ಮೂಡಿಗೆರೆ | ಧಾರಾಕಾರ ಮಳೆ: ಒಂದು ಗಂಟೆ ಅಂತರದಲ್ಲಿ ನದಿಗೆ ಬಿದ್ದ ಎರಡು ಕಾರುಗಳು
Update: 2025-05-25 11:56 IST
ಮೂಡಿಗೆರೆ: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಧಾರಾಕಾರ ಮಳೆ ಮುಂದುವರಿದಿದೆ. ಮೂಡಿಗೆರೆಯಲ್ಲಿ ಭಾರೀ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 73ರಲ್ಲಿ ಒಂದು ಗಂಟೆಗೆ ಅಂತರದಲ್ಲಿ ಎರಡು ಕಾರುಗಳು ಚಾಲಕರ ನಿಯಂತ್ರಣ ತಪ್ಪಿ ನದಿಗೆ ಬಿದ್ದಿರುವ ಘಟನೆ ನಡೆದಿದೆ.
ಮೂಡಿಗೆರೆ ತಾಲೂಕಿನಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಗೆ ಒಂದರ ಹಿಂದೆ ಒಂದು ಅವಾಂತರ ಸೃಷ್ಟಿಯಾಗುತ್ತಿದೆ. ಮೂಡಿಗೆರೆಯಿಂದ ಕೊಟ್ಟಿಗೆಹಾರ ಸಂಪರ್ಕಿಸುವ ಬಣಕಲ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಹೇಮಾವತಿ ನದಿಗೆ ಬಿದ್ದಿದ್ದು, ಮತ್ತೊಂದು ಕಾರು ರಾಮಣ್ಣನ ಗಂಡಿ ಬಳಿ ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದಿದೆ.
ಸದ್ಯ ಹಗ್ಗ ಕಟ್ಟಿ ಹಳ್ಳಕ್ಕೆ ಇಳಿದು ಕಾರಿನಲ್ಲಿದ್ದವರ ರಕ್ಷಣೆ ಮಾಡಲಾಗಿದೆ. ಗಾಯಾಳುಗಳನ್ನು ಬಣಕಲ್ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.