ ಪ್ರಭಾಕರ್, ವಿಶ್ವನಾಥ್, ಎಂ.ಬಿ.ಸಂತೋಷ್, ಕೇಶವೇಗೌಡ,ನಾಗಭೂಷಣ್, ರವಿ, ಸುಂದರ ಶೆಟ್ಟಿ ಭಾಗವಹಿಸಿದ್ದರು. ತಹಶೀಲ್ದಾರ್ ಶಾರದಾ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ಈ ವೇಳೆ ವಲಯ ಅರಣ್ಯಾಧಿಕಾರಿ ನಿಶ್ಚಿತ್ ಅವರಿಗೆ ಕೃಷಿಕರು ಮನವಿ ಸಲ್ಲಿಸಿದರು.
ಕಾಡುಕೋಣಗಳ ದಾಳಿಯಿಂದ ಕೃಷಿಕರ ಜೀವಕ್ಕೆ ಅಪಾಯ ಇದ್ದು, ಕೃಷಿಕರ ಜೀವ ಉಳಿಸಲು ಸರಕಾರ ಕಟ್ಟುನಿಟ್ಟಿನ ಕ್ರಮ ವಹಿಸಬೇಕು. ರೈತರ ಪ್ರಾಣ ಹಾನಿ ಮಾಡುತ್ತಾ, ಬೆಳೆ ನಾಶ ಮಾಡುತ್ತಿರುವ ವನ್ಯಮೃಗಗಳನ್ನು ಅರಣ್ಯ ಇಲಾಖೆ ಹಿಡಿದು ದಟ್ಟ ಕಾಡಿಗೆ ರವಾನೆ ಮಾಡಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳ ಮೂಲಕ ರಾಜ್ಯ ಸರಕಾರಕ್ಕೆ ಮುಖಂಡರು ಮನವಿ ಮಾಡಿದರು.