×
Ad

ಮೂಡಿಗೆರೆ | ಪಶ್ಚಿಮ ಘಟ್ಟದ ನಿಷೇಧಿತ ಅರಣ್ಯ ಪ್ರದೇಶದಲ್ಲಿ ಟ್ರೆಕ್ಕಿಂಗ್ : 103 ಪ್ರವಾಸಿಗರು ಪೊಲೀಸರ ವಶಕ್ಕೆ

Update: 2025-07-26 17:31 IST

ಮೂಡಿಗೆರೆ: ಪಶ್ಚಿಮ ಘಟ್ಟದ ನಿಷೇಧಿತ ಅರಣ್ಯ ಪ್ರದೇಶವಾದ ಬಿದಿರುತಳದಲ್ಲಿ ಅನುಮತಿ ಇಲ್ಲದೆ ಟ್ರೆಕ್ಕಿಂಗ್ ನಡೆಸುತ್ತಿದ್ದ 103 ಮಂದಿ ಪ್ರವಾಸಿಗರನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಶನಿವಾರ ನಡೆದಿದೆ.

ಮೂಡಿಗೆರೆ ತಾಲ್ಲೂಕಿನ ಚಾರ್ಮಾಡಿ ಘಾಟಿಯ ಆಳವಾದ ಕಾಡುಗಳಲ್ಲಿ ನಡೆದುಹೋಗುತ್ತಿದ್ದ ಈ ಟ್ರೆಕ್ಕಿಂಗ್ ಕಾರ್ಯಕ್ರಮವು ಅರಣ್ಯ ಕಾಯ್ದೆಗಳಿಗೆ ಉಲ್ಲಂಘನೆಯಾಗಿದ್ದು, ಬಣಕಲ್ ಮತ್ತು ಬಾಳೂರು ಪೊಲೀಸ್ ಠಾಣೆಗಳ ಪೊಲೀಸರು ಟ್ರೆಕ್ಕಿಂಗ್ ನಡೆಸುತ್ತಿದ್ದವರನ್ನು ತಡೆದಿದ್ದಾರೆ. ಬಣಕಲ್ ಪಿಎಸ್‌ಐ ರೇಣುಕಾ ಹಾಗೂ ಬಾಳೂರು ಪಿಎಸ್‌ಐ ದಿಲೀಪ್ ಕುಮಾರ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಎಲ್ಲಾ ಪ್ರವಾಸಿಗರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.

ಎರಡು ಪ್ರವಾಸಿ ಬಸ್ಸುಗಳು ಮತ್ತು ಎರಡು ಪಿಕಪ್ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಟ್ರೆಕ್ಕಿಂಗ್‌ನಲ್ಲಿ ಭಾಗವಹಿಸಿದ್ದವರು ಬೆಂಗಳೂರು ಮೂಲದ ಪ್ರಮುಖ ಐಟಿ ಕಂಪನಿಯ ಉದ್ಯೋಗಿಗಳು ಎಂದು ಮೂಲಗಳು ತಿಳಿಸಿವೆ.

ಪ್ರವಾಸಿಗರನ್ನು ನಿಷೇಧಿತ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದು ಸ್ಥಳೀಯ ವ್ಯಕ್ತಿಯೊಬ್ಬ ಎಂಬ ಮಾಹಿತಿ ಲಭ್ಯವಾಗಿದೆ. ಅರಣ್ಯ ಇಲಾಖೆಯ ಪೂರ್ವಾನುಮತಿ ಇಲ್ಲದೆ, ನಿಷೇಧಿತ ಪ್ರದೇಶದಲ್ಲಿ ಪ್ರವೇಶಿಸುವುದು ಅರಣ್ಯ ಕಾಯ್ದೆಯ ಉಲ್ಲಂಘನೆ ಆಗಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News