×
Ad

ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ಭಾರೀ ಮಳೆ; ಶೃಂಗೇರಿಯ ಗಾಂಧಿ ಮೈದಾನ ನದಿ ನೀರಿನಿಂದ ಜಲಾವೃತ

ಆ.18ರಂದು ಜಿಲ್ಲೆಯ 5 ತಾಲೂಕುಗಳಲ್ಲಿ ಅಂಗನವಾಡಿ-ಶಾಲೆಗಳಿಗೆ ರಜೆ

Update: 2025-08-17 20:27 IST

ಚಿಕ್ಕಮಗಳೂರು, ಆ.17 : ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ರವಿವಾರ ಮಳೆ ಬಿರುಸುಗೊಂಡಿದೆ. ಜಿಲ್ಲೆಯ ಮಲೆನಾಡು ಭಾಗದಲ್ಲಿ ಬೆಳಗ್ಗೆಯಿಂದ ಧಾರಾಕಾರ ಮಳೆ ಸುರಿದಿದ್ದು, ಭಾರೀ ಮಳೆಯಿಂದಾಗಿ ಭದ್ರಾ, ತುಂಗಾ, ಹೇಮಾವತಿ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ.

ಭಾರೀ ಮಳೆಯಿಂದಾಗಿ ಶೃಂಗೇರಿ ಪಟ್ಟಣದಲ್ಲಿ ಮುಖ್ಯ ರಸ್ತೆವರೆಗೆ ತುಂಗಾ ನದಿಯ ನೆರೆ ನೀರು ಬಂದಿದ್ದು, ದೇವಾಲಯಕ್ಕೆ ಹೊಂದಿಕೊಂಡಿರುವ ಗಾಂಧಿ ಮೈದಾನ ಜಲಾವೃತಗೊಂಡಿದೆ. ಅಲ್ಲದೇ, ಮಲೆನಾಡು ಭಾಗದಲ್ಲಿ ಅಲ್ಲಲ್ಲಿ ಧರೆ ಕುಸಿತದಂತಹ ಅವಘಡಗಳ ಸರಣಿ ಮುಂದುವರಿದಿದೆ. ಮಲೆನಾಡು ಭಾಗದಲ್ಲಿ ಭಾರೀ ಮಳೆ ಮುಂದುವರಿಯುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಸೋಮವಾರ ಮಲೆನಾಡು ಭಾಗದ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆ ಘೋಷಿಸಿ ಜಿಲ್ಲಾಡಳಿತ ಆದೇಶಿಸಿದೆ.

ಜಿಲ್ಲೆಯ ಕಳಸ, ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ ತಾಲೂಕು ವ್ಯಾಪ್ತಿಯಲ್ಲಿ ರವಿವಾರ ಬೆಳಗ್ಗೆಯಿಂದ ಸಂಜೆವರೆಗೆ ಧಾರಾಕಾರ ಮಳೆಯಾಗಿದ್ದು, ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಭಾರೀ ಮಳೆಯಿಂದಾಗಿ ಹೇಮಾವತಿ, ಭದ್ರಾ, ತುಂಗಾ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಶೃಂಗೇರಿ ತಾಲೂಕಿನಾದ್ಯಂತ ರವಿವಾರ ಭಾರೀ ಮಳೆ ಸುರಿದ ಪರಿಣಾಮ ತುಂಗಾ ನದಿ ಅಪಾಯದ ಮಟ್ಟದಲ್ಲಿ ಹರಿಯಲಾರಂಭಿಸಿದೆ.

ಶೃಂಗೇರಿ ಪಟ್ಟಣದಲ್ಲಿ ಹರಿಯುವ ತುಂಗಾ ನದಿಯ ನೆರೆ ನೀರು ಶರದಾಂಬ ದೇವಾಲಯದ ಸಮೀಪದಲ್ಲಿರುವ ಗಾಂಧಿ ಮೈದಾನವನ್ನು ಆವರಿಸಿಕೊಂಡಿದ್ದು, ಪ್ಯಾರಲಲ್ ರಸ್ತೆ ನೀರಿನಲ್ಲಿ ಮುಳುಗಡೆಯಾಗಿದೆ. ಗಾಂಧಿಮೈದಾನದಲ್ಲಿದ್ದ ಅಂಗಡಿ ಮುಂಗಟ್ಟುಗಳನ್ನು ತೆರವು ಮಾಡಲಾಗಿದೆ.

ಶೃಂಗೇರಿ ತಾಲೂಕಿನ ಆನೆಗುಂದಿ ಎಂಬಲ್ಲಿರುವ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಭೂಕುಸಿತ ಸಂಭವಿಸಿದ್ದು, ಹೆದ್ದಾರಿಯ ಮೇಲೆ ಧರೆಯ ಮಣ್ಣು ಬಿದ್ದಿದೆ. ಸದ್ಯ ಮಣ್ಣು ತೆರವು ಮಾಡಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆಯಾದರೂ ಮತ್ತೆ ಧರೆ ಕುಸಿಯುವ ಆತಂಕ ಎದುರಾಗಿದೆ. ಶನಿವಾರ ಮಧ್ಯರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಶೃಂಗೇರಿ ತಾಲೂಕಿನ ನೆಮ್ಮಾರು ಗ್ರಾಪಂ ವ್ಯಾಪ್ತಿ ಹರೂರು ಎಂಬಲ್ಲಿ ಪದ್ಮಾವತಿ ಎಂಬವರ ಮನೆಯ ಗೋಡೆ ಕುಸಿದು ಬಿದ್ದಿದೆ. ಮನೆ ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದು, ಪರಿಹಾರಕ್ಕೆ ಒತ್ತಾಯಿಸಿದ್ದಾರೆ. ತಾಲೂಕಿನ ಕಿಗ್ಗಾ-ಮಳೂರು-ಕೋಗಿನಬೈಲು, ಮೇಲ್ಗಟ್ಟು ಸಂಪರ್ಕದ ರಸ್ತೆಗಳಲ್ಲಿ ಮಳೆ ನೀರು ನಿಂತು ಜನ, ವಾಹನ ಸಂಚಾರಕ್ಕೆ ತೊಂದರೆಯಾಗಿವೆ.

ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ನಿರಂತರ ಮಳೆಯಿಂದಾಗಿ ಘಾಟಿ ವ್ಯಾಪ್ತಿಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ಭಾರೀ ತೊಂದರೆಯಾಗಿದೆ. ಕಳಸ, ಕೊಪ್ಪ, ಎನ್.ಆರ್.ಪುರ ತಾಲೂಕು ವ್ಯಾಪ್ತಿಯಲ್ಲೂ ರವಿವಾರ ಇಡೀ ದಿನ ಭಾರೀ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

ಭಾರೀ ಮಳೆಯಿಂದಾಗಿ ವಾಹನಗಳ ಸಂಚಾರಕ್ಕೂ ತೊಂದರೆಯಾಗಿದ್ದು, ಕೊಪ್ಪ ತಾಲೂಕಿನ ಹೆಗ್ಗದ್ದೆ ಎಂಬಲ್ಲಿ ಪ್ರವಾಸಿಗರಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಾಫಿ ತೋಟಕ್ಕೆ ಉರುಳಿ ಬಿದ್ದಿದೆ. ಕಾರಿನಲ್ಲಿದ್ದ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಶೃಂಗೇರಿ ತಾಲೂಕಿನ ಮರಿಗೇಬೈಲು ಬಳಿ ಖಾಸಗಿ ಬಸ್ ಹಾಗೂ ಮಿನಿ ಟ್ರಕ್ ಢಿಕ್ಕಿಯಾಗಿ ಮೂವರು ಗಾಯಗೊಂಡಿದ್ದಾರೆ. 

ಮಲೆನಾಡು ಭಾಗದಲ್ಲಿ ಸೋಮವಾರವೂ ಭಾರೀ ಮಳೆಯಾಗುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಸೋಮವಾರ ಮೂಡಿಗೆರೆ, ಕೊಪ್ಪ, ಕಳಸ, ಶೃಂಗೇರಿ, ಎನ್.ಆರ್.ಪುರ ತಾಲೂಕುಗಳ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ಘೋಷಿಸಿ ಜಿಲ್ಲಾಡಳಿತ ಆದೇಶಿಸಿದೆ. ಚಿಕ್ಕಮಗಳೂರು ತಾಲೂಕಿನ ವಸ್ತಾರೆ, ಆಲ್ದೂರು, ಆವತಿ, ಜಾಗರ, ಖಾಂಡ್ಯ ಹೋಬಳಿ ವ್ಯಾಪ್ತಿಯ ಅಂಗನವಾಡಿ, ಶಾಲೆಗಳಿಗೆ ಮಾತ್ರ ರಜೆ ನೀಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News