×
Ad

ಚಿಕ್ಕಮಗಳೂರು| ತೆಂಗಿನಕಾಯಿ ಕದ್ದ ಆರೋಪದಲ್ಲಿ ಮಾರಣಾಂತಿಕ ಹಲ್ಲೆ: ವ್ಯಕ್ತಿ ಮೃತ್ಯು

ತೋಟದ ಮಾಲಕ ಸೇರಿ ಇಬ್ಬರ ಬಂಧನ

Update: 2025-08-20 21:09 IST

ಬಂಧಿತ ಆರೋಪಿಗಳು

ಚಿಕ್ಕಮಗಳೂರು: ತೆಂಗಿನ ತೋಟದಲ್ಲಿ ತೆಂಗಿನಕಾಯಿ ಕದ್ದಿದ್ದಾನೆಂದು ಆರೋಪಿಸಿ ವ್ಯಕ್ತಿಯೊಬ್ಬನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಪರಿಣಾಮ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ಕಡೂರು ತಾಲೂಕಿನಲ್ಲಿ ಮಂಗಳವಾರ ರಾತ್ರಿ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಸಖರಾಯಪಟ್ಟಣ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ. ಎಸ್.ಬಿದರೆ ಗ್ರಾಮದ ಗೊಲ್ಲರಹಟ್ಟಿ ನಿವಾಸಿ ಕುಮಾರ್(37) ಮೃತ ವ್ಯಕ್ತಿ. ತೆಂಗಿನ ತೋಟದ ಮಾಲಕ ಚಂದ್ರಪ್ಪ ಮತ್ತು ಮಧು ಬಂಧಿತ ಆರೋಪಿಗಳು.

ಎಸ್.ಬಿದರೆ ಗ್ರಾಮದ ಮುಖ್ಯ ರಸ್ತೆ ಬದಿಯಲ್ಲಿ ಚಂದ್ರಪ್ಪ ಅವರ ತೆಂಗಿನ ತೋಟ ಇದ್ದು, ಮಂಗಳವಾರ ಸಂಜೆ ರಸ್ತೆಯಲ್ಲಿ ಹೋಗುತ್ತಿದ್ದ ಕುಮಾರ್ ಅವರಿಗೆ ಮರದಿಂದ ಬಿದ್ದ ತೆಂಗಿನ ಕಾಯಿಯೊಂದು ಸಿಕ್ಕಿದೆ ಎನ್ನಲಾಗಿದೆ.  ಕುಮಾರ್ ತೆಂಗಿನ ಕಾಯಿ ಕಳವು ಮಾಡಿದ್ದಾನೆಂದು ಆರೋಪಿಸಿ ಚಂದ್ರಪ್ಪ ಹಲ್ಲೆ ಮಾಡಿದ್ದಾನೆ. ಈ ವೇಳೆ ಚಂದ್ರಪ್ಪನ ಅಳಿಯ ಮಧು ಎಂಬಾತನೂ ಕುಮಾರ್ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದ ಕುಮಾರ್ ಅವರನ್ನು ತೋಟದ ಪಕ್ಕದ ಹಳ್ಳದಲ್ಲಿ ಬಿಟ್ಟು ಆರೋಪಿಗಳು ಪರಾರಿಯಾಗಿದ್ದರು. ಸುದ್ದಿ ತಿಳಿದ ಸಂಬಂಧಿಕರು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ಕುಮಾರ್ ಅವರನ್ನು ಚಿಕಿತ್ಸೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕುಮಾರ್ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.

ಈ ಸಂಬಂಧ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸರ ವಿರುದ್ಧ ಆರೋಪ: 

ಕುಮಾರ್ ಮೇಲೆ ಚಂದ್ರಪ್ಪ, ಮಧು ಎಂಬವರು ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಬಗ್ಗೆ ಸಖರಾಯಪಟ್ಟಣ ಪೊಲೀಸರಿಗೆ ಘಟನೆ ನಡೆದ ದಿನವೇ ದೂರು ನೀಡಿದ್ದರೂ ಪೊಲೀಸರು ದೂರು ದಾಖಲಿಸಿಕೊಳ್ಳಲು ಉದ್ದೇಶಪೂರ್ವಕವಾಗಿ ವಿಳಂಬ ಮಾಡಿದ್ದಾರೆ ಎಂದು ಸಂಬಂಧಿಕರು ಆರೋಪಿಸಿದರು. ಈ ವೇಳೆ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಸ್ಥಳಕ್ಕೆ ಎಎಸ್ಪಿ ಭೇಟಿ ನೀಡಿ ಸಂತ್ರಸ್ತರ ಅಹವಾಲು ಕೇಳಿ, ಠಾಣಾಧಿಕಾರಿಯನ್ನು ವಿಚಾರಣೆಗೊಳಪಡಿಸುವ ಭರವಸೆ ನೀಡಿದ್ದರಿಂದ ಪರಿಸ್ಥಿತಿ ತಿಳಿಯಾಯಿತು ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News