×
Ad

ನಮ್ಮ ಸರ್ಕಾರ ದೇವರು ಮತ್ತು ಧರ್ಮವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದಿಲ್ಲ: ಸಚಿವ ರಾಮಲಿಂಗಾರೆಡ್ಡಿ

Update: 2025-09-25 00:16 IST

ಕಡೂರು: ದೇವರು ಮತ್ತು ಧರ್ಮವನ್ನು ರಾಜಕೀಯವಾಗಿ ಬಳಸಿಕೊಂಡು ಕೆಲಸವನ್ನೇ ಮಾಡದ ಬಿಜೆಪಿಯವರಿಗಿಂತ ಹೆಚ್ಚು ಧರ್ಮದ ಕಾರ್ಯವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಕಡೂರು ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದಲ್ಲಿ ಬುಧವಾರ ನೂತನ ಬಸ್ ನಿಲ್ದಾಣದ ನಿರ್ಮಾಣಕಾರ್ಯಕ್ಕೆ ಭೂಮಿಪೂಜೆ ಹಾಗೂ ವಸತಿ ಗೃಹಗಳ ಉದ್ಘಾಟನೆ ಕಾರ್ಯ ನೆರವೇರಿಸಿ ಅವರು ಮಾತನಾಡಿದರು.

ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ಶಕ್ತಿ ಯೋಜನೆ ಪ್ರಮುಖವಾದುದು. 19-23 ರ ತನಕ ಸಂಸ್ಥೆಯಲ್ಲಿ ಒಂದೇ ಒಂದು ಬಸ್ ಖರೀದಿಯಾಗಿರಲಿಲ್ಲ. ನೇಮಕಾತಿ ನಡೆದಿರಲಿಲ್ಲ. ಅವೆಲ್ಲ ಅಡೆತಡೆಗಳನ್ನು ನಿವಾರಿಸಿ ಸಾರಿಗೆ ಸಂಸ್ಥೆಯನ್ನು ಸಶಕ್ತಗೊಳಿಸಿದ್ದೇವೆ. ಹೊಸದಾಗಿ ಬಸ್ ಖರೀದಿ ಪ್ರಕ್ರಿಯೆ ನಡೆಯುತ್ತಿದ್ದು, ಕಡೂರು ಬಸ್ ಡಿಪೋಗೆ ಅಗತ್ಯವಿರುವ ಬಸ್ ಗಳನ್ನು ಒದಗಿಸಲಾಗುತ್ತದೆ ಎಂದರು.

ಮುಜರಾಯಿ ಇಲಾಖೆಯ ಮೂಲಕ ಹಿಂದೆಂದಿಗಿಂತಲೂ ಹೆಚ್ಚು ಅನುದಾನವನ್ನು ಮುಜರಾಯಿ ದೇವಸ್ಥಾನಗಳಿಗೆ ಒದಗಿಸಲಾಗಿದೆ. ನಮ್ಮ ಸರ್ಕಾರ ದೇವರು ಮತ್ತು ಧರ್ಮವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದಿಲ್ಲ. ಆ ಕೆಲಸ ಬಿಜೆಪಿಯವರದು. ಹಾಗೆ ಬಳಸಿಕೊಂಡೂ ಕೆಲಸ ಮಾಡಲಿಲ್ಲ. ಆದರೆ ಕಾಂಗ್ರೆಸ್ ಸರ್ಕಾರ ಯಾವುದೇ ತಾರತಮ್ಯ- ರಾಜಕೀಯವಿಲ್ಲದೆ ಧರ್ಮದ ದಾರಿಯಲ್ಲೆ ಕಾರ್ಯನಿರ್ವಹಿಸುತ್ತಿದೆ ಎಂದು ಭರವಸೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ಎಸ್.ಆನಂದ್ ಮಾತನಾಡಿ,ಸುಸಜ್ಜಿತವಾದ ಬಸ್ ನಿಲ್ದಾಣ ನಿರ್ಮಾಣವಾಗಬೇಕೆಂಬ ಕನಸು ನನ್ನದಾಗಿತ್ತು. ಈಗಿರುವ ಬಸ್ ನಿಲ್ದಾಣ 40 ವರ್ಷಕ್ಕೂ ಹೆಚ್ಚು ಹಳೆಯದಾಗಿದ್ದರಿಂದ ಹಾಗೂ ಹಲವಾರು ಕೊರತೆ ಇದ್ದುದನ್ನು ಮನಗಂಡು ಆಧುನಿಕ ಸೌಲಭ್ಯಗಳನ್ನೊಳಗೊಂಡ ಹೊಸ ನಿಲ್ದಾಣ ನಿರ್ಮಾಣ ಮಾಡುವಂತೆ ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದೆ. ಇದಕ್ಕೆ ಸ್ಪಂದಿಸಿದ ಸರ್ಕಾರ ಸುಮಾರು 12 ಕೋಟಿ ವೆಚ್ಚದಲ್ಲಿ ಕಡೂರಿನ ನೂತನ ಬಸ್ ನಿಲ್ದಾಣ ನಿರ್ಮಾಣಕ್ಕೆ ಮಂಜೂರಾತಿ ನೀಡಿದ್ದು, ಮೊದಲ ಹಂತದಲ್ಲಿ 5.98 ಕೋಟಿ ವೆಚ್ಚದ ಬಸ್ ನಿಲ್ದಾಣ ಕಾಮಗಾರಿಗೆ ಚಾಲನೆ ದೊರೆತಿದೆ. ಇದಕ್ಕಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದರು.

ಕಡೂರು ಬಸ್ ಡಿಪೋಗೆ ಇನ್ನೂ 30 ಬಸ್ ಗಳು ಅವಶ್ಯಕತೆಯಿದೆ. ಗ್ರಾಮೀಣ ಭಾಗದಲ್ಲಿ ಹೆಚ್ಚು ಅಗತ್ಯವಿರುವುದರಿಂದ ಈ ಬೇಡಿಕೆಯನ್ನು ಈಡೇರಿಸಬೇಕೆಂದು ಮನವಿ‌ ಮಾಡಿದರು.

ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ತಾಲ್ಲೂಕಿನಲ್ಲಿ ಸಂಪರ್ಕ ವ್ಯವಸ್ಥೆ ಸುಗಮವಾಗಲು ಶಾಸಕರು ಶ್ರಮಿಸುತ್ತಿದ್ದಾರೆ.ಪ್ರಸಕ್ತ ವರ್ಷ ಮಳೆ ಕಡಿಮೆಯಾಗಿರುವುದರಿಂದ ಒಂದಿಷ್ಟು ಸಂಕಷ್ಟ ಎದುರಾಗಿದೆ. ಹಾಗಾಗಿ ಕಡೂರು ತಾಲ್ಲೂಕಿಗೆ ಹೆಚ್ಚು ಅನುದಾನ ನೀಡಲು ಸರ್ಕಾರ ಮುಂದಾಗಬೇಕಿದೆ ಎಂದರು.

ಸಂಸದ ಶ್ರೇಯಸ್ ಎಂ.ಪಟೇಲ್, ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಆಸಂದಿ ಕಲ್ಲೇಶ್,ಉಪಾಧ್ಯಕ್ಷ ಬಾಸೂರು ಚಂದ್ರಮೌಳಿ, ಮುಖಂಡರಾದ ಕಂಸಾಗರ ಸೋಮಶೇಖರ್,

ಸಾರಿಗೆ ನಿಗಮದ ಐಟಿಬಿಟಿ ವಿಭಾಗದ ನಿರ್ದೇಶಕ ಇಬ್ರಾಹಿಂ ಮೈಗೂರು, ಪುರಸಭೆ ಸದಸ್ಯರು ಇದ್ದರು.

ರಾಜ್ಯದಾದ್ಯಂತ ಸಮೃದ್ಧ ಮಳೆಯಾಗಿದ್ದರೂ ಕಡೂರು ತಾಲ್ಲೂಕಿನಲ್ಲಿ ಮಳೆ ಕೊರೆತೆಯಿದೆ ಎಂದರೆ ಯಾರೂ ನಂಬಲು ಸಾಧ್ಯವಿಲ್ಲದಂತ ವಿಚಿತ್ರ ಪರಿಸ್ಥಿತಿ ನಮ್ಮದಾಗಿದೆ. ಆದರೂ ಸಾಧ್ಯವಿರುವೆಡೆಯಲ್ಲೆಲ್ಲಾ ಪ್ರಯತ್ನಿಸಿ ಅನುದಾನ ತರುವ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದೇನೆ.

ಒಳ್ಳೆಯ ಸೌಲಭ್ಯಗಳನ್ನು ನೀಡುವ ರಾಜ್ಯ ಸರ್ಕಾರದ ಯಾವುದೇ ಕಾರ್ಯಗಳನ್ನು ವಿರೋಧ ಪಕ್ಷಗಳು ಟೀಕಿಸುತ್ತವೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಬಹುಶಃ ಐದು ವರ್ಷಗಳಲ್ಲಿ ನೀಡದಷ್ಟು ಹಣವನ್ನು ಎರಡು ವರ್ಷದಲ್ಲೆ ನೀಡಿದ್ದೇವೆ. ಕಡೂರು ತಾಲ್ಲೂಕು ಒಂದರಲ್ಲೆ 13 ಕೋಟಿ ಹಣ ಮಂಜೂರಾಗಿರುವುದನ್ನು ಗಮನಿಸಬೇಕು. 135 ಕೋಟಿ ಹಣ ಶಿಕ್ಷಣ ಕ್ಷೇತ್ರಕ್ಕೆ ಮಂಜೂರಾಗಿದೆ. ಹಿಂದಿನ ಅವಧಿಯಲ್ಲಿ ಆದ ಕೆಲಸ ಮತ್ತು ಬೀಗಿನ ಅವಧಿಯಲ್ಲಿ ಬಂದಿರುವ ಅನುದಾನದ ಬಗ್ಗೆ ಚರ್ಚೆಯಾಗಲಿ. ಕೇವಲ ರಾಜಕೀಯಕ್ಕಾಗಿ ಧರ್ಮವನ್ನು ಬಳಸಿಕೊಳ್ಳುವವವರ ಟೀಕೆಗಳಿಗೆ ಗಮನ ಹರಿಸದೆ ಕೇವಲ ಅಭಿವೃದ್ಧಿಯತ್ತ ಮಾತ್ರ ನಮ್ಮ ಗಮನ. ಮಗುವನ್ನು ಚಿವುಟಿ ತೊಟ್ಟಿಲು ತೂಗುವ ಜಾಯಮಾನ ಅವರದು. ಅದರ ಅಗತ್ಯ ನಮಗಿಲ್ಲ. ನಿರುದ್ಯೋಗ ನಿವಾರಣೆಯ ನಿಟ್ಟಿನಲ್ಲಿ ಈಗಾಗಲೇ ಗಾರ್ಮೆಂಟ್ಸ್ ಪ್ಯಾಕ್ಟರಿ ಸಿದ್ದವಾಗುತ್ತಿದೆ. ಇದರ ಜೊತೆ ಇನ್ನೂ ಒಂದೆರಡು ಕಾರ್ಖಾನೆಗಳನ್ನು ಆರಂಭಿಸಲು ಚಿಂತನೆ ನಡೆಸಿ ಕಾರ್ಯನಿರತನಾಗಿದ್ದೇನೆ.

- ಕೆ.ಎಸ್.ಆನಂದ್, ಶಾಸಕ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News