×
Ad

ಚಿಕ್ಕಮಗಳೂರಿನಲ್ಲಿ ಧಾರಾಕಾರ ಮಳೆ: ಚಲಿಸುತ್ತಿದ್ದ ಬಸ್ ಮೇಲೆ ಉರುಳಿದ ಮರ, ಪ್ರಾಯಾಣಿಕರು ಪಾರು

Update: 2025-05-20 23:04 IST

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಸೋಮವಾರ ರಾತ್ರಿ ಹಾಗೂ ಮಂಗಳವಾರ ಬೆಳಗ್ಗೆಯಿಂದ ಭಾರೀ ಮಳೆಯಾಗಿದ್ದು, ಧಾರಾಕಾರ ಮಳೆಯಿಂದಾಗಿ ಜಿಲ್ಲೆಯ ಮಲೆನಾಡು ಭಾಗದ ಅಲಲ್ಲಿ ಮರಗಳು, ವಿದ್ಯುತ್ ಕಂಬಗಳು ಧರಾಶಾಹಿಯಾಗಿವೆ. ನಿರಂತರ ಮಳೆಯಿಂದಾಗಿ ಜಿಲ್ಲೆಯ ಮಲೆನಾಡು ಭಾಗದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತ್ತು.

ಜಿಲ್ಲೆಯ ಮಲೆನಾಡು ಭಾಗದ ಮೂಡಿಗೆರೆ, ಕಳಸ, ಎನ್.ಆರ್.ಪುರ, ಕೊಪ್ಪ, ಶೃಂಗೇರಿ ತಾಲೂಕುಗಳ ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿ ಆರಂಭವಾದ ಧಾರಾಕಾರ ಮಳೆ ಮಂಗಳವಾರ ಬೆಳಗ್ಗೆ ಮತ್ತಷ್ಟು ಬಿರುಸುಗೊಂಡಿದ್ದು, ಮಧ್ಯಾಹ್ನದವರೆಗೂ ಮಳೆಯ ಆರ್ಭಟ ಜೋರಾಗಿತ್ತು.

ಮೂಡಿಗೆರೆ ತಾಲೂಕಿನ ಬಣಕಲ್, ಕೊಟ್ಟಿಗೆಹಾರ, ಚಾರ್ಮಾಡಿ ಘಾಟ್, ಸುಂಕಸಾಲೆ, ಜಾವಳಿ, ಬಾಳೂರು ಸುತ್ತಮುತ್ತ ಗಾಳಿಯೊಂದಿಗೆ ಭಾರೀ ಮಳೆ ಸುರಿದಿದ್ದು, ಭಾರೀ ಮಳೆ ಗಾಳಿ ಪರಿಣಾಮ ಸುಂಕಸಾಲೆ ಗ್ರಾಮದಲ್ಲಿ ಚಲಿಸುತ್ತಿದ್ದ ಮಿನಿಬಸ್ಸೊಂದರ ಮೇಲೆ ಬೃಹತ್ ಗಾತ್ರದ ಮರ ಉರುಳಿ ಬಿದ್ದಿದೆ. ಮರ ಬಸ್‍ನ ಮುಂಭಾಗದ ಮೇಲೆ ಬಿದ್ದಿದ್ದು, ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಸ್‍ನ ಮುಂಭಾಗ ನಜ್ಜುಗುಜ್ಜಾಗಿದೆ.

ಭಾರೀ ಮಳೆಯಿಂದಾಗಿ ಮೂಡಿಗೆರೆ ಸಮೀಪದ ಬಡವನದಿಣ್ಣೆ ಗ್ರಾಮದಲ್ಲಿ ಜಡಿ ಮಳೆಯಿಂದಾಗಿ ರಸ್ತೆ ಕಾಣದೇ ಚಾಲಕನ ನಿಯಂತ್ರಣ ತಪ್ಪಿದ ಪ್ರವಾಸಿಗರಿದ್ದ ಕಾರು ಸರಕಾರಿ ಸಾರಿಗೆ ಬಸ್‍ಗೆ ಢಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದು, ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ. ಸರಕಾರಿ ಬಸ್‍ನ ಚಾಲಕ ಬಸ್ ನಿಯಂತ್ರಿಸಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದ್ದು, ಬಸ್ ರಸ್ತೆ ಬದಿಗೆ ಹೊರಳಿ ನಿಂತಿದೆ.

ಇನ್ನು ಕಳಸ ತಾಲೂಕಿನ ಹೊರನಾಡು, ಬಲಿಗೆ, ಕುದುರೆಮುಖ, ಸಂಸೆ, ಹಿರೇಬೈಲು ಸುತ್ತಮುತ್ತ ಸೋಮವಾರ ರಾತ್ರಿ ಆರಂಭವಾದ ಮಳೆ ಮಂಗಳವಾರ ಮಧ್ಯಾಹ್ನದವರೆಗೂ ಸುರಿದಿದೆ. ಭಾರೀ ಮಳೆಯಿಂದಾಗಿ ತಾಲೂಕಿನಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿತ್ತು, ಎನ್.ಆರ್.ಪುರ, ಶೃಂಗೇರಿ, ಕೊಪ್ಪ ತಾಲೂಕಿನಲ್ಲೂ ಸೋಮವಾರ ಹಾಗೂ ಮಂಗಳವಾರ ಭಾರೀ ಮಳೆ ಸುರಿದ ಬಗ್ಗೆ ವರದಿಯಾಗಿದೆ. ಭಾರೀ ಮಳೆಯಿಂದಾಗಿ ಮಲೆನಾಡು ಭಾಗದ ತುಂಗಾ, ಭದ್ರಾ, ಹೇಮಾವತಿ ನದಿಗಳಲ್ಲಿ ನೀರಿನ ಹರಿವಿನಲ್ಲಿ ಕೊಂಚ ಏರಿಕೆ ಕಂಡು ಬಂದಿದೆ. ಭಾರೀ ಮಳೆಯಿಂದಾಗಿ ಮಲೆನಾಡು ಭಾಗದಲ್ಲಿ ಅಲ್ಲಲ್ಲಿ ಮರಗಳು ರಸ್ತೆ, ವಿದ್ಯುತ್ ಮಾರ್ಗಗಳ ಮೇಲೆ ಉರುಳಿದ್ದು, ನೂರಾರು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಪರಿಣಾಮ ಹಲವು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

ಚಿಕ್ಕಮಗಳೂರು ತಾಲೂಕಿನಾದ್ಯಂತ ಸೋಮವಾರ ರಾತ್ರಿ ಹಾಗೂ ಮಂಗಳವಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಧಾರಾಕಾರವಾಗಿ ಸುರಿದ ಮಳೆ ಮಧ್ಯಾಹ್ನದ ಬಳಿಕ ಬಿಡುವು ನೀಡಿತ್ತು. ಜಿಲ್ಲೆಯ ಕಡೂರು, ತರೀಕೆರೆ, ಅಜ್ಜಂಪುರ ತಾಲೂಕು ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿ ಕೆಲ ಹೊತ್ತು ಭಾರೀ ಮಳೆಯಾಗಿದ್ದರೆ, ಮಂಗಳವಾರ ಅಲ್ಲಲ್ಲಿ ಸಾಧಾರಣ ಮಳೆಯಾಗಿದೆ.

ಜಿಲ್ಲಾದ್ಯಂತ ರೆಡ್ ಅಲರ್ಟ್; ಸಾರ್ವಜನಿಕರಿಗೆ ಸೂಚನೆ

ಪೂರ್ವ ಮುಂಗಾರು ಮಳೆ ಪ್ರಾರಂಭವಾಗಿದ್ದು, ಮುಂದಿನ 2 ದಿನಗಳು ಹೆಚ್ಚಿನ ಮಳೆಯಾಗುವ ಸಾದ್ಯತೆ ಇರುವುದರಿಂದ ಜಿಲ್ಲೆಯಲ್ಲಿ ಮೇ 21ರಂದು ರೆಡ್ ಅಲರ್ಟ್ ಹಾಗೂ ಮೇ 22ರಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮುಂಜಾಗ್ರತಾ ಕ್ರಮವಹಿಸಬೇಕಿದ್ದು, ಸಾರ್ವಜನಿಕರಿಗೆ ಮುಂದಿನ ಎರಡು ದಿನಗಳು ಅಥವಾ ಮಳೆ ಕಡಿಮೆಯಾಗುವವರೆಗೆ ಈ ಕೆಳಕಂಡ ಸೂಚನೆಗಳನ್ನು ಪಾಲಿಸುವಂತೆ ಕೋರಲಾಗಿದೆ. ಸಾರ್ವಜನಿಕರು ನದಿಗಳಿಗೆ ಅಥವಾ ತಗ್ಗು ಪ್ರದೇಶಗಳಿಗೆ ತೆರಳದಂತೆ ಕಟ್ಟೆಚ್ಚರ ವಹಿಸುವುದು. ಸಾರ್ವಜನಿಕರು ಜಾನುವಾರುಗಳನ್ನು ಶುಚಿಗೊಳಿಸಲು ಅಥವಾ ಬಟ್ಟೆಗಳನ್ನು ತೊಳೆಯಲು ಹಳ್ಳ. ಕೆರೆ ಕಟ್ಟೆಗಳಿಗೆ ತೆರಳಬಾರದು. ಹಾಗೂ ಮಳೆಯಿಂದಾಗಿ ಧರೆ, ಗುಡ್ಡ ಕುಸಿತ ಉಂಟಾಗುವ ಸಂಭವವಿರುವುದರಿಂದ ಸಾರ್ವಜನಿಕರು ಎಚ್ಚರ ವಹಿಸುವುದು. ಈ ಸೂಚನೆಗಳನ್ನು ಪಾಲಿಸುವ ಮೂಲಕ ಸಾರ್ವಜನಿಕರು ಯಾವುದೇ ಅಪಾಯಕಾರಿ ಘಟನೆಗಳಿಗೆ ಅವಕಾಶ ಕೊಡದೆ ಜಿಲ್ಲಾಡಳಿತಕ್ಕೆ ಸಹಕಾರ ನೀಡಲು ಕೋರಿದೆ. ಹೆಚ್ಚಿನ ಮಾಹಿತಿಗಾಗಿ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ-08262-238950 ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಜಿಲ್ಲಾಧಿಕಾರಿ ಹಾಗೂ ಅಧ್ಯಕ್ಷರು ತಿಳಿಸಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News