ಮೂಡಿಗೆರೆ | ಪೈಪ್‌ಲೈನ್ ಕತ್ತರಿಸಿ ಪೆಟ್ರೋಲ್ ಕಳ್ಳತನ: ಇಬ್ಬರ ಬಂಧನ
ಮೂಡಿಗೆರೆ : ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೋಣಿಬೀಡು ಸಮೀಪದ ಹಿರೇಶಿಗರು ಗ್ರಾಮದಲ್ಲಿ ಖಾಸಗಿ ಕಂಪನಿಯ ಪೈಪ್‌ಲೈನ್ ಕತ್ತರಿಸಿ ಪೆಟ್ರೋಲ್ ಕಳ್ಳತನ ಮಾಡಿರುವ ಘಟನೆ ನಡೆದಿದೆ.
ಈ ಸಂಬಂಧ ಪ್ರಕರಣದಲ್ಲಿ ಪ್ರಮುಖ ಆರೋಪಿ ವಿಜಯ್ ಕುಮಾರ್ ಹಾಗೂ ಸಹಚರ ಹರ್ಷ ಎಂಬವರನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೋಣಿಬೀಡು ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಳ್ಳತನ ನಡೆದ ಸ್ಥಳದಲ್ಲಿ ಟಿಪ್ಪರ್ ಲಾರಿಯೊಳಗೆ ವಿಶೇಷವಾಗಿ ತಯಾರಿಸಲಾದ ಟ್ಯಾಂಕರ್ ಮೂಲಕ ಪೆಟ್ರೋಲ್ ಸಾಗಿಸಲಾಗುತ್ತಿದ್ದು, ಅದರಲ್ಲಿ ಸುಮಾರು 2 ಸಾವಿರ ಲೀಟರ್ ಪೆಟ್ರೋಲ್ ಪತ್ತೆಯಾಗಿದೆ. ಖಾಸಗಿ ಕಂಪನಿಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಆರೋಪಿಗಳು ತಪ್ಪಿಸಿಕೊಂಡಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿ ಖಾಸಗಿ ಕಂಪನಿಯ ಮ್ಯಾನೇಜರ್ ಗೋಣಿಬೀಡು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಅದನ್ನು ಆಧರಿಸಿ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ.
ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದು, ಈ ಕೃತ್ಯಕ್ಕೆ ಸಂಬಂಧಪಟ್ಟ ಇನ್ನಿತರ ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ. ಪೆಟ್ರೋಲ್ ಸಾಗಣೆಗಾಗಿ ಬಳಸಲಾಗಿದ್ದ ವಾಹನ ಹಾಗೂ ಪೆಟ್ರೋಲ್ ಅನ್ನು ವಶಪಡಿಸಿಕೊಂಡಿದ್ದಾರೆ.