Chikkamagaluru | ಚಿರತೆ ದಾಳಿಗೆ 5 ವರ್ಷದ ಮಗು ಬಲಿ
ಮನೆಯವರ ಮುಂದೆಯೇ ಮಗುವನ್ನು ಹೊತ್ತೊಯ್ದಿದ್ದ ಚಿರತೆ
ಸಾಂದರ್ಭಿಕ ಚಿತ್ರ (freepik)/ಚಿರತೆ ದಾಳಿಗೆ 5 ವರ್ಷದ ಮಗು ಬಲಿ
ಚಿಕ್ಕಮಗಳೂರು : ಮಗುವಿನ ಮೇಲೆ ಚಿರತೆ ದಾಳಿ ನಡೆಸಿ ಸಾಯಿಸಿದ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಬೀರೂರು ಪೊಲೀಸ್ ಠಾಣೆ ವ್ಯಾಪ್ತಿಯ ಮುಂಡ್ರೆ ಸಮೀಪದ ನವಿಲುಗುಡ್ಡ ಗ್ರಾಮದಲ್ಲಿ ನಡೆದಿದೆ.
ಬಸವರಾಜ್ ಮತ್ತು ರೇಣುಕಮ್ಮ ದಂಪತಿ ಪುತ್ರಿ ಸಾನ್ವಿ (5) ಚಿರತೆ ದಾಳಿಯಿಂದ ಮೃತಪಟ್ಟಿದ್ದಾಳೆ. ಮನೆಯ ಹಿಂದೆ ನಿಂತಿದ್ದ ಮಗುವಿನ ಸಮೀಪ ಚಿರತೆ ಬಂದಿದ್ದು, ಚಿರತೆ ನೋಡಿ ಮಗು ಕೂಗಿಕೊಳ್ಳುತ್ತಿದ್ದಂತೆ ಮನೆಯವರು ಬಂದು ನೋಡಿದಾಗ ಚಿರತೆ ಮಗುವನ್ನು ಕಾಡಿನತ್ತ ಎಳೆದೊಯ್ದಿದೆ.
ಸ್ಥಳೀಯರು ಕಾಡಂಚಿನಲ್ಲಿ ಹುಡುಕಾಟ ನಡೆಸಿದಾಗ ಮಗುವಿನ ಮೃತದೇಹ ಪತ್ತೆಯಾಗಿದೆ. ಬೀರೂರು ಪೊಲೀಸ್ ಠಾಣಾಯಲ್ಲಿ ಪ್ರಕರಣ ದಾಖಲಾಗಿದೆ.
ಬಸವರಾಜ್ ಬಾಗಲಕೋಟೆ ಜಿಲ್ಲೆಯ ಹನಗುಂದ ತಾಲೂಕಿನ ಕಮ್ಮತ್ತಗಿರಿ ನಿವಾಸಿಯಾಗಿದ್ದು, ಕುಟುಂಬ ಸಮೇತರಾಗಿ ಗ್ರಾಮದ ರಾಮಚಂದ್ರಪ್ಪ ಅವರ ತೋಟ ಕಾಯುವ ಕೆಲಸಕ್ಕೆ ಬಂದಿದ್ದರು.
ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಹಿಂದೆ ಅನೇಕ ಬಾರಿ ಚಿರತೆ ದಾಳಿ ನಡೆದಿದ್ದು, ಚಿರತೆ ಸೆರೆ ಹಿಡಿಯುವಂತೆ ಸ್ಥಳೀಯರು ಮನವಿ ಮಾಡಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ಅನುಸರಿಸಿದ್ದಾರೆಂದು ಸ್ಥಳೀಯರು ಆರೋಪಿಸಿದ್ದಾರೆ.