ತರೀಕೆರೆ|ಜಾಮೀನಿನ ಮೇಲೆ ಹೊರ ಬಂದಿದ್ದ ಯುವಕನ ಹತ್ಯೆ ಪ್ರಕರಣ: ಅಳಿಯ ಸಹಿತ ಇಬ್ಬರ ಬಂಧನ
ಸಹೋದರಿಯ ಹತ್ಯೆಗೆ ಪ್ರತೀಕಾರ!
ಚರಣ್
ಚಿಕ್ಕಮಗಳೂರು: ಸಹೋದರಿಯನ್ನು ಹತ್ಯೆ ಮಾಡಿದ್ದ ದ್ವೇಷಕ್ಕೆ ಜೈಲಿನಿಂದ ಜಾಮೀನಿನ ಮೇಲೆ ಊರಿಗೆ ಬಂದಿದ್ದ ಬಾವನನ್ನು ವ್ಯಕ್ತಿಯೋರ್ವ ಸ್ನೇಹಿತನೊಂದಿಗೆ ಸೇರಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಲಕ್ಕವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ ನಡೆದಿರುವುದಾಗಿ ವರದಿಯಾಗಿದೆ.
ತರೀಕೆರೆ ತಾಲೂಕಿನ ಹಿರೇಕಲ್ಲುಕುಚ್ಚಿ ಗ್ರಾಮದ ಚರಣ್ (31) ಹತ್ಯೆಯಾದ ವ್ಯಕ್ತಿಯಾಗಿದ್ದು, ಸಂತೋಷ್ ಹಾಗೂ ಸಚಿನ್ ನಾಯಕ್ ಹತ್ಯೆ ಮಾಡಿದ ಆರೋಪಿಗಳು ಎಂದು ತಿಳಿದು ಬಂದಿದೆ. ಲಕ್ಕವಳ್ಳಿ ಪೊಲೀಸರು ರಾತ್ರಿ ವೇಳೆ ನಡೆಸಿದ ಕ್ಷಿಪ್ರ ಕಾರ್ಯಾಚರಣೆ ವೇಳೆ ಇಬ್ಬರೂ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಘಟನೆ ವಿವರ:
ಹತ್ಯೆಯಾದ ಚರಣ್ ಕಳೆದ ವರ್ಷ ಸಂತೋಷ್‌ನ ಸಹೋದರಿಯನ್ನು ವಿವಾಹವಾಗಿದ್ದನು. ಬಳಿಕ ದಂಪತಿ ನಡುವೆ ಜಗಳ ನಡೆದು ಚರಣ್ ತನ್ನ ಪತ್ನಿಯನ್ನೇ ಹತ್ಯೆ ಮಾಡಿ ಜೈಲು ಸೇರಿದ್ದ. ಇತ್ತೀಚೆಗೆ ಜಾಮೀನಿನ ಮೇಲೆ ಹೊರ ಬಂದಿದ್ದ ಚರಣ್ ಕೆಲ ದಿನಗಳ ಕಾಲ ಬೆಂಗಳೂರಿನಲ್ಲಿ ನೆಲೆಸಿದ್ದು, ಇತ್ತೀಚೆಗೆ ಊರಿಗೆ ಬಂದಿದ್ದ ಎನ್ನಲಾಗಿದೆ.
ಈ ಸುದ್ದಿ ತಿಳಿದ ಚರಣ್ ಪತ್ನಿಯ ಅಣ್ಣ ಸಂತೋಷ್ ತನ್ನ ಸಹೋದರಿಯನ್ನು ಹತ್ಯೆ ಮಾಡಿದ್ದ ದ್ವೇಷದಿಂದ ಚರಣ್‌ನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಎನ್ನಲಾಗಿದೆ. ಅದರಂತೆ ಆ.8ರಂದು ರಾತ್ರಿ ತನ್ನ ಸ್ನೇಹಿತ ಸಚಿನ್ ನಾಯ್ಕ್ ಎಂಬಾತನೊಂದಿಗೆ ಸೇರಿ ಚರಣ್‌ನನ್ನು ಹಿರೇಕಲ್ಲು ಕುಚ್ಚಿ ಗ್ರಾಮದ ರಸ್ತೆಯಲ್ಲಿ ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಘಟನೆ ಬಳಿಕ ಇಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದು, ಸುದ್ದಿ ತಿಳಿದ ಲಕ್ಕವಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಆರೋಪಿಗಳ ಪತ್ತೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ತರೀಕೆರೆ ಡಿವೈಎಸ್ಪಿ ನೇತೃತ್ವದಲ್ಲಿ ಪೊಲೀಸರ ಎರಡು ತಂಡಗಳನ್ನು ನೇಮಿಸಿದ್ದರು. ಈ ತಂಡಗಳು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಚರಣ್‌ನನ್ನು ಹತ್ಯೆ ಮಾಡಿದ್ದ ಸಂತೋಷ್ ಹಾಗೂ ಆತನ ಸ್ನೇಹಿತನನ್ನು ಬಂಧಿಸಿದ್ದಾರೆಂದು ತಿಳಿದು ಬಂದಿದೆ.