×
Ad

ಮೋದಿ ಸರಕಾರ ʼಕ್ಯಾಸ್‍ಲೆಸ್ʼ ದೇಶ ನಿರ್ಮಿಸುವುದು ಬೇಡ, ʼಕಾಸ್ಟ್‌ಲೆಸ್ʼ ದೇಶ ನಿರ್ಮಿಸಬೇಕು: ರಾಜರತ್ನ ಅಂಬೇಡ್ಕರ್

Update: 2025-02-06 23:40 IST

ಚಿಕ್ಕಮಗಳೂರು: ಸಂವಿಧಾನ ಜಾರಿಯಾದ ನಂತರ ಈ ದೇಶದಲ್ಲಿ ಜಾತಿ ಪದ್ಧತಿ ಇರಕೂಡದು ಎಂದು ಅಂಬೇಡ್ಕರ್ ಅಂದು ಹೇಳಿದ್ದರು, ಆದರೀಗ ದೇಶದ ಅಧಿಕಾರದ ಚುಕ್ಕಾಣಿ ಹಿಡಿದಿರುವ ಪ್ರಧಾನಿ ಮೋದಿ ನೇತೃತ್ವದ ಸರಕಾರ ʼಕ್ಯಾಸ್‍ಲೆಸ್ʼ ಆಡಳಿತ ಜಾರಿಗೆ ಪ್ರಯತ್ನಿಸುತ್ತಿದೆ, ಆದರೆ ʼಕಾಸ್ಟ್‌ಲೆಸ್ʼ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸುತ್ತಿಲ್ಲ. ನಮಗೆ ಕ್ಯಾಸ್‍ಲೆಸ್ ಸಮಾಜದ ಅಗತ್ಯವಿಲ್ಲ, ಅಂಬೇಡ್ಕರ್ ಬಯಸಿದ, ಸಂವಿಧಾನದ ಆಶಯವಾಗಿರುವ ʼಕಾಸ್ಟ್‌ಲೆಸ್ʼ ಸಮಾಜ ಬೇಕು ಎಂದು ಡಾ.ಬಿ. ಆರ್ ಅಂಬೇಡ್ಕರ್ ಅವರ ಮೊಮ್ಮಗ ರಾಜರತ್ನ ಅಂಬೇಡ್ಕರ್ ಹೇಳಿದ್ದಾರೆ.

ಬುಧವಾರ ರಾತ್ರಿ ತಾಲೂಕಿನ ಆಲ್ದೂರು ಪಟ್ಟಣದಲ್ಲಿ ಅಂಬೇಡ್ಕರ್ ಪುತ್ಥಳಿ ನಿರ್ಮಾಣ ಸಮಿತಿ ಹಾಗೂ ವಿವಿದ ದಲಿತ, ಪ್ರಗತಿಪರ ಸಂಘಟನೆಗಳ ವತಿಯಿಂದ ನಿರ್ಮಿಸಲಾದ ನೂತನ ಅಂಬೇಡ್ಕರ್ ಪುತ್ಥಳಿ ಉದ್ಘಾಟನಾ ಕಾರ್ಯಕ್ರಮ ಹಾಗೂ ಹಾಗೃತಿ ಸಮಾವೇಶಲ್ಲಿ ಭಾಗವಹಿಸಿ ಮಾತನಾಡಿದ ಅವರು, "ಅಂಬೇಡ್ಕರ್ ಪ್ರತಿಮೆ ಸ್ಥಾಪಿಸುವುದಕ್ಕೂ ದೇವಸ್ಥಾನ ನಿರ್ಮಿಸುವುದಕ್ಕೂ ವ್ಯತ್ಯಾಸವಿದೆ. ದೇವಸ್ಥಾನ ನಿರ್ಮಿಸಿ ದೇವರಿಗೆ ನಮಸ್ಕರಿಸಿದರೆ ಮುಗಿಯಿತು, ಆದರೆ ಅಂಬೇಡ್ಕರ್ ಪ್ರತಿಮೆ ಎಂದರೆ ಜವಾಬ್ದಾರಿ, ಸಂಕಲ್ಪ ಎಂದರ್ಥ. ಶೋಷಿತ ಸಮುದಾಯದವರನ್ನು ವಿದ್ಯಾವಂತರನ್ನಾಗಿಸುವುದು, ಉನ್ನತ ಹುದ್ದೆಗೇರಿಸುವುದು, ಜಾತಿ ರಹಿತ ಸಮಾಜ ನಿರ್ಮಾಣ ಮಾಡುವುದು ಎಂದರ್ಥ, ಜಾತಿ ಎನ್ನುವುದು ಈ ದೇಶದ ಎಲ್ಲ ಸಮಸ್ಯೆಗಳಿಗೂ ಮೂಲವಾಗಿರುವುದರಿಂದ ಅಂಬೇಡ್ಕರ್ ಅವರು ಸಂವಿಧಾನ ಜಾರಿ ಸಂದರ್ಭದಲ್ಲಿ ಹೇಳಿದ್ದ ಜಾತಿ ರಹಿತ ಸಮಾಜ ನಿರ್ಮಾಣಕ್ಕೆ ನಮ್ಮನ್ನಾಳುವ ಸರಕಾರಗಳು ಹಾಗೂ ಪ್ರತಿಯೊಬ್ಬರೂ ಸಂಕಲ್ಪ ತೊಡಬೇಕಿದೆ ಎಂದರು.

ಸದ್ಯ ದೇಶ ಆಳುತ್ತಿರುವ ಪ್ರಧಾನಿ ಮೋದಿ ಒಂದು ದೇಶ ಒಂದು ಚುನಾವಣೆ ನೀತಿಯನ್ನು ಮುನ್ನಲೆಗೆ ತಂದ್ದಿದ್ದಾರೆ, ಐದು ವರ್ಷಗಳ ಕಾಲವೂ ಚುನಾವಣೆ ನಡೆಸುವುದರಲ್ಲೇ ಕಾಲ ಕಳೆದು ಹೋಗುತ್ತಿದೆ. ಆದ್ದರಿಂದ ದೇಶಕ್ಕೆ ಒಂದು ದೇಶ ಒಂದು ಚುನಾವಣೆ ಬೇಕು ಎನ್ನುತ್ತಿದ್ದಾರೆ, ಆದರೆ ಚುನಾವಣೆ ನಡೆಸುವ ವಿಚಾರ ಈ ದೇಶದ ಸಮಸ್ಯೆಯೇ ಅಲ್ಲ, ಸಮಸ್ಯೆ ಇರುವುದು ಶಿಕ್ಷಣ ಪದ್ಧತಿಯನ್ನು ಸಮರ್ಪಕವಾಗಿ ರೂಪಿಸುವುದರಲ್ಲಿ ಎಡವುತ್ತಿರುವುದರಲ್ಲಿ. ನಮಗೆ ಒಂದು ದೇಶ ಒಂದು ಚುನಾವಣೆ ಬೇಡ, ಒಂದು ದೇಶದ ಒಂದೇ ಶಿಕ್ಷಣ ಪದ್ಧತಿ ಬೇಕು. ಬಹುಜನರ ಮಕ್ಕಳಿಗೆ ಕಳಪೆ ಗುಣಮಟ್ಟದ ಶಿಕ್ಷಣ ಸಿಗುತ್ತಿದ್ದರೆ, ಶ್ರೀಮಂತರ ಮಕ್ಕಳಿಗೆ ಅತ್ಯಾಧುನಿಕ ವ್ಯವಸ್ಥೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಪದ್ಧತಿ ದೇಶದಲ್ಲಿದೆ. ಇದರಿಂದ ಬಹುಜನರ ಮಕ್ಕಳು ಉನ್ನತ ಸ್ಥಾನಕ್ಕೇರಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಪ್ರಧಾನಿ ಮೋದಿ ಅವರೇ, ನಮಗೆ ಒಂದು ದೇಶದ ಒಂದು ಚುನಾವಣೆ ಬೇಡ, ಒಂದು ದೇಶದ ಒಂದೇ ಶಿಕ್ಷಣ ಪದ್ಧತಿ ಬೇಕು ಎಂದು ನಾವು ಆಗ್ರಹಿಸಬೇಕಿದೆ ಎಂದರು.

ಮಾಜಿ ಸ್ಪೀಕರ್ ರಮೇಶ್‍ಕುಮಾರ್ ಮಾತನಾಡಿ, ಅಂಬೇಡ್ಕರ್ ಅವರ ಬಗ್ಗೆ ಯಾರಲ್ಲೂ ಪೂರ್ವಗ್ರಹ ಇರಕೂಡದು, ಏಕೆಂದರೆ ಅವರ ಜೀವನವೇ ಒಂದು ತೆರೆದ ಪುಸಕ್ತ. ಅವರ ಬಗ್ಗೆ ಕುರುಡು ಅಭಿಮಾನ ಬೇಡ, ಅವರ ಜೀವನ ಸಾಧನೆ, ಬರಹಗಳ ಅಧ್ಯನದ ಮೂಲಕ ಅವರನ್ನು ಒಪ್ಪಿ ಅಪ್ಪಿಕೊಳ್ಳಬೇಕು. ಅಂಬೇಡ್ಕರ್ ಸಂವಿಧಾನ ಈ ದೇಶದ ಬಹುದೊಡ್ಡ ಆಸ್ತಿ, ಅದರ ಮೂಲಕ ಅವರು ಗರ್ಭದಲ್ಲಿರುವ ಮಗುವಿನಿಂದ ಹಿಡಿದು ಕಟ್ಟ ಕಡೆಯ ವ್ಯಕ್ತಿಗೂ ರಕ್ಷಣೆ, ಹಕ್ಕು ನೀಡಿದ್ದಾರೆ ಎಂದರು.

ಸಮಾಜ ಕಲ್ಯಾಣ ಕಲ್ಯಾಣ ಇಲಾಖೆ ನಿವೃತ್ತ ಅಧಿಕಾರಿ, ಚಿಂತಕ ರುದ್ರಸ್ವಾಮಿ ಮಾತನಾಡಿ, ಅಂಬೇಡ್ಕರ್ ಅವರ ಪ್ರತಿಮೆ ಹೋರಾಟದ ಸಂಕೇತ. ಅವರು ಕಪ್ಪು ಜನರ ಸಂಕಷ್ಟ, ಬದುಕಿನ ಬಗ್ಗೆ ಅಪಾರ ಅಧ್ಯಯನ ಮಾಡಿದ್ದರು. 20ನೇ ಶತಮಾನದ ಸಾಮಾಜಿಕ ಕ್ರಾಂತಿಕಾರಿ ಸುಧಾರಕ ಅಂಬೇಡ್ಕರ್. ನಮ್ಮ ದೇಶದಲ್ಲಿ ಸಾಮಾಜಿಕ ಕ್ರಾಂತಿಕಾರಿಗಳು ಕಡಿಮೆ ಇದ್ದು, ಸಾಮಾಜಿಕ ಸುಧಾರಣೆಗಳ ವಿರೋಧಿಗಳು ಹೆಚ್ಚಿದ್ದಾರೆ. ಸಮಾಕಾಲೀನ ಭಾರತದಲ್ಲಿ ಯಾರನ್ನೂ ದೂಷಿಸುವ ಅಗತ್ಯವಿಲ್ಲ, ನಾವು ವಿದ್ಯಾವಂತರಾಗಬೇಕು, ವಿವೇಕಿಗಳಾಗಬೇಕು. ಸಂಘಟಿತರಾಗಬೇಕು, ಸಂವಿಧಾನಿಕ ಹಕ್ಕುಗಳ ಜಾರಿಗಾಗಿ ಹೋರಾಟ, ಅಧ್ಯಯನ ಮಾಡಬೇಕು ಎಂದರು.

ಪುತ್ಥಳಿ ನಿರ್ಮಾಣ ಸಮಿತಿ ಅಧ್ಯಕ್ಷ ಕಠಾರದಹಳ್ಳಿ ಗಣೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಮಿತಿ ಗೌರವಾಧ್ಯಕ್ಷ ನವರಾಜ್ ಉದ್ಘಾಟನಾ ಭಾಷಣ ಮಾಡಿದರು. ಮತ್ತೋರ್ವ ಗೌರವಾಧ್ಯಕ್ಷ ಯಲಗುಡಿಗೆ ಹೊನ್ನಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಜಿ ಸಚಿವರಾದ ಬಿ.ಬಿ.ನಿಂಗಯ್ಯ, ಡಾ.ಮೋಟಮ್ಮ, ಬಿಎಸ್ಪಿ ಮುಖಂಡ ರಾಧಾಕೃಷ್ಣ, ಮಾಜಿ ಸಚಿವ ಸಿ.ಟಿ.ರವಿ, ಸಮಿತಿ ಗೌರವಾಧ್ಯಕ್ಷ ಯಲಗುಡಿಗೆ ಹೊನ್ನಪ್ಪ, ಮುಖಂಡರಾದ ತುಡಕೂರು ಯೋಗಿಶ್, ಪೂರ್ಣೇಶ್, ಹೆಡದಾಳು ಕುಮಾರ್, ಗಿರೀಶ್ ಹವಳ್ಳಿ, ಉಮೇಶ್. ಹುಣಸೇಮಕ್ಕಿ ಲಕ್ಷ್ಮಣ್, ನಾಗೇಶ್, ಕೆಂಚಯ್ಯ, ಭೀಮ್ ಆರ್ಮಿ ಗಿರೀಶ್, ಕೃಷ್ಣಮೂರ್ತಿ ಮತ್ತಿತರರಿದ್ದರು, ಚಿಂತಕ ಪುಟ್ಟರಾಜ್ ಸಂವಿಧಾನ ಪೀಠಿಕೆ ಬೋಧಿಸಿದರು. ಪುತ್ಥಳಿ ನಿರ್ಮಾಣದ ವಿಚಾರದಲ್ಲಿ ನಡೆದ ಸಂಘರ್ಷದಲ್ಲಿ ಸೆರೆಮನೆ ವಾಸ ಅನುಭವಿಸಿದ್ದ ಹೋರಾಟಗಾರರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಆಲ್ದೂರು ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಬೃಹತ್ ಜಾಗೃತಿ ಜಾಥಾ ನಡೆಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News