×
Ad

ಚಿಕ್ಕಮಗಳೂರಿನಲ್ಲಿ ಭಾರೀ ಮಳೆ | ಹಲವೆಡೆ ಮರಗಳು-ವಿದ್ಯುತ್ ಕಂಬಗಳು ಧರಾಶಾಹಿ

Update: 2025-06-15 16:28 IST

ಚಿಕ್ಕಮಗಳೂರು : ಕಾಫಿನಾಡಿನಲ್ಲಿ ಮುಂಗಾರು ಮಳೆ ಚುರುಕುಗೊಂಡಿದೆ. ಜಿಲ್ಲೆಯ ಮಲೆನಾಡು ಭಾಗದಲ್ಲಿ ಶನಿವಾರ ರಾತ್ರಿಯಿಂದ ಧಾರಾಕಾರ ಮಳೆ ಸುರಿಯಲಾರಂಭಿಸಿದ್ದರೆ, ರವಿವಾರ ಬೆಳಗ್ಗೆಯಿಂದಲೇ ಮಳೆ ಆರ್ಭಟ ಜೋರಾಗಿದೆ. ಭಾರೀ ಮಳೆಗೆ ಮಲೆನಾಡು ಭಾಗದಲ್ಲಿ ಅಲ್ಲಲ್ಲಿ ಭೂಕುಸಿತವಾಗಿದ್ದರೇ, ಮರಗಳು, ವಿದ್ಯುತ್ ಕಂಬಗಳು ಧರಾಶಾಹಿಯಾಗುತ್ತಿವೆ.

ಜಿಲ್ಲಾದ್ಯಂತ ಶನಿವಾರ ಸಂಜೆಯಿಂದ ಮುಂಗಾರು ಮಳೆ ಚುರುಕಗೊಂಡಿದೆ. ಜಿಲ್ಲೆಯ ಮಲೆನಾಡು ಭಾಗದಲ್ಲಿ ಶನಿವಾರ ಸಂಜೆ, ರಾತ್ರಿ ಆಗಾಗ್ಗೆ ಧಾರಾಕಾರ ಮಳೆಯಾಗುತ್ತಿದ್ದರೆ, ಬಯಲು ಭಾಗದಲ್ಲೂ ಆಗಾಗ್ಗೆ ಸಾಧಾರಣ ಮಳೆಯಾಗುತ್ತಿದೆ. ಜಿಲ್ಲೆಯ ಕಳಸ, ಮೂಡಿಗೆರೆ, ಶೃಂಗೇರಿ, ಕೊಪ್ಪ ತಾಲೂಕುಗಳ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ಹಾಗೂ ರವಿವಾರ ಬೆಳಗ್ಗೆ ಧಾರಾಕಾರ ಮಳೆ ಸುರಿದಿದ್ದು, ಭಾರೀ ಮಳೆಯಿಂದಾಗಿ ಮಲೆನಾಡು ಭಾಗದ ತುಂಗಾ, ಭದ್ರಾ, ಹೇಮಾವತಿ ನದಿಗಳಲ್ಲಿ ನೀರಿನ ಹರಿವು ದಿಢೀರ್ ಏರಿಕೆಯಾಗಿದೆ.

ಶೃಂಗೇರಿ ತಾಲೂಕಿನ ಶೃಂಗೇರಿ-ಎಸ್.ಕೆ.ಬಾರ್ಡರ್-ಕಾರ್ಕಳ ಸಂಪರ್ಕದ ರಾ.ಹೆದ್ದಾರಿಯ ನೆಮ್ಮಾರು ಗ್ರಾಮದ ಸಾಲುಮರ ಎಂಬಲ್ಲಿ ಶನಿವಾರ ಮಧ್ಯರಾತ್ರಿ ರಸ್ತೆ ಬದಿಯಲ್ಲಿನ ಗುಡ್ಡ ಕುಸಿದು ಗುಡ್ಡದ ಮಣ್ಣು ಹೆದ್ದಾರಿಗೆ ಬಿದ್ದ ಪರಿಣಾಮ ರಸ್ತೆಯಲ್ಲಿ ವಾಹನ ಸಂಚಾರ ಬಂದ್ ಆಗಿತ್ತು. ಸ್ಥಳಕ್ಕೆ ಆಗಮಿಸಿದ ಪೊಲೀಸ್, ಅಗ್ನಿಶಾಮಕದಳದ ಸಿಬ್ಬಂದಿ ಹಾಗೂ ಸ್ಥಳೀಯರು ಮಣ್ಣು ತೆರವು ಮಾಡಿದ್ದರಿಂದ ಸದ್ಯ ರಸ್ತೆಯಲ್ಲಿ ವಾಹನ ಸಂಚಾರ ಪುನಾರಂಭಗೊಂಡಿದೆ. ಗುಡ್ಡ ಕುಸಿದ ಪರಿಣಾಮ ರಾತ್ರಿ ವೇಳೆ ಶೃಂಗೇರಿಯಿಂದ ದಕ್ಷಿಣ ಕನ್ನಡ, ಉಡುಪಿಗೆ ತೆರಳಬೇಕಾಗಿದ್ದ ವಾಹನಗಳನ್ನು ಆಗುಂಬೆ ಮಾರ್ಗವಾಗಿ ತೆರಳಲು ಪೊಲೀಸರು ಅನುವು ಮಾಡಿಕೊಟ್ಟಿದ್ದರು.

ಮಲೆನಾಡು ಭಾಗದಲ್ಲಿ ಬೆಳಗ್ಗೆ ಧಾರಾಕಾರವಾಗಿ ಸುರಿದ ಮಳೆ ಮಧ್ಯಾಹ್ನದ ವೇಳೆ ಕೊಂಚ ಬಿಡುವು ನೀಡಿದ್ದು, ಸಂಜೆ ವೇಳೆ ಮತ್ತೆ ಮಳೆ ಬಿರುಸುಗೊಳ್ಳುವ ಸಾಧ್ಯತೆ ಹೆಚ್ಚಾಗಿದ್ದು, ಮಲೆನಾಡು ಭಾಗದಲ್ಲಿ ಧಟ್ಟ ಮೋಡ, ಮಂಜು ಕವಿದ ವಾತಾವರಣ ನಿರ್ಮಾಣವಾಗಿದೆ. ಇನ್ನು ಚಿಕ್ಕಮಗಳೂರು ನಗರ ಸೇರಿದಂತೆ ತಾಲೂಕಿನಾದ್ಯಂತ ರವಿವಾರ ಬೆಳಗ್ಗೆ ಧಾರಾಕಾರ ಮಳೆ ಸುರಿದಿದ್ದು, ಮಧ್ಯಾಹ್ನದ ವೇಳೆ ಮಳೆ ಬಿಡುವು ನೀಡಿದೆ.

ಮೂಡಿಗೆರೆ ತಾಲೂಕಿನಾದ್ಯಂತ ಮಳೆ ರವಿವಾರ ಧಾರಾಕಾರವಾಗಿ ಸುರಿದಿದ್ದು, ಚಾರ್ಮಾಡಿ ಘಾಟ್ ಹೆದ್ದಾರಿ ವ್ಯಾಪ್ತಿಯಲ್ಲಿ ಧಾರಾಕಾರ ಮಳೆ ಮುಂದುವರಿದಿದೆ. ಮಲೆನಾಡು ಭಾಗದಲ್ಲಿ ಭಾರೀ ಮಳೆಯಿಂದಾಗಿ ಅಲ್ಲಲ್ಲಿ ಮರಗಳು ಧರೆಗುರುಳಿದ್ದು, ನೂರಾರು ವಿದ್ಯುತ್ ಕಂಬಗಳೂ ಧರಾಶಹಿಯಾಗಿವೆ. ಹಲವಾರು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News