×
Ad

ಕಡೂರು | ಬಾಲ್ಯ ವಿವಾಹದ ಬಗ್ಗೆ ಮಾಹಿತಿ ನೀಡಿದ ಆರೋಪ : ಅಂಗನವಾಡಿ ಶಿಕ್ಷಕಿ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ

Update: 2025-07-22 20:18 IST

ಚಿಕ್ಕಮಗಳೂರು : ಬಾಲ್ಯ ವಿವಾಹ ನಡೆಯುತ್ತಿದ್ದ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆಂದು ಆರೋಪಿಸಿ ಅಂಗನವಾಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಶಿಕ್ಷಕಿ ಹಾಗೂ ಆಕೆಯ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ್ದ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಯರೇಹಳ್ಳಿ ಗ್ರಾಮದಲ್ಲಿ ಮಂಗಳವಾರ ವರದಿಯಾಗಿದೆ.

ಯರೇಹಳ್ಳಿ ಗ್ರಾಮದಲ್ಲಿ ವಾಸವಾಗಿರುವ ತೇಜಸ್ವಿನಿ ಎಂಬ ಅಂಗನವಾಡಿ ಶಿಕ್ಷಕಿ ಕೆಲ ದಿನಗಳ ಹಿಂದೆ ತಮ್ಮ ಗ್ರಾಮ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಅಪ್ರಾಪ್ತ ವಯಸ್ಸಿನ ಬಾಲಕಿಯೋರ್ವಳ ವಿವಾಹದ ಬಗ್ಗೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

ಅಂಗನವಾಡಿ ಶಿಕ್ಷಕಿಯಿಂದಾಗಿ ವಿವಾಹ ನಿಂತು ಹೋಗಿದ್ದಲ್ಲದೆ, ಬಾಲ್ಯ ವಿವಾಹಕ್ಕೆ ಪ್ರೋತ್ಸಾಹ ನೀಡಿದ್ದ ಪೋಷಕರು ಮತ್ತು ವರನ ವಿರುದ್ಧ ಪ್ರಕರಣ ದಾಖಲಾಗುವಂತಾಗಿದೆ ಎಂದು ಆರೋಪಿಸಿ ಶಿಕ್ಷಕಿ ಹಾಗೂ ಆಕೆಯ ಕುಟುಂಬಸ್ಥರಿಗೆ ಗ್ರಾಮಸ್ಥರು ಪಂಚಾಯತ್ ನಡೆಸಿ ದಂಡ ವಿಧಿಸಿದ್ದಾರೆ. ಅಲ್ಲದೆ, ಸಾಮಾಜಿಕ ಬಹಿಷ್ಕಾರವನ್ನೂ ಹಾಕಿದ್ದರು ಎಂಬ ಆರೋಪ ಕೇಳಿ ಬಂದಿದೆ.

ಅಂಗನವಾಡಿ ಶಿಕ್ಷಕಿ ಹಾಗೂ ಆಕೆಯ ಕುಟುಂಬಸ್ಥರು ಗ್ರಾಮದ ಯಾರೊಂದಿಗೂ ಮಾತನಾಡುವಂತಿಲ್ಲ, ಗ್ರಾಮದಲ್ಲಿರುವ ಯಾವುದೇ ದೇವಾಲಯವನ್ನೂ ಪ್ರವೇಶಿಸುವಂತಿಲ್ಲ ಎಂದು ಬಹಿಷ್ಕಾರ ಹಾಕಿರುವ ಗ್ರಾಮಸ್ಥರು, ಅಂಗನವಾಡಿ ಶಿಕ್ಷಕಿ ಗ್ರಾಮದಲ್ಲಿ ಕೆಲಸ ಮಾಡಬಾರದು, ಆಕೆ ಕೆಲಸಕ್ಕೆ ರಾಜೀನಾಮೆ ಕೊಡಬೇಕೆಂದು ಪಟ್ಟು ಹಿಡಿದಿದ್ದಾರೆ ಎಂದು ತಿಳಿದು ಬಂದಿದೆ.

ಅಲ್ಲದೆ ಗ್ರಾಮದಲ್ಲಿರುವ ಯಾರೊಬ್ಬರೂ ಅಂಗನವಾಡಿ ಶಿಕ್ಷಕಿಯ ಕುಟುಂಬಸ್ಥರೊಂದಿಗೆ ಮಾತನಾಡಬಾರದು. ಮಾತನಾಡಿದಲ್ಲಿ ಅವರಿಗೂ ದಂಡ ವಿಧಿಸಲಾಗುವುದು ಎಂಬ ಎಚ್ಚರಿಕೆಯನ್ನೂ ಪಂಚಾಯತ್ ನಡೆಸಿದ ಗ್ರಾಮದ ಮುಖಂಡರು ನೀಡಿದ್ದಾರೆಂದು ತಿಳಿದು ಬಂದಿದೆ. ಈ ಬಹಿಷ್ಕಾರ ಪದ್ಧತಿಯಿಂದ ನ್ಯಾಯ ಕೊಡಿಸಬೇಕೆಂದು ಅಂಗನವಾಡಿ ಶಿಕ್ಷಕಿಯ ಕುಟುಂಬಸ್ಥರು ಪೊಲೀಸರಿಗೆ ಮನವಿ ಮಾಡಿದ್ದಾರೆ.

ಈ ಗ್ರಾಮದಲ್ಲಿ ಹಿಂದಿನಿಂದಲೂ ಸಾಮಾಜಿಕ ಬಹಿಷ್ಕಾರ ಹಾಕುವ ಪದ್ಧತಿ ಇದ್ದು, ಅಂಗನವಾಡಿ ಶಿಕ್ಷಕಿಯ ಕುಟುಂಬಸ್ಥರಿಗಲ್ಲದೆ ಇನ್ನೂ ಎರಡೂ ಕುಟುಂಬಗಳಿಗೆ ಗ್ರಾಮದ ಮುಖಂಡರು ಪಂಚಾಯತ್ ನಡೆಸಿ ದಂಡ ಹಾಕಿದ್ದಾರೆ ಎಂದು ಹೆಸರು ಹೇಳಲಿಚ್ಚಿಸದ ಕೆಲ ಗ್ರಾಮಸ್ಥರು ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.

ಈ ಹಿಂದೆ ಶಿಕ್ಷಕಿಯೊಬ್ಬರು ಕೆಲಸಕ್ಕೆ ರಾಜೀನಾಮೆ ನೀಡಬೇಕು ಎಂದು ಆಕೆಯ ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ದ ಗ್ರಾಮಸ್ಥರು, ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸದೆ ಶಿಕ್ಷಕಿಯ ರಾಜೀನಾಮೆಗೆ ಬಲವಂತ ಮಾಡಿದ್ದರು ಎನ್ನಲಾಗಿದೆ. 

ಪೊಲೀಸರಿಂದ ಸಭೆ: ಕಾನೂನು ಕ್ರಮದ ಎಚ್ಚರಿಕೆ

ಅಂಗನವಾಡಿ ಶಿಕ್ಷಕಿ ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ದ ಸುದ್ದಿ ತಿಳಿಯುತ್ತಿದ್ದಂತೆ ಬೀರೂರು ಪೊಲೀಸ್ ಠಾಣೆಯ ಪೊಲೀಸರು ಮಂಗಳವಾರ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಸಭೆ ನಡೆಸಿದರು. ಯಾವುದೇ ವ್ಯಕ್ತಿ, ಕುಟುಂಬಕ್ಕೆ ಬಹಿಷ್ಕಾರ ಹಾಕುವುದು ಕಾನೂನಿನಡಿಯಲ್ಲಿ ಅಪರಾಧವಾಗಿದೆ. ಈ ಕೃತ್ಯಕ್ಕೆ ಶಿಕ್ಷೆಯಾಗಲಿದೆ. ಬಹಿಷ್ಕಾರ ಪದ್ಧತಿ ಅನಿಷ್ಟ ಪದ್ಧತಿಯಾಗಿದ್ದು, ಇದಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ. ಬಹಿಷ್ಕಾರ ಪದ್ಧತಿಯನ್ನು ಮುಂದುವರಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಕೂಡಲೇ ಬಹಿಷ್ಕಾರ ಹಾಕಿರುವುದನ್ನು ಹಿಂಪಡೆದು ನೊಂದ ಕುಟುಂಬಸ್ಥರು ಗೌರವದಿಂದ ಬದುಕಲು ಅವಕಾಶ ನೀಡಬೇಕು. ಈ ಸಂಬಂಧ ಸಂತ್ರಸ್ತರಿಗೆ ಯಾವುದೇ ತೊಂದರೆ ನೀಡಬಾರದು ಎಂದು ಪೊಲೀಸರು ಬಹಿಷ್ಕಾರ ಹಾಕಿದ್ದ ಗ್ರಾಮಸ್ಥರಿಗೆ ಮನವರಿಕೆ ಮಾಡಿದ್ದಾರೆ ಎನ್ನಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News