ಮೂಡಿಗೆರೆ : ಮಹಿಳೆ ಅನುಮಾನಾಸ್ಪದ ಮೃತ್ಯು ಪ್ರಕರಣ; ಮರಣೋತ್ತರ ಪರೀಕ್ಷೆಯಲ್ಲಿ ಹೃದಯಾಘಾತ ದೃಢ
ಲಲಿತಾ
ಚಿಕ್ಕಮಗಳೂರು: ಹೃದಯಾಘಾತದಿಂದ ಮನೆಯಲ್ಲೇ ಗೃಹಿಣಿಯೊಬ್ಬರು ಮೃತಪಟ್ಟ ಘಟನೆ ಮೂಡಿಗೆರೆ ತಾಲೂಕಿನ ಮುತ್ತಿಗೆಪುರ ಗ್ರಾಮದಲ್ಲಿ ನಡೆದಿದೆ.
ಲಲಿತಾ (50) ಮೃತ ಮಹಿಳೆ. ಮನೆಯಲ್ಲಿ ಒಂಟಿಯಾಗಿದ್ದ ವೇಳೆ ಗೃಹಿಣಿ ಲಲಿತಾಗೆ ಹೃದಯಾಘಾತವಾಗಿದೆ ಎನ್ನಲಾಗಿದ್ದು, ಜುಲೈ 12 ರ ಬೆಳಗ್ಗೆ ಮನೆಯೊಳಗೆ ಬಾಗಿಲ ಬಳಿ ಲಲಿತಾ ಅವರ ಮೃತ ದೇಹ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಪಕ್ಕದ ಮನೆಯವರು ಮೃತ ದೇಹ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಟೈಲರಿಂಗ್ ಜೊತೆ ಕಾರು ಚಾಲಕನಾಗಿದ್ದ ಲಲಿತಾ ಅವರ ಪತಿ ಗೋಪಾಲ್ ಕಾರು ಬಾಡಿಗೆ ಗಾಗಿ ರಾತ್ರಿ ಮನೆಯಿಂದ ಹೋಗಿದ್ದರು. ಈ ಮಧ್ಯೆ ಗೋಪಾಲ್ ಹತ್ಯೆ ಮಾಡಿರುವುದಾಗಿ ಆರೋಪಿಸಿದ್ದ ಲಲಿತಾ ಅವರ ಪೋಷಕರು ಅನುಮಾನಾಸ್ಪದ ಸಾವು ಎಂದು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಗೋಪಾಲ್ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಆದರೆ ಚಿಕ್ಕಮಗಳೂರು ಮಲ್ಲೇಗೌಡ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ನಡೆಸಿದ ಮರಣೋತ್ತರ ಪರೀಕ್ಷೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವರದಿ ಬಂದಿದೆ.