ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಮುಂದುವರಿದ ಮಳೆ ಆರ್ಭಟ
ಚಿಕ್ಕಮಗಳೂರು: ಕಾಫಿನಾಡಿನ ಮಲೆನಾಡು ಭಾಗದಲ್ಲಿ ಮುಂಗಾರು ಮಳೆ ಆರ್ಭಟ ಮುಂದುವರಿದಿದೆ. ಮಳೆಯ ಆರ್ಭಟ ಕೊಂಚ ಕಡಿಮೆಯಾಗಿದ್ದರೂ ಭಾರೀ ಮಳೆ, ಗಾಳಿ ಪರಿಣಾಮ ಅಲ್ಲಲ್ಲಿ ಬೃಹತ್ ಮರಗಳು ರಸ್ತೆ ಮೇಲೆ ಉರುಳಿ ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು. ಸೋಮವಾರ ಬೆಳಗ್ಗೆ ಭಾರೀ ಮಳೆ, ಗಾಳಿ ಪರಿಣಾಮ ಚಲಿಸುತ್ತಿದ್ದ ಬೈಕ್ ಸವಾರನ ಮೇಲೆ ಮರದ ಕೊಂಬೆ ಮುರಿದು ಬಿದ್ದು ತೀವ್ರವಾಗಿ ಗಾಯಗೊಂಡಿದ್ದ ಬೈಕ್ ಸವಾರ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವ ಘಟನೆ ನಡೆದಿದೆ.
ಕಾಫಿನಾಡಿನ ಬಯಲು ಭಾಗದಲ್ಲಿ ಸೋಮವಾರ ಸಾಧಾರಣ ಮಳೆ ಹಾಗೂ ಗಾಳಿಯ ಆರ್ಭಟ ಇದ್ದರೇ, ಮಲೆನಾಡು ಭಾಗದಲ್ಲಿ ಭಾರೀ ಮಳೆಯೊಂದಿಗೆ ಭಾರೀ ಗಾಳಿಯ ಬೀಸಿದ ಪರಿಣಾಮ ಹಲವೆಡೆ ಬೃಹತ್ ಮರಗಳು, ವಿದ್ಯುತ್ ಕಂಬಗಳು ಧರಾಶಾಹಿಯಾಗುತ್ತಿವೆ. ಸೋಮವಾರ ಬೆಳಗ್ಗೆ ಬಾಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಎಲೆಕಲ್ಲು ಎಂಬಲ್ಲಿ ಚಲಿಸುತ್ತಿದ್ದ ಬೈಕ್ ಸವಾರನ ಮೇಲೆ ಮರದಕೊಂಬೆ ಮುರಿದು ಬಿದ್ದ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳುಗಳನ್ನು ಸಕಾಲದಲ್ಲಿ ಬಾಳೆಹೊನ್ನೂರು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ. ಮೃತ ವ್ಯಕ್ತಿಯನ್ನು ಬಾಳೆಹೊನ್ನೂರು ಸಮೀಪದ ಕಡಬಗೆರೆ ನಿವಾಸಿ ಅನಿಲ್ ರೊಝಾರಿಯೋ(50) ಎಂದು ಗುರುತಿಸಲಾಗಿದೆ.
ಚಿಕ್ಕಮಗಳೂರು ತಾಲೂಕಿನ ಕೈಮರದಿಂದ ಬಾಬಾ ಬುಡನ್‍ಗಿರಿ ಹೋಗುವ ರಾಜ್ಯ ಹೆದ್ದಾರಿಯಲ್ಲಿ ಭಾರೀ ಮಳೆ, ಗಾಳಿ ಪರಿಣಾಮ ಭಾರೀ ಗಾತ್ರದ ಮರವೊಂದು ರಸ್ತೆ ಉರುಳಿ ಬಿದ್ದ ಪರಿಣಾಮ ಹಲವು ಗಂಟೆಗಳ ಕಾಲ ರಸ್ತೆಯಲ್ಲಿ ವಾಹನಗಳ ಸಂಚಾರ ಸ್ತಬ್ಧಗೊಂಡಿತ್ತು. ಪೊಲೀಸರು, ಅಗ್ನಿಶಾಮಕದಳ ಹಾಗೂ ಸ್ಥಳೀಯರು ರಸ್ತೆಗೆ ಬಿದ್ದಿದ್ದ ಮರ ತೆರವು ಮಾಡಿದ್ದರಿಂದ ವಾಹನಗಳ ಸಂಚಾರ ಪುನಾರಂಭಗೊಂಡಿದೆ. ಕೊಪ್ಪ ತಾಲೂಕಿನ ಕೊಗ್ರೆ ಸಮೀಪದ ವೆಂಕಟರಮಣ ದೇವಾಲಯದ ಬಳಿ ಬೃಹತ್ ಗಾತ್ರದ ಮರ ಬುಡಸಹಿತ ರಸ್ತೆ ಮೇಲೆ ಉರುಳಿ ಬಿದ್ದ ಪರಿಣಾಮ ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಶೃಂಗೇರಿ-ಮಂಗಳೂರು ಹೆದ್ದಾರಿಯಲ್ಲಿರುವ ನೆಮ್ಮಾರು ಗ್ರಾಮದ ಬಳಿ ರಸ್ತೆ ಬದಿಯಲ್ಲಿ ಭೂ ಕುಸಿತ ಉಂಟಾಗಿ ರಸ್ತೆ ಮೇಲೆ ಭಾರೀ ಮಣ್ಣು ಉರುಳಿದ್ದು, ಜೆಸಿಬಿಯಂತ್ರದಿಂದ ಮಣ್ಣು ತೆರವು ಮಾಡಿ ವಾಹನ ಸಂಚಾರಕ್ಕೆ ರಸ್ತೆಯನ್ನು ಮುಕ್ತಗೊಳಿಸಲಾಗಿದೆ.
ಉಳಿದಂತೆ ಮಲೆನಾಡು ಭಾಗದ ಮೂಡಿಗೆರೆ, ಕಳಸ, ಕೊಪ್ಪ, ಶೃಂಗೇರಿ, ಎನ್.ಆರ್.ಪುರ ತಾಲೂಕುಗಳ ವ್ಯಾಪ್ತಿಯಲ್ಲಿ ಭಾರೀ ಮಳೆ, ಗಾಳಿ ಮುಂದುವರಿದಿದ್ದು, ತುಂಗಾ, ಭದ್ರಾ, ಹೇಮಾವತಿ ನದಿಗಳಲ್ಲಿ ನೀರಿನ ಹರಿವಿನಲ್ಲಿ ಏರಿಕೆಯಾಗುತ್ತಿದೆ. ಬಯಲು ಭಾಗದಲ್ಲಿ ಸೋಮವಾರ ಸಾಧಾರಣ ಮಳೆಯಾಗಿತ್ತು, ಭಾರೀ ಗಾಳಿ ಆರ್ಭಟ ಇತ್ತು.